Site icon Vistara News

Ballari News: ನ್ಯಾಯ ಸಮ್ಮತ, ನಿಷ್ಪಕ್ಷಪಾತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ: ಡಿಸಿ

Ballari DC Prashanth Kumar Mishra pressmeet about Lok Sabha election

ಬಳ್ಳಾರಿ: ಲೋಕಸಭೆ ಚುನಾವಣೆ-2024ರ (Lok Sabha Election-2024) ಅಂಗವಾಗಿ ಎರಡು ಹಂತದ ಚುನಾವಣೆಯು ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮಾ.16ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯು ಎರಡನೇಯ ಹಂತದಲ್ಲಿ ಮೇ 7ರಂದು ಮತದಾನ ಮತ್ತು ಜೂ.4ರಂದು ಮತಎಣಿಕೆ ನಡೆಯಲಿದ್ದು, ನ್ಯಾಯ ಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ (Ballari News) ಹೇಳಿದರು.

ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Election Ambassabor : ಮತದಾನ ರಾಯಭಾರಿಗಳಾಗಿ ಬಿಗ್‌ ಬಾಸ್‌ ಕಾರ್ತಿಕ್‌, ನಟ ನಾಗಭೂಷಣ್‌ ಆಯ್ಕೆ

ಲೋಕಸಭೆ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯಂತೆ 2024ರ ಏಪ್ರಿಲ್ 12 (ಶುಕ್ರವಾರ)ರಂದು ಅಧಿಸೂಚನೆ ಹೊರಡಿಸುವುದು. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರ ಶುಕ್ರವಾರ ಕೊನೆಯ ದಿನಾಂಕವಾಗಿದ್ದು, ಏಪ್ರಿಲ್ 20ರ ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 22ರ ಸೋಮವಾರ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಮೇ 7ರಂದು ಮತದಾನ ದಿನ, ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದು ಹೇಳಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 8 ಮತಕ್ಷೇತ್ರ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 4 ಪರಿಶಿಷ್ಟ ಪಂಗಡ ಮೀಸಲು ಮತಕ್ಷೇತ್ರಗಳು ಹಾಗೂ 2 ಪರಿಶಿಷ್ಟ ಜಾತಿ ಮೀಸಲು ಮತಕ್ಷೇತ್ರಗಳು, 2 ಸಾಮಾನ್ಯ ಮೀಸಲು ಮತಕ್ಷೇತ್ರಗಳಿವೆ ಎಂದ ಅವರು, ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1865341 ಮತದಾರರು, 920022 ಪುರುಷ ಮತದಾರರು, 945053 ಮಹಿಳೆ ಮತದಾರರು ಹಾಗೂ 266 ಇತರೆ ಅಲ್ಪಸಂಖ್ಯಾತ ಲಿಂಗತ್ವ ಮತದಾರರು ಇದ್ದಾರೆ. ಒಟ್ಟು 1972 ಮತಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.

35 ಚೆಕ್‍ಪೋಸ್ಟ್‌ಗಳು ಕಾರ್ಯನಿರ್ವಹಣೆ

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 08 ಮತಕ್ಷೇತ್ರಗಳಿಗೆ ಒಟ್ಟು 35 (ಬಳ್ಳಾರಿ ಜಿಲ್ಲೆ-24 ಮತ್ತು ವಿಜಯನಗರ ಜಿಲ್ಲೆ-11) ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯೊಳಗೆ 07, ಅಂತರ್‌ಜಿಲ್ಲಾ 04, ಅಂತರ್‌ರಾಜ್ಯ ಗಡಿಭಾಗದಲ್ಲಿ 13 ಚೆಕ್‍ಪೋಸ್ಟ್ ಹಾಕಲಾಗಿದೆ. ಪ್ರತಿ ಚೆಕ್‍ಪೋಸ್ಟ್‌ಗಳಲ್ಲಿ 03 ಎಸ್‍ಎಸ್‍ಟಿ ತಂಡದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಪ್ರತಿ ಮತಕ್ಷೇತ್ರಕ್ಕೆ ಎಫ್‍ಎಸ್‍ಟಿ ತಂಡಗಳು ಇರಲಿವೆ. ಈಗಾಗಲೇ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಿಸಿ ತಿಳಿಸಿದರು.

ತಂಡಗಳ ರಚನೆ

ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಹಲವು ತಂಡಗಳನ್ನು ರಚಿಸಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 167 ಸೆಕ್ಟರ್ ಅಧಿಕಾರಿಗಳು, 26 ಎಫ್‍ಎಸ್‍ಟಿ ತಂಡಗಳು, 30 ಎಸ್‍ಎಸ್‍ಟಿ ತಂಡಗಳು, 08 ವಿವಿಟಿ ತಂಡಗಳು, 18 ವಿಎಸ್‍ಟಿ ತಂಡಗಳು, 10 ಚುನಾವಣೆ ವೆಚ್ಚ ವೀಕ್ಷಕರು, 8 ಅಕೌಂಟಿಂಗ್ ತಂಡಗಳನ್ನು ರಚಿಸಲಾಗಿದೆ. ಅದರಂತೆ ಎಂಸಿಎಂಸಿ ತಂಡಗಳನ್ನು ಸಹ ರಚಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: Citizenship Amendment Act : ​ 19ರಂದು ಸಿಎಎ ಜಾರಿ ವಿಚಾರ ಸುಪ್ರೀಂ ಕೋರ್ಟ್​​ನಲ್ಲಿ ವಿಚಾರಣೆ

ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1409 ಪಿಆರ್‍ಒ, 2172 ಎಪಿಆರ್‍ಒ ಮತ್ತು 4344 ಜನ ಪಿಒ ಸೇರಿ ಒಟ್ಟು 9474 ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಅವರು ತಿಳಿಸಿದರು.

ಹೆಲ್ಪ್‌ಲೈನ್ ಆರಂಭ

ಚುನಾವಣಾ ಆಯೋಗದ ನಿರ್ದೇಶನದಂತೆ, ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದ್ದು, ಜಿಲ್ಲೆಯ ಎಲ್ಲಾ ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ ಮತ್ತು ಚುನಾವಣೆ ಸಂಬಂಧಿತ ಸಾರ್ವಜನಿಕರ ಕುಂದು ಕೊರತೆಗಳು ಇದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1950 ಅಥವಾ 08392-277100 ಗೆ ಕರೆ ಮಾಡಬಹುದು.

ಹೊಸದಾಗಿ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳಲು ಅವಕಾಶ

ಮತದಾರರ ನಿರಂತರ ನೋಂದಣಿ ಪ್ರಕ್ರಿಯೆಯು ಜಾರಿಯಲ್ಲಿದ್ದು, ಹೊಸದಾಗಿ ನೋಂದಾಯಿಸಕೊಳ್ಳುವ ಮತದಾರರಿಗೆ ಏಪ್ರಿಲ್‌ 09 ರವರೆಗೆ ಸ್ವೀಕರಿಸಲಾಗುವ ಅರ್ಜಿಗಳನ್ನು ಪರಿಗಣಿಸಿ ವಿಲೇವಾರಿ ಮಾಡಲಾಗುವುದು ಹಾಗೂ ತದನಂತರ ಸ್ವೀಕೃತಿಯಾಗುವ ಅರ್ಜಿಗಳನ್ನು ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಪರಿಗಣಿಸಿ ವಿಲೇ ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದರು.

ಪ್ರತಿಯೊಬ್ಬರೂ ಮತದಾನ ಹಕ್ಕನ್ನು ಚಲಾಯಿಸಿ ಸುಭದ್ರವಾದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸೂಕ್ತ ಪಾತ್ರ ವಹಿಸಬೇಕು. ಶಾಂತ ರೀತಿಯಿಂದ ಮುಕ್ತವಾಗಿ, ನ್ಯಾಯಸಮ್ಮತವಾಗಿ ಹಾಗೂ ನಿಸ್ಪಕ್ಷಪಾತವಾಗಿ ಜರುಗುವಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಕಟ್ಟುನಿಟ್ಟಾಗಿ ನಿರ್ದೇಶಿಸಲಾಗಿದೆ. ಇದಕ್ಕೆ ಎಲ್ಲಾ ರಾಜಕೀಯ ಪಕ್ಷದವರು, ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಅವರು ಕೋರಿದರು.

ಇದನ್ನೂ ಓದಿ: Gold Rate Today: ಸಿಹಿ ಸುದ್ದಿ, ಬಂಗಾರದ ಬೆಲೆಯಲ್ಲಿ ಇಳಿಕೆ; ಇಂದಿನ ದರ ಹೀಗಿದೆ ನೋಡಿ

ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ನೋಡೆಲ್ ಅಧಿಕಾರಿ ಹಾಗೂ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಸೇರಿದಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version