Site icon Vistara News

Ballari News: ವ್ಯಾಜ್ಯಗಳನ್ನು ತುರ್ತಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮ: ನ್ಯಾ. ಪ್ರಸನ್ನ ಬಿ. ವರಾಳೆ

The new building of the Ballari Bar Association inaugurated by Chief Justice of Karnataka High Court Prasanna B. Varale

ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಳ್ಳಾರಿ ವಕೀಲರ ಸಂಘದ ಕಟ್ಟಡವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಶನಿವಾರ ಉದ್ಘಾಟಿಸಿದರು.

ಬಳ್ಳಾರಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಳ್ಳಾರಿ ವಕೀಲರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಬಳಿಕ ಮಾತನಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು, ವ್ಯಾಜ್ಯಗಳನ್ನು ತುರ್ತಾಗಿ ಪರಿಹರಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ. ಬಳ್ಳಾರಿಯಲ್ಲಿ ನಿರ್ಮಿಸಿರುವ ನ್ಯಾಯಾಲಯದ ಸಂಕೀರ್ಣ ಒಂದೇ ಸೂರಿನಡಿಯಲ್ಲಿ ಎಲ್ಲ ಸೌಲಭ್ಯವನ್ನು ಒಳಗೊಂಡಿದೆ. ಸಾಮಾನ್ಯ ಜನರಿಗೆ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲಿ ವಕೀಲರು ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ವ್ಯಾಜ್ಯಗಳು ಇರುವ ಕಡೆ ಅಭಿವೃದ್ಧಿ ಕುಂಠಿತ ಹಾಗೂ ಅಸಾಧ್ಯವಾಗುತ್ತದೆ. ಆದ್ದರಿಂದ ನಮ್ಮ ಸರ್ಕಾರವು ವ್ಯಾಜ್ಯಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಆದರೆ ವಕೀಲರು ಈ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ICC World Cup 2023 : ದಾಖಲೆಯ ಚೇಸಿಂಗ್​ ಮೂಲಕ ಬಾಂಗ್ಲಾ ವಿರುದ್ಧ ಗೆದ್ದ ಆಸೀಸ್​

ನ್ಯಾಯಾಲಯಗಳಿಗೆ ವ್ಯಾಜ್ಯ ಪರಿಹಾರಕ್ಕಾಗಿ ಬರುವ ಸಾಮಾನ್ಯ ಜನರಿಗೂ ಸಂವಿಧಾನಾತ್ಮಾಕವಾಗಿ ಗೌರವ ಸಿಗಬೇಕಿದೆ. ಆದರೆ ಇಂದಿನ ದಿನಮಾನಗಳಲ್ಲಿ ಅದರ ಕೊರತೆ ಕಾಡುತ್ತಿದೆ. ಕಕ್ಷಿದಾರರ ಗೌರವ ಕಾಪಾಡಲು ಕಾನೂನು ಹಾಗೂ ನೀತಿ ಜಾರಿಗೊಳಸಲು ಚಿಂತನೆಗಳು ನಡೆದಿದೆ ಎಂದು ತಿಳಿಸಿದರು.

ಗ್ರಾಮ ನ್ಯಾಯಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 2008 ರಲ್ಲಿ ಕಾನೂನು ಜಾರಿಗೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರವು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆಗಿರುವ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, 58 ಎಕರೆ ಪ್ರದೇಶದಲ್ಲಿ ವಿಶಾಲವಾಗಿರುವ ಜಿಲ್ಲಾ ನ್ಯಾಯಾಲಯ ಸಂಕೀರ್ಣವೂ ಅನೇಕ ಸೌಲಭ್ಯವನ್ನು ಹೊಂದಿದೆ. ಈಗಾಗಲೇ ಇನ್ನುಳಿದ ಕಾಮಗಾರಿಗಳನ್ನು ಪೂರೈಸಲು ಸರ್ಕಾರದಿಂದ ಹೆಚ್ಚುವರಿಯಾಗಿ 21 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದನ್ನೂ ಓದಿ: Deepavali 2023: ದೀಪಾವಳಿ ಭವಿಷ್ಯ; ಯಾವ ರಾಶಿಗೆ ಯಾವ ಫಲ?

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾ ವಿಲೇಖನಾಧಿಕಾರಿ ಕೆ.ಎಸ್.ಭರತ್‍ಕುಮಾರ್, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಎಸ್.ಎಚ್.ಪುಷ್ಪಾಂಜಲಿದೇವಿ, ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಜೆ.ಎಂ.ಅನಿಲ್‍ಕುಮಾರ್, ವಕೀಲರ ಪರಿಷತ್ ಸದಸ್ಯ ಕೆ.ಕೋಟೇಶ್ವರರಾವ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಬಿ.ರವೀಂದ್ರನಾಥ್, ಲೋಕೋಪಯೋಗಿ ಇಲಾಖೆ ಈಶಾನ್ಯ ವಲಯದ ಮುಖ್ಯ ಅಭಿಯಂತರ ಜಗನ್ನಾಥ್ ಹಲಿಂಗೆ ಸೇರಿದಂತೆ ಇತರೆ ನ್ಯಾಯಾಧೀಶರು ಹಾಗೂ ವಕೀಲರು, ಇತರರು ಉಪಸ್ಥಿತರಿದ್ದರು.

Exit mobile version