Site icon Vistara News

Ballari News: ಪ್ರಚಾರ, ಇತರೆ ಕಾರ್ಯಗಳಿಗೆ ಸುವಿಧಾ ತಂತ್ರಾಂಶದಲ್ಲಿ ಅನುಮತಿ ಕಡ್ಡಾಯ: ಡಿಸಿ

Ballari DC meeting with leaders of various political parties about Lok Sabha election

ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ 2024 ರ (Lok Sabha Election-2024) ಚುನಾವಣೆ ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮಾ.16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಸಾರ್ವಜನಿಕ ಸಭೆ, ಸಮಾರಂಭ, ರ‍್ಯಾಲಿ ನಡೆಸಲು, ಸಂಚಾರಿ ವಾಹನ, ಧ್ವನಿವರ್ಧಕ, ಹೆಲಿಕಾಪ್ಟರ್ ಹಾಗೂ ಹೆಲಿಪ್ಯಾಡ್ ಮತ್ತು ಇನ್ನಿತರೆ ನಿಯಮಗಳಿಗೆ ಸುವಿಧಾ ತಂತ್ರಾಂಶ ಮೂಲಕವೇ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ (Ballari News) ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ 2024ರ ಏಪ್ರಿಲ್ 12 ರಂದು ಶುಕ್ರವಾರ ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 20 ರಂದು ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಮೇ 07 ರಂದು ಮಂಗಳವಾರ ಮತದಾನ ದಿನ, ಜೂನ್ 04ರ ಮಂಗಳವಾರ ಮತ ಎಣಿಕೆ ಹಾಗೂ ಮೇ 06 ರಂದು ಗುರುವಾರ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಾದ ದಿನಾಂಕವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: ಮತದಾರರ ಪಟ್ಟಿಯಲ್ಲಿ ಈಗಲೂ ನಿಮ್ಮ ಹೆಸರು ಸೇರಿಸಬಹುದು; ಹೀಗೆ!

ಲೋಕಸಭೆ ಚುನಾವಣೆ ಅಂಗವಾಗಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಚುನಾವಣಾ ಆಯೋಗವು ಜಾರಿಗೊಳಿಸಿರುವ ನೀತಿ ಸಂಹಿತೆಗಳನ್ನು ರಾಜಕೀಯ ಪಕ್ಷಗಳು ತಪ್ಪದೇ ಪಾಲಿಸುವಂತೆ ಅವರು ಸೂಚನೆ ನೀಡಿದರು.

ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ತಮ್ಮ ಪಕ್ಷದ ಚಿನ್ಹೆಯ ವಾಹನ, ಫ್ಲೆಕ್ಸ್ ಹಾಗೂ ಇನ್ನಿತರೆ ರಾಜಕೀಯ ಸಂಬಂಧ ಬ್ಯಾನರ್‌ಗಳಿದ್ದಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು. ರಾಜಕೀಯ ಪಕ್ಷದವರು ಯಾವುದೇ ರ‍್ಯಾಲಿ ಮಾಡುವುದಕ್ಕೆ, ರಾಜಕೀಯ ಪಕ್ಷಗಳ ಸಭೆ, ಸಮಾರಂಭ ಆಯೋಜಿಸುವುದಕ್ಕೆ ಅನುಮತಿ ಪಡೆಯಬೇಕು ಎಂದರು.

ಇದನ್ನೂ ಓದಿ: Election Ambassabor : ಮತದಾನ ರಾಯಭಾರಿಗಳಾಗಿ ಬಿಗ್‌ ಬಾಸ್‌ ಕಾರ್ತಿಕ್‌, ನಟ ನಾಗಭೂಷಣ್‌ ಆಯ್ಕೆ

ಪ್ರಚಾರ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಸಂಸ್ಥೆ, ಸ್ಥಳಗಳನ್ನು ಬಳಸುವಂತಿಲ್ಲ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಬಾರದು. ಮದುವೆ, ಸಭೆ-ಸಮಾರಂಭಗಳಲ್ಲಿ ಮತ ಪ್ರಚಾರ ಮಾಡುವಂತಿಲ್ಲ ಎಂದು ತಿಳಿಸಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ನಿಸ್ಪಕ್ಷಪಾತ, ನ್ಯಾಯಸಮ್ಮತವಾಗಿ ನಡೆಸಲು ಚುನಾವಣೆ ಆಯೋಗದ ನಿರ್ದೇಶನದ ಅನ್ವಯ ಕಾರ್ಯಚಟುವಟಿಕೆಗಳನ್ನು ನಡೆಸಿ, ಜಿಲ್ಲಾಡಳಿತಕ್ಕೆ ಯಶಸ್ವಿ ಚುನಾವಣೆ ನಡೆಸಲು ಎಲ್ಲ ಪಕ್ಷದವರು ಸಹಕರಿಸಬೇಕು ಎಂದು ಕೋರಿದರು.

ಇದನ್ನೂ ಓದಿ: Citizenship Amendment Act : ​ 19ರಂದು ಸಿಎಎ ಜಾರಿ ವಿಚಾರ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version