Site icon Vistara News

Bellary News | ಅನಧಿಕೃತ ಹೋರ್ಡಿಂಗ್ಸ್ ತೆರವು,‌ ಬೀದಿಗೆ ಇಳಿದ ಪಾಲಿಕೆ ಸದಸ್ಯರು, ಅಧಿಕಾರಿಗಳ ಸಾಥ್

Unauthorized hoardings mahanagara palike

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ಆದಾಯ ಕತ್ತರಿಗೆ ಕಾರಣವಾಗುತ್ತಿದ್ದ ಅನಧಿಕೃತ ಹೋರ್ಡಿಂಗ್ಸ್ (ಜಾಹೀರಾತು ಫಲಕ) ತೆರವಿಗೆ ಸ್ವತಃ ಪಾಲಿಕೆಯ ಸದಸ್ಯರೇ ಇಂದು ಬುಧವಾರ (ಡಿ.೧೪) ಬೀದಿಗೆ ಇಳಿದು ಯಾವುದೇ ಪ್ರಭಾವಕ್ಕೆ ಒಳಗಾಗದೆ ತೆರವು ಕಾರ್ಯಾಚರಣೆ ನಡೆಸಿದರು. ಇದಕ್ಕೆ ಪಾಲಿಕೆಯ ಅಧಿಕಾರಿಗಳು ಸಾಥ್ ನೀಡಿದರು.

ಕಳೆದ ಹಲವು ವರ್ಷಗಳಿಂದ ಪಾಲಿಕೆಯಿಂದ ಯಾವುದೇ ಪರವಾನಗಿ ಇಲ್ಲದೆ ಹೋರ್ಡಿಂಗ್ಸ್ ಅಳವಡಿಸಿದ್ದರು. ಇದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿತ್ತು. ಕಳೆದ ೧೫ ದಿನಗಳಿಂದ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು ಹೋರ್ಡಿಂಗ್‌ಗಳ ಪರಿಶೀಲನಾ ಕಾರ್ಯವನ್ನು ನಡೆಸಿದ್ದರು. ಯಾವುದು ಅಧಿಕೃತ ಮತ್ತು ಅನಧಿಕೃತ ಎಂಬುದರ ಪರಿಶೀಲನೆ ನಡೆಸಿ, ಇಂದು ಕಾರ್ಯಾಚರಣೆಯ ಆರಂಭಿಸಿದರು.

೯೦ ಅನಧಿಕೃತ ಹೋರ್ಡಿಂಗ್ಸ್
ಪಾಲಿಕೆಯ ಅಧಿಕಾರಿಗಳು ಮತ್ತು ಸದಸ್ಯರು ಪರಿಶೀಲನೆಗೆ ಮುಂದಾದಾಗ ಮೇಲ್ನೋಟಕ್ಕೆ ಸುಮಾರು ೯೦ ಅನಧಿಕೃತ ಹೋರ್ಡಿಂಗ್ಸ್‌ ಅನ್ನು ಪತ್ತೆ ಹಚ್ಚಿದ್ದಾರೆ. ಇಂದು ಪಾಲಿಕೆಯ ಸದಸ್ಯರಾದ ರಾಮಾಂಜಿನೇಯಲು, ಪ್ರಭಂಜನ್‌ ಕುಮಾರ್ ಮತ್ತು ನಂದೀಶ್, ಅಧಿಕಾರಿಗಳಾದ ಹರ್ಷವರ್ಧನ್, ಕಿರಣ್ ಮತ್ತು ಶ್ರೀನಿವಾಸ್ ಅವರು ಸಂಗಮ್ ಸರ್ಕಲ್‌ ನಲ್ಲಿ ಜೆಸಿಬಿಯಿಂದ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಇಲ್ಲಿರುವ ೧೫ ಹೋರ್ಡಿಂಗ್ಸ್ ಪೈಕಿ, ೭ ಹೋರ್ಡಿಂಗ್ಸ್ ಅನಧಿಕೃತವಾಗಿ ಅಳವಡಿಸಲಾಗಿತ್ತು.

ನಾಲ್ಕೈದು ದಿನಗಳಲ್ಲಿ ತೆರವು
ಬಳ್ಳಾರಿ ಮಹಾನಗರದಲ್ಲಿ ಸುಮಾರು ೬೮೭ ಪರವಾನಗಿ ಪಡೆದ ಹೋರ್ಡಿಂಗ್ಸ್‌ ಇವೆ. ೨೦೦ಕ್ಕೂ ಹೆಚ್ಚು ಅನಧಿಕೃತ ಹೋರ್ಡಿಂಗ್ಸ್ ಇರಬಹುದೆಂದು ಅಂದಾಜಿಸಲಾಗಿದೆ. ಅನಧಿಕೃತವಾಗಿ ಹೋರ್ಡಿಂಗ್ಸ್ ಹಾಕಿರುವವರಿಗೆ ಎಚ್ಚರಿಕೆ ನೀಡಿದರೂ, ತೆರವುಗೊಳಿಸದ ಹಿನ್ನೆಲೆಯಲ್ಲಿ ಬುಧವಾರ (ಡಿ.೧೪) ಸದಸ್ಯರು ಮತ್ತು ಪಾಲಿಕೆಯ ಅಧಿಕಾರಿಗಳು ತೆರವಿಗೆ ಮುಂದಾದರು. ಮುಂದಿನ ನಾಲ್ಕೈದು ದಿನಗಳ ಒಳಗಾಗಿ ನಗರದಲ್ಲಿರುವ ಅನಧಿಕೃತ ಹೋರ್ಡಿಂಗ್ಸ್ ತೆರವು ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳು.

ಇದನ್ನೂ ಓದಿ | Arjun Tendulkar | ಅಪ್ಪನಂತೆ ಚೊಚ್ಚಲ ರಣಜಿ ಪಂದ್ಯದಲ್ಲಿ ಶತಕ ಸಿಡಿಸಿದ ಅರ್ಜುನ್​ ತೆಂಡುಲ್ಕರ್

ದಿಟ್ಟವಾದ ಕ್ರಮ
ಹಲವು ವರ್ಷಗಳಿಂದ ಅನಧಿಕೃತವಾಗಿ ಹೋರ್ಡಿಂಗ್ಸ್ ಅಳವಡಿಸಿದ್ದರೂ, ಈವರೆಗೆ ಯಾರೂ ತೆರವಿಗೆ ಮುಂದಾಗಿರಲಿಲ್ಲ. ಇದರಿಂದಾಗಿ ಪಾಲಿಕೆಯ ಲಕ್ಷಾಂತರ ರೂ. ಆದಾಯಕ್ಕೆ ಕತ್ತರಿ ಬೀಳುವಂತಾಗಿತ್ತು. ಪಾಲಿಕೆಯ ಸದಸ್ಯರು ಮತ್ತು ಅಧಿಕಾರಿಗಳ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅನಧಿಕೃತ ಹೋರ್ಡಿಂಗ್ಸ್ ಬುಧವಾರ (ಡಿ.೧೪) ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ, ಅನಧಿಕೃತ ಹೋರ್ಡಿಂಗ್ಸ್‌ನಿಂದ ಪಾಲಿಕೆಗೆ ಲಕ್ಷಾಂತರ ರೂ. ಆದಾಯ ತಪ್ಪಿ ಹೋಗುತ್ತಿತ್ತು. ನಗರದಲ್ಲಿ ಅಧಿಕೃತವಾಗಿ ಸುಮಾರು ೬೮೭ ಹೋರ್ಡಿಂಗ್ಸ್ ಇವೆ. ಮೇಲ್ನೋಟಕ್ಕೆ ಸುಮಾರು ೯೦ ಅನಧಿಕೃತ ಹೋರ್ಡಿಂಗ್ಸ್ ಅಳವಡಿಸಿರುವುದು ಗುರುತಿಸಿದ್ದು, ತೆರವಿಗೆ ಮುಂದಾಗಿದ್ದೇವೆ. ಇಂದು ಸಂಗಮ್ ಸರ್ಕಲ್‌ನಲ್ಲಿ ೧೫ ಹೋರ್ಡಿಂಗ್ಸ್ ಪೈಕಿ ೭ ಅನಧಿಕೃತವಾಗಿ ಅಳವಡಿಸಿದ್ದ ಹೋರ್ಡಿಂಗ್ಸ್ ತೆರವುಗೊಳಿಸಲಾಯಿತು.
| ರಾಮಾಂಜಿನೇಯಲು, ಸದಸ್ಯರು, ಮಹಾನಗರ ಪಾಲಿಕೆ, ಬಳ್ಳಾರಿ

ಇದನ್ನೂ ಓದಿ | ಪೆನ್ನಾರ್‌ ನದಿ ನೀರು ವಿವಾದ: ನ್ಯಾಯಾಧಿಕರಣ ರಚಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ, ಕರ್ನಾಟಕಕ್ಕೆ ಹಿನ್ನಡೆ

Exit mobile version