Site icon Vistara News

Ballari News: ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು: ಬಿ.ಎಸ್.ಲೋಕೇಶ್ ಕುಮಾರ್

Karnataka Police 10k Run Competition

ಬಳ್ಳಾರಿ: ಯುವ ಜನತೆಯು ಮಾದಕ ವಸ್ತುಗಳಿಂದ ದೂರ ಉಳಿದು, ಸದೃಢ ದೇಹದೊಂದಿಗೆ ಉತ್ತಮ ಆರೋಗ್ಯ ಹೊಂದಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾ ನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್‌ (Ballari News) ತಿಳಿಸಿದರು.

ನಗರದ ಡಾ.‌ ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಹೈಸ್ಕೂಲ್ ಮೈದಾನದ ಆವರಣದಲ್ಲಿ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಅಂಗವಾಗಿ ಸದೃಢತೆ ಹಾಗೂ ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಪೊಲೀಸ್ 10ಕೆ ರನ್ ಓಟ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಇದನ್ನೂ ಓದಿ: Bengaluru Ring Road : ಬೆಂಗಳೂರಿನ 2 ರಿಂಗ್‌ ರೋಡ್‌ ಲೋಕಾರ್ಪಣೆ ಮಾಡಿದ ಮೋದಿ: ಏನೇನು ಲಾಭ?

ರಾಜ್ಯ ಮತ್ತು ರಾಷ್ಟ್ರವನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವ ಅಂಗವಾಗಿ ರಾಜ್ಯವ್ಯಾಪಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದ್ದು, ಯುವ ಜನತೆಯು ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೇ ಆರೋಗ್ಯಕರ ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯು ಡ್ರಗ್ಸ್ ಮುಕ್ತ ಜಿಲ್ಲೆ ಮಾಡುವ ಪಣತೊಟ್ಟಿದ್ದು, ಯುವ ಪೀಳಿಗೆಯು ಮಾದಕ ವಸ್ತುಗಳಿಗೆ ಬಲಿಯಾಗದೆ, ಅವರು ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಪ್ರಾಸ್ತಾವಿಕವಾಗಿ ಮಾತನಾಡಿ, ಯುವಜನತೆಯು ಗಾಂಜಾ, ಮದ್ಯ, ಇತರೆ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾಗದೆ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯುವ ಸಮೂಹ ಮಾದಕ ವ್ಯಸನಕ್ಕೆ ಒಳಗಾಗದೇ ಸದೃಢ ದೇಹ ಹೊಂದುವುದರ ಕಡೆ ಗಮನ ಹರಿಸಬೇಕು ಎಂದರು.

ಇದನ್ನೂ ಓದಿ: Oscars 2024: ಭಾರತೀಯ ಚಿತ್ರರಂಗದ ಖ್ಯಾತ ಕಲಾ ನಿರ್ದೇಶಕನನ್ನು ಸ್ಮರಿಸಿದ ಆಸ್ಕರ್‌ ವೇದಿಕೆ

ಕರ್ನಾಟಕ ಪೊಲೀಸ್ 10ಕೆ ಮ್ಯಾರಥಾನ್ ನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು ಸೇರಿದಂತೆ ಸುಮಾರು 1500 ಕ್ಕೂ ಹೆಚ್ಚು ಜನ ಮತ್ತು 300 ಜನ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಮಾದಕ ವಸ್ತುಗಳಿಂದ ದೂರವಿರುತ್ತೇನೆ ಎಂಬ ಪ್ರತಿಜ್ಞಾ ವಿಧಿಯನ್ನು ಸ್ವೀಕಾರ ಮಾಡುವ ಸಹಿ ಸಂಗ್ರಹ ಅಭಿಯಾನ ವಿಶೇಷವಾಗಿತ್ತು. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ವತಿಯಿಂದ ರಸ್ತೆ ನಿಯಮ ಪಾಲನೆ ಕುರಿತು ಜಾಗೃತಿ ಮೂಡಿಸುವ ವಿಡಿಯೋಗಳನ್ನು ಎಲ್ಇಡಿ ಮೂಲಕ ಪ್ರದರ್ಶಿಸಲಾಯಿತು.

ಬಹುಮಾನ ವಿಜೇತರು

ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಿದ್ದ ‘ಕರ್ನಾಟಕ ಪೊಲೀಸ್ 10ಕೆ ರನ್’ ಓಟ ಸ್ಪರ್ಧೆಯಲ್ಲಿ ವಿವಿಧ ಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪುರುಷರ ವಿಭಾಗ

ಪ್ರಥಮ ಬಹುಮಾನ – ಗಾಲಿ ರುಕ್ಮಿಣಮ್ಮ ಚೆಂಗಾರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಆರ್.ಮಹೇಶ್ (ರೂ.5000 ಮತ್ತು ಟ್ರೋಪಿ). ದ್ವಿತೀಯ ಬಹುಮಾನ – ವಿದ್ಯಾರ್ಥಿ ತಿಪ್ಪೇಶ್ ಯಾದವ್ (ರೂ.3000 ಮತ್ತು ಟ್ರೋಪಿ), ತೃತೀಯ ಬಹುಮಾನ – ವಿದ್ಯಾರ್ಥಿ ನಿತಿನ್ (ರೂ.2000 ಮತ್ತು ಟ್ರೋಪಿ).

ಮಹಿಳಾ ವಿಭಾಗ

ಪ್ರಥಮ ಬಹುಮಾನ – ಪುಪಿಲ್ ಟ್ರೀ ಶಾಲೆಯ ವಿದ್ಯಾರ್ಥಿನಿ ಗಿರಿಷ್ಮಾ (ರೂ.5000 ಮತ್ತು ಟ್ರೋಪಿ), ದ್ವಿತೀಯ ಬಹುಮಾನ – ವಿದ್ಯಾರ್ಥಿನಿ ಜಾಹೀಧ (ರೂ.3000 ಮತ್ತು ಟ್ರೋಪಿ), ತೃತೀಯ ಬಹುಮಾನ – ವಿದ್ಯಾರ್ಥಿನಿ ಆಶಾ (ರೂ.2000 ಮತ್ತು ಟ್ರೋಪಿ).

ಸಮಾಧಾನಕರ ಬಹುಮಾನ

ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಭಾಗವಹಿಸಿ ಮ್ಯಾರಥಾನ್ ಪೂರ್ಣಗೊಳಿಸಿದ ತಲಾ 12 ಸ್ಪರ್ಧಾಳುಗಳಿಗೆ (ರೂ.1000 ಮತ್ತು ಪ್ರಮಾಣ ಪತ್ರ) ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ: Virat Kohli: ಆರ್​ಸಿಬಿ ಪರ ಐಪಿಎಲ್​ನಲ್ಲಿ 16 ವರ್ಷ ಪೂರ್ತಿಗೊಳಿಸಿದ ಕಿಂಗ್​ ಕೊಹ್ಲಿ

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜಿ.ಖಲೀಲ್ ಸಾಬ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಬಳ್ಳಾರಿ ನಗರ ಡಿ.ಎಸ್.ಪಿ ಚಂದ್ರಕಾಂತ ನಂದಾರೆಡ್ಡಿ, ತೋರಣಗಲ್ಲು ವಿಭಾಗ ಡಿ.ಎಸ್.ಪಿ ಪ್ರಸಾದ್ ಗೋಖಲೆ, ಗಾಂಧಿನಗರದ ಪಿ.ಐ ಸಿದ್ದರಾಮೇಶ್ವರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂಧಿ ವರ್ಗದವರು, ವಿದ್ಯಾರ್ಥಿಗಳು, ಯುವಕರು, ಸಾರ್ವಜನಿಕರು, ಇತರರು ಉಪಸ್ಥಿತರಿದ್ದರು.

Exit mobile version