Site icon Vistara News

Ballari News: ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿಗೆ ಆಪ್ ಬೆಂಬಲ: ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು

Aam Aadmi Party State President mukhyamantri Chandru pressmeet

ಬಳ್ಳಾರಿ: ಆಮ್ ಆದ್ಮಿ ಪಕ್ಷದ (Aam Aadmi Party) ಕೇಂದ್ರ ಸಮಿತಿ ಸೂಚನೆಯಂತೆ ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಅವರಿಗೆ ಬೆಂಬಲ ನೀಡುವುದಾಗಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಸೇವೆಯಲ್ಲಿ ಪ್ರತಾಪ ರೆಡ್ಡಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ನಗರದ ಅನೇಕ ಸಮಸ್ಯೆಗಳಿಗೆ ಈ ಹಿಂದೆ ಹೋರಾಟಗಳನ್ನು ನಡೆಸಿ, ಜನಮುಖಿಯಾಗಿದವರು. ಇವರ ಹೋರಾಟದ ಹಿನ್ನಲೆ ಹಾಗೂ ಸಮಾಜಸೇವಾ ಕಾರ್ಯವನ್ನು ಪರಿಗಣಿಸಿ, ಪಕ್ಷದ ಕೇಂದ್ರ ಸಮಿತಿ ಸೂಚನೆಯಂತೆ ನಾರಾ ಪ್ರತಾಪ ರೆಡ್ಡಿ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಶಾನ್ಯ ಪದವೀಧರ ಕ್ಷೇತ್ರದ 7 ಜಿಲ್ಲೆಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಾಪ ರೆಡ್ಡಿ ಅವರ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: A Beginner’s Guide to Working Out: ವ್ಯಾಯಾಮಕ್ಕೆ ಹೊಸಬರೇ? ನಿಮಗೆಂಥದ್ದು ಬೇಕು?

ಐಎನ್‌ಡಿಐಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಂಬಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಅನುಭವಿ ರಾಜಕೀಯ ಮುತ್ಸದ್ಧಿಯಾಗಿರುವ ಖರ್ಗೆ ಅವರಿಗೆ ಪ್ರಧಾನಮಂತ್ರಿಯಾಗುವ ಅವಕಾಶ ಸಿಗುವಂತಾಗಲಿ ಎಂದರು.

ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಂಡ ಯುವಕರಿಗೆ ಹೆಣ್ಣುನೀಡುತ್ತಿಲ್ಲ. ಹೀಗಾಗಿ ಇದಕ್ಕೆ ಸರ್ಕಾರವೇ ದಾರಿ ಹುಡುಕಬೇಕು. ರೈತರ ಮಕ್ಕಳಿಗೆ ಹೆಣ್ಣು ಕೊಡುವವರಿಗೆ ಸಬ್ಸಿಡಿ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.

ಬೆಳೆಸಾಲ ಮನ್ನಾ, ಬೆಳೆ ಪರಿಹಾರದ ಹಣಕ್ಕಾಗಿ ರೈತರು ಬರಗಾಲ ಬಯಸುತ್ತಾರೆ ಎಂದಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರ ಹೇಳಿಕೆ ಅತ್ಯಂತ ಖಂಡನೀಯವಾದದ್ದು. ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿರುವ ಪಾಟೀಲ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಅಷ್ಟೇ ಅಲ್ಲ, ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸಚಿವ ಪಾಟೀಲ್ ಪರವಾಗಿ ಮುಖ್ಯಮಂತ್ರಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: U19 World Cup: ಅಂಡರ್​ 19 ವಿಶ್ವಕಪ್​ ತಂಡಗಳ ಆಟಗಾರರ ಪಟ್ಟಿ ಪ್ರಕಟಿಸಿದ ಐಸಿಸಿ

ಈಶಾನ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪ ರೆಡ್ಡಿ ಮಾತನಾಡಿ, ಕಳೆದ ಬಾರಿ ಈಶಾನ್ಯ ಪದವೀಧರ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಕಾಂಗ್ರೆಸ್‌ನ ಚಂದ್ರಶೇಖರ ಪಾಟೀಲ್ ಅವರು ಜಿಲ್ಲೆಗೆ ಈವರೆಗೆ ದರ್ಶನ ನೀಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರು ಕಾಣಿಸಿಕೊಳ್ಳುತ್ತಾರೆ ಎಂದು ಟೀಕಿಸಿದ ಅವರು, ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ನನಗೆ ಬೆಂಬಲ ವ್ಯಕ್ತವಾಗಿದೆ. ಪಕ್ಷಾತೀತವಾಗಿ ಅನೇಕ ನಾಯಕರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಈ ವೇಳೆ ತಿಳಿಸಿದರು.

Exit mobile version