Site icon Vistara News

Ballari News: ಕಂಪ್ಲಿ ಸೇತುವೆ ನಿರ್ಮಿಸಲು ಆಸಕ್ತಿ ವಹಿಸದ ಕಾಂಗ್ರೆಸ್ ಸರ್ಕಾರ; ಶ್ರೀರಾಮುಲು ಆರೋಪ

Former minister B Sriramulu alleged that the Congress government is not interested in the construction of the Kampli bridge

ಕಂಪ್ಲಿ: ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು (Ballari News) ಆರೋಪಿಸಿದರು.

ಕಂಪ್ಲಿ ಕೋಟೆಯಲ್ಲಿ ತುಂಗಭದ್ರಾ ಜಲಾಶಯದ ಪ್ರವಾಹದಿಂದ ಸಮಸ್ಯೆ ಅನುಭವಿಸುತ್ತಿರುವ ನದಿ ಪಾತ್ರದ ಜನರ ಮನೆಗಳಿಗೆ ಗುರುವಾರ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಂಪ್ಲಿ ಸೇತುವೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 69 ಕೋಟಿ ರೂ. ಅನುದಾನವನ್ನು ತರುವ ಮೂಲಕ ಸೇತುವೆ ನಿರ್ಮಾಣ ವಿಚಾರಕ್ಕೆ ಜೀವ ತರುವಂತಹ ಕೆಲಸ ಮಾಡಲಾಗಿತ್ತು. ಆದರೆ ಈಗಿನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷಗಳಾಗುತ್ತಾ ಬಂದಿದ್ದರೂ ಈ ಕುರಿತು ಚಕಾರ ಎತ್ತದಿರುವುದು ಶೋಚನಿಯ. ಶಾಸಕರು, ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರ ಹಿತಾಸಕ್ತಿ ವಹಿಸಿ, ನೂತನ ಸೇತುವೆ ನಿರ್ಮಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲತೆ ಕಲ್ಪಿಸಿಕೊಡಬೇಕು ಎಂದರು.

ಇದನ್ನೂ ಓದಿ: Pralhad Joshi: ಹಸಿರು ಜಲಜನಕ ಮಿಷನ್‌ಗೆ 19744 ಕೋಟಿ ರೂ. ಮೀಸಲು; ಪ್ರಲ್ಹಾದ್‌ ಜೋಶಿ

ಕಂಪ್ಲಿ-ಸಿರುಗುಪ್ಪ ಭಾಗ ಸೇರಿ ಅಂದಾಜು 1 ಸಾವಿರ ಎಕರೆಯಷ್ಟು ಬೆಳೆ ನಷ್ಟವಾಗಿದ್ದು, ನಮ್ಮ ಭಾಗದ ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಲುಗಿ ಹೋಗಿದ್ದಾರೆ. ಪ್ರವಾಹದ ಭೀಕರತೆಯಿಂದ ನಷ್ಟಕ್ಕೊಳಗಾದ ರೈತರ ಕುರಿತು ವರದಿ ಪಡೆದು ಸರ್ಕಾರದ ಗಮನ ಸೆಳೆಯುವ ಮೂಲಕ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕಾರ್ಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕೋಟೆಯಲ್ಲಿನ ನದಿ ಪಾತ್ರದ ಜನರಿಗೆ ಕಾಳಜಿ ಕೇಂದ್ರವನ್ನು ಗಂಗಾನಗರದ ಶಾಲೆಯೊಂದರಲ್ಲಿ ತೆರೆಯಲಾಗಿದ್ದು, ನಿತ್ಯ ಅಲ್ಲಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಕೋಟೆಯ ಶಾಲೆಯಲ್ಲಿಯೇ ಕಾಳಜಿ ಕೇಂದ್ರ ಆರಂಭಿಸುವಂತೆ ಸ್ಥಳೀಯರು ಬಿ. ಶ್ರೀರಾಮುಲು ಅವರಿಗೆ ಒತ್ತಾಯಿಸಿದರು. ಸ್ಥಳದಲ್ಲಿದ್ದ ತಹಸೀಲ್ದಾರ್‌ಗೆ ಈ ಕುರಿತು ಗಮನ ಹರಿಸಿ ಸ್ಥಳೀಯರಿಗೆ ಅನುಕೂಲವಾಗುವಂತೆ ಸಮೀಪದಲ್ಲೇ ಕಾಳಜಿ ಕೇಂದ್ರ ಆರಂಭಿಸಲು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಎಲ್ಲಿ ಬೇಕೆಂದರಲ್ಲಿ ಕೊಲೆ, ಸುಲಿಗೆ, ದರೋಡೆ, ಕಳ್ಳತನ ಹಾಗೂ ಎಲ್ಲಾ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದು, ಸರ್ಕಾರ ಇದ್ದರೂ ಸತ್ತಂತಿದೆ ಎಂದು ಆರೋಪಿಸಿದ ಅವರು, ಪರಿಶಿಷ್ಟ ಪಂಗಡಗಳ ಸಮುದಾಯದ ಅಭಿವೃದ್ಧಿಗೆ ಇರಿಸಲಾದ ಅನುದಾನದ ಹಗರಣ ಹಾಗೂ ಮುಡಾ ಹಗರಣ ಸೇರಿದಂತೆ ಅನೇಕ ಹಗರಣಗಳಿಂದ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯವೆಸಗುತ್ತಿದೆ ಎಂದು ದೂರಿದರು.

ಪಾದಯಾತ್ರೆ ವಿಚಾರ ಕುರಿತು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಏನೇ ಹೇಳಿಕೆ ನೀಡಿರಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿನ ಹಗರಣದ ಹೊಣೆ ಹೊತ್ತು ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3 ರಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸರ್ಕಾರದ ವಿರುದ್ಧವಾಗಿ ಮೈಸೂರಿನಿಂದ ಬೆಂಗಳೂರಿನವರೆಗೂ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. ಸರ್ಕಾರ ಅನುವು ನೀಡಿದರು ಸರಿಯೇ ಇಲ್ಲದಿದ್ದರೂ ಸರಿಯೇ ಪಾದಯಾತ್ರೆಯಿಂದ ಹಿಂದೆ ಸರಿಯುವ ಮಾತಿಲ್ಲ. ಅಲ್ಲದೇ ವಾಲ್ಮೀಕಿ ನಿಗಮ ಹಗರಣವನ್ನು ಖಂಡಿಸಿ, ಬಳ್ಳಾರಿಯಿಂದ ಕೂಡಲಸಂಗಮದವರೆಗೂ ಪಾದಯಾತ್ರೆ ನಡೆಸುವ ಕುರಿತು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: Hosanagara News: ಹಡ್ಲುಬೈಲು ಸರ್ಕಾರಿ ಶಾಲೆಗೆ ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ

ಈ ಸಂದರ್ಭದಲ್ಲಿ ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಬಿಜೆಪಿ ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕಾ, ಕಂಪ್ಲಿ ಮಂಡಲ ಅಧ್ಯಕ್ಷ ಅಳ್ಳಳ್ಳಿ ವೀರೇಶ್, ಮುಖಂಡರಾದ ಪಿ. ಬ್ರಹ್ಮಯ್ಯ, ಬಿ.ಸಿದ್ದಪ್ಪ, ವಿ.ಎಲ್. ಬಾಬು, ಸಿ.ಆರ್. ಹನುಮಂತ, ಆರ್. ಆಂಜನೇಯ, ರಾಮಾಂಜಿನಿ, ಚಂದ್ರಕಾಂತ್ ರೆಡ್ಡಿ, ಕರಿಬಸವರಾಜ್ ಸ್ವಾಮಿ ಸೇರಿದಂತೆ ಇತರರಿದ್ದರು.

Exit mobile version