ಬೆಳಗಾವಿ: ಎಲ್ಲ ಸರಿ ಇದ್ದಿದ್ದರೆ ಇನ್ನು ಎಂಟೇ ದಿನಗಳಲ್ಲಿ ಕನಸಗೇರಿಯ ಆ ಸೇನಾಯೋಧ ಸಪ್ತಪದಿ ತುಳಿಯಬೇಕಿತ್ತು. ಆದರೆ ಮದುವೆಯ ಮೆರವಣಿಗೆಯ ಬದಲು ಗ್ರಾಮದಲ್ಲಿ ಶವ ಮೆರವಣಿಗೆ ನಡೆಯುವಂತಾಗಿದೆ.
ಮದುವೆಗೆಂದು ಸ್ವಗ್ರಾಮಕ್ಕೆ ಬರುತ್ತಿದ್ದ ಯೋಧ ರೈಲಿನಿಂದ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕನಸಗೇರಿ ಗ್ರಾಮದ ಯೋಧ ಕಾಶಿನಾಥ ಶಿಂಧಿಗಾರ (28) ರೈಲಿನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕಳೆದ 8 ವರ್ಷಗಳಿಂದ ಇವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಪಂಜಾಬ್‌ನಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಲೂಧಿಯಾನ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಯೋಧನ ಸಾವಿನಿಂದ ಸ್ವಗ್ರಾಮ ಕನಸಗೇರಿಯಲ್ಲಿ ದುಃಖ ಮಡುಗಟ್ಟಿದೆ. ಇಂದು ಮುಂಜಾನೆ ಸ್ವಗ್ರಾಮ ಕನಸಗೇರಿಗೆ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ಕನಸಗೇರಿಯ ಪ್ರಮುಖ ಬೀದಿಗಳಲ್ಲಿ ಯೋಧನ ಅಂತಿಮ ಯಾತ್ರೆ ನಡೆಯಿತು. ಮದುವೆ ಮಾಡಿಕೊಂಡು ಹೆಂಡತಿಯೊಂದಿಗೆ ಮೆರವಣಿಗೆ ಮಾಡಿಕೊಳ್ಳಬೇಕಿದ್ದ ಯೋಧನ ಶವ ಮೆರವಣಿಗೆ ಊರಿನ ಬೀದಿಗಳಲ್ಲಿ ನಡೆದದ್ದು ಊರಿನ ಜನತೆಯಲ್ಲಿ ಅಪಾರ ಶೋಕ ಉಂಟುಮಾಡಿದೆ.
ಸೈನ್ಯದ ರೂಢಿಯಂತೆ ಅಂತಿಮ ನಮನಗಳನ್ನು ಸಲ್ಲಿಸಿದ ಬಳಿಕ ಬಂಧುಗಳಿಗೆ ಶವವನ್ನು ಒಪ್ಪಿಸಲಾಗಿದ್ದು, ಸಮುದಾಯದ ಸಂಪ್ರದಾಯದಂತೆ ಕುಟುಂಬದ ಜಮೀನಿನಲ್ಲಿ ಅಂತಿಮ ವಿಧಿವಿಧಾನಗಳು ಹಾಗೂ ಶವಸಂಸ್ಕಾರ ನಡೆಯಿತು. ಮೃತ ಯೋಧ ಕಾಶಿನಾಥನಿಗೆ ಮೂವರು ಸಹೋದರರು, ತಂದೆ, ತಾಯಿ ಇದ್ದಾರೆ.