Site icon Vistara News

Ballari News: ಕಡೆಬಾಗಿಲು ಸೇತುವೆ ಮೇಲೆ ಅನಧಿಕೃತವಾಗಿ ಸಂಚರಿಸುವ ಬಸ್‌ಗಳಿಗೆ ಕಡಿವಾಣ

KKRTC MD M Rachappa visit Kampli New Busstand

ಕಂಪ್ಲಿ: ಪಟ್ಟಣದ ಹೊಸ ಬಸ್ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಸೋಮವಾರ ಭೇಟಿ ನೀಡಿ, ಪರಿಶೀಲನೆ (Ballari News) ನಡೆಸಿದರು.

ಈ ವೇಳೆ ಬಸ್ ನಿಲ್ದಾಣದ ಬಳಿ ನೆರೆದಿದ್ದ ಸಾರ್ವಜನಿಕರು, ಸಂಜೆಯ ವೇಳೆ ಬಳ್ಳಾರಿ ಮಾರ್ಗವಾಗಿ ತೆರಳುವ ಬಸ್‌ಗಳ ವ್ಯವಸ್ಥೆ ಇಲ್ಲ. ಹೊಸಪೇಟೆಯಿಂದ ಗಂಗಾವತಿ ಹಾಗೂ ಗಂಗಾವತಿಯಿಂದ ಹೊಸಪೇಟೆ ತೆರಳುವ ಬಸ್‌ಗಳು ಕಂಪ್ಲಿ ಮಾರ್ಗವಾಗಿ ತೆರಳಬೇಕು. ಆದರೆ ಬಸ್‌ಗಳು ಕಂಪ್ಲಿಯನ್ನು ಪ್ರವೇಶಿಸದೇ ಬುಕ್ಕಸಾಗರ ಬಳಿಯ ಕಡೆ ಬಾಗಿಲು ಸೇತುವೆ ಮೇಲೆ ತೆರಳುತ್ತವೆ. ಇದರಿಂದಾಗಿ ನಮ್ಮ ತಾಲೂಕಿನ ಜನತೆಗೆ ಬಹಳ ಸಮಸ್ಯೆಯಾಗಿದೆ.

ಈ ಕುರಿತು ಶಾಸಕರು, ಸಂಸದರು, ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ಕುರಿತು ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಬಸ್ ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ ಇದೆ, ಅಲ್ಲದೇ ವಿದ್ಯುತ್ ದೀಪಗಳ ಸಮಸ್ಯೆ ಇದ್ದು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಒತ್ತಾಯಿಸಿದರು.

ಇದನ್ನೂ ಓದಿ: Vijayanagara News: ವಿಕಾಸ ಬ್ಯಾಂಕ್‌ಗೆ 22.83 ಕೋಟಿ ರೂ. ಲಾಭ: ವಿಶ್ವನಾಥ ಚ.ಹಿರೇಮಠ

ಈ ಕುರಿತು ಪ್ರತಿಕ್ರಿಯಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಕಂಪ್ಲಿಯನ್ನು ಪ್ರವೇಶಿಸದೇ ಅನಧಿಕೃತವಾಗಿ ಕಡೆಬಾಗಿಲು ಸೇತುವೆ ಮೇಲೆ ತೆರಳುವ ಬಸ್‌ಗಳಿಗೆ ಕಡಿವಾಣ ಹಾಕಲಾಗುವುದು. ಕಡೆ ಬಾಗಿಲು ಹಾಗೂ ಬುಕ್ಕಸಾಗರ ಬಳಿ ಎರಡು ಚೆಕ್‌ಪೋಸ್ಟ್ ನಿರ್ಮಿಸಲಾಗುವುದು. ನಿಯಮ ಉಲ್ಲಂಘಿಸಿ ಸೇತುವೆ ಮಾರ್ಗವಾಗಿ ತೆರಳುವ ಬಸ್‌ಗಳ ಡ್ರೈವರ್ ಹಾಗೂ ಕಂಡಕ್ಟರ್ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.

ಕಂಪ್ಲಿಯಿಂದ ಬಳ್ಳಾರಿ ಹಾಗೂ ಕುರುಗೋಡು ಭಾಗಕ್ಕೆ ಕೂಡಲೇ ಬಸ್ ಸೌಲಭ್ಯ ಕಲ್ಪಿಸುವ ಕುರಿತು ಕ್ರಮ ವಹಿಸುವೆ. ಇನ್ನು ಡಿಪೋ ಆರಂಭಿಸುವ ವಿಚಾರ ಕುರಿತು ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದು ತಿಳಿಸಿದರು.

ಇನ್ನು ನಿಲ್ದಾಣದಲ್ಲಿನ ಶೌಚಾಲಯಗಳನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಲು ಹಾಗೂ ಸೂಕ್ತ ವಿದ್ಯುತ್ ದೀಪ ಅಳವಡಿಕೆ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.‌

ಇದನ್ನೂ ಓದಿ: Shivamogga News: ಜಗನ್ಮಾತೆ ಪದ್ಮಾವತಿ ದೇವಿಯ ವೈಭವದ ಮಹಾರಥೋತ್ಸವ

ಈ ಸಂದರ್ಭದಲ್ಲಿ ಬಳ್ಳಾರಿ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ ಬನ್, ಡಿಟಿಒ ಚಾಮರಾಜ್, ಮುಖ್ಯ ಅಭಿಯಂತರ ಬೋರಯ್ಯ, ಸಂಚಾರ ನಿಯಂತ್ರಕರಾದ ತಿಮ್ಮಪ್ಪ ಯಾದವ್, ಆದಿಶೇಷ ಸೇರಿದಂತೆ ಇತರರಿದ್ದರು.

Exit mobile version