ಬಳ್ಳಾರಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಗಾಂಧಿಭವನದಲ್ಲಿ ಶುಕ್ರವಾರ ಬಳ್ಳಾರಿ ಮಹಾನಗರ ಪಾಲಿಕೆಯ (Ballari News) ಮಹಿಳಾ ಪೌರ ಕಾರ್ಮಿಕರಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು (Free Dental Checkup Camp) ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ ಮಹಾನಗರ ಪಾಲಿಕೆಯ 3ನೇ ವಾರ್ಡ್ ಸದಸ್ಯ ಎಂ.ಪ್ರಭಂಜನ್ ಕುಮಾರ್ ಅವರ ನೇತೃತ್ವದಲ್ಲಿ, ಭಾರತೀಯ ದಂತ ವೈದ್ಯರ ಸಂಘದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣಾ ಶಿಬಿರವನ್ನು ಪಾಲಿಕೆ ಮೇಯರ್ ಬಿ. ಶ್ವೇತಾ ಉದ್ಘಾಟಿಸಿ, ಬಳಿಕ ಮಾತನಾಡಿದರು.
ಶಿಬಿರದ ಆಯೋಜಕ, ಪಾಲಿಕೆ ಸದಸ್ಯ ಎಂ. ಪ್ರಭಂಜನ್ ಕುಮಾರ್ ಮಾತನಾಡಿ, ಪೌರ ಕಾರ್ಮಿಕರು ಕೇವಲ ನಗರವನ್ನು ಮಾತ್ರ ಸ್ವಚ್ಛ ಮಾಡುತ್ತಿಲ್ಲ. ಅವರ ಸ್ವಚ್ಛತಾ ಕೆಲಸದಲ್ಲಿ ನಮ್ಮೆಲ್ಲರ ಆರೋಗ್ಯವಿದೆ. ನಾವಿಂದು ಉತ್ತಮವಾಗಿ ಆರೋಗ್ಯವಾಗಿದ್ದೇವೆ ಎಂದರೆ ಅದಕ್ಕೆ ಪೌರ ಕಾರ್ಮಿಕರ ಕೊಡುಗೆ ಕಾರಣ. ಪೌರ ಕಾರ್ಮಿಕರು, ಮಹಿಳಾ ಪೌರ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು, ಸಹಾಯ, ಸಹಕಾರ ನೀಡಲು ನಾವು ಸದಾ ಸಿದ್ಧರಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Weather : ಇಂದಿನಿಂದ ಮಾರ್ಚ್ 14ರವರೆಗೆ ರಾಜ್ಯಾದ್ಯಂತ ಒಣಹವೆ ಸಾಧ್ಯತೆ
ಬಳಿಕ ನಡೆದ ದಂತ ತಪಾಸಣಾ ಶಿಬಿರದಲ್ಲಿ ಭಾರತೀಯ ದಂತ ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ. ಮಧುಸೂದನ್, ಕಾರ್ಯದರ್ಶಿ ಡಾ. ಶ್ರೀಧರ್, ಖಜಾಂಚಿ ಡಾ. ರಾಜೀವ್, ಸಂಘದ ರಾಜ್ಯಘಟಕದ ಸದಸ್ಯರಾದ ಡಾ. ಭಾವನಾ, ಡಾ. ವಾಣಿಶ್ರೀ, ಡಾ. ಶ್ವೇತಾ ಅವರು, ಮಹಿಳಾ ಪೌರ ಪೌರಕಾರ್ಮಿಕರಿಗೆ ದಂತ ತಪಾಸಣೆ ಮಾಡಿದರು. ಒಟ್ಟು 300 ಜನ ಮಹಿಳಾ ಪೌರ ಕಾರ್ಮಿಕರು ದಂತ ತಪಾಸಣೆಗೆ ಒಳಗಾದರು.
ಕಾರ್ಯಕ್ರಮದಲ್ಲಿ ಇಬ್ಬರು ಹಿರಿಯ ಪೌರ ಕಾರ್ಮಿಕ ಮಹಿಳೆಯರಿಗೆ ಗೌರವಿಸಿ, ಸನ್ಮಾನಿಸಲಾಯಿತು.
ಇದನ್ನೂ ಓದಿ: Ind vs Eng : ಗಿಲ್, ರೋಹಿತ್ ಶತಕ, ಭಾರತಕ್ಕೆ 255 ರನ್ ಮುನ್ನಡೆ
ಈ ಸಂದರ್ಭದಲ್ಲಿ ಪಾಲಿಕೆಯ ಉಪಮೇಯರ್ ಬಿ.ಜಾನಕಿ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಸದಸ್ಯರಾದ ಮಿಂಚು ಶ್ರೀನಿವಾಸ್, ಮುಖಂಡರಾದ ಬಿ.ಆರ್.ಎಲ್. ಶ್ರೀನಿವಾಸ್, ಗೋವಿಂದರಾಜುಲು ಸೇರಿ ಹಲವರು ಇದ್ದರು.