Site icon Vistara News

Ballari News: ಕುಂಬಾರ ಸಮುದಾಯವು ಕಾಯಕಯೋಗಿಗಳ ಸಮುದಾಯ: ಕಲ್ಯಾಣ ಸ್ವಾಮೀಜಿ

Kumbara janajagruthi samavesha inauguration in Ballari

ಬಳ್ಳಾರಿ: ಕುಂಬಾರ ಸಮುದಾಯವು (Kumbara Community) ಕಾಯಕಯೋಗಿಗಳ ಸಮುದಾಯ, ಬದುಕಿನುದ್ದಕ್ಕೂ ತಾಳ್ಮೆ ಮತ್ತು ಸಹನೆಯನ್ನು ಮೈಗೂಡಿಸಿಕೊಂಡು ಸಮಾಜದ ಒಳಿತನ್ನು ಬಯಸುವ ವಿಶೇಷ ಸಮುದಾಯವಾಗಿದೆ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ರಾಘವಕಲಾ ಮಂದಿರದಲ್ಲಿ ನಿವೃತ್ತ ಮುಖ್ಯ ಎಂಜಿನೀಯರ್ ದಿ. ಮಲ್ಲಿಕಾರ್ಜುನಯ್ಯ ಅವರ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ 2024 ರ ದಿನದರ್ಶಿನಿ ಬಿಡುಗಡೆ, ಕುಂಬಾರ ಜನಜಾಗೃತಿ ಸಮಾವೇಶದಲ್ಲಿ ಅವರು ಸಾನಿಧ್ಯ ವಹಿಸಿ, ಮಾತನಾಡಿದರು.

ಶಕ ಪುರುಷ ಶಾಲಿವಾಹನ, ವಚನ ಪರಂಪರೆಯ ಕುಂಬಾರ ಗುಂಡಯ್ಯ, ಕೇತಲದೇವಿ, ತ್ರಿಪದಿಯ ಕವಿ ಸರ್ವಜ್ಞ, ಈ ಸಮುದಾಯದ ಅನರ್ಘ್ಯ ರತ್ನಗಳು. ಕುಂಬಾರ ಗುಂಡಯ್ಯನ ಕಾಯಕ ತತ್ವ, ಸರ್ವಜ್ಞನ ತ್ರಿಪದಿಗಳು, ಈ ಭೂಮಂಡಲ ಇರುವವರೆಗೂ, ಈ ನಾಡಿಗೆ ಬೆಳಕಿನ ಸಂಕೇತವಾಗಿಯೇ ಇರುತ್ತವೆ ಎಂದು ಸ್ಮರಿಸಿದರು.

ಇದನ್ನೂ ಓದಿ: ಕೈಗಾರಿಕಾ ಪಾರ್ಕ್‌ಗಳ ಸ್ಥಾಪನೆಯಿಂದ ಹೂಡಿಕೆ ಹೆಚ್ಚಳ: ಸಜ್ಜನ್ ಜಿಂದಾಲ್ ಸಲಹೆ

ಇದೇ ವೆಳೆ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಮಡಿಕೆ, ಕುಡಿಕೆ ಬಳಕೆಗೆ ಸರ್ಕಾರ ಆದೇಶ ಮಾಡಬೇಕಾಗಿದೆ ಎಂದ ಸ್ವಾಮೀಜಿಗಳು, ವಿಶೇಷವಾಗಿ ಜನರಿಗೆ ಪಡಿತರ ವಿತರಿಸುವ, ಸೊಸೈಟಿಗಳಲ್ಲಿ ಉಚಿತವಾಗಿ ಆಹಾರ ಪಡಿತರದ ಜತೆಗೆ ಮಡಿಕೆ ಕುಡಿಕೆಗಳನ್ನು ನೀಡುವ ಮಡಿಕೆ ಭಾಗ್ಯ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ಮಧುಮೇಹ, ಅಧಿಕ ರಕ್ತದ ಒತ್ತಡ, ಕ್ಯಾನ್ಸರ್ ಇನ್ನು ಮುಂತಾದ ಕಾಯಿಲೆಗಳಿಗೆ ಪ್ಲಾಸ್ಟಿಕ್ ಬಳಕೆಯೇ ಪ್ರಭಾವ ಬೀರುತ್ತಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಹೊಟೇಲ್ ಇನ್ನು ಮುಂತಾದ ಸ್ಥಳಗಳಲ್ಲಿ, ಕುಂಬಾರರು ಮಾಡುವ ಮಣ್ಣಿನ ಟೀ ಕಪ್ ಗಳನ್ನು ಬಳಸಬೇಕು ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯ ಕುಂಬಾರ ಸರ್ಕಾರಿ ನೌಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಬು ಎಸ್ ಕುಂಬಾರ್ ಮಾತನಾಡಿ, ಸಂಘವು ಸ್ಥಾಪನೆಯಾಗಿ 10 ವರ್ಷಗಳು ತುಂಬುತ್ತಿದ್ದು, ಕಟ್ಟ ಕಡೆಯ ಕುಂಬಾರಣ್ಣನ ಮಕ್ಕಳ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ಇತರೆ ವಿಚಾರಗಳಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇತ್ತೀಚಿಗಷ್ಟೇ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸುಮಾರು 12818 ಚದುರ ಅಡಿ ನಿವೇಶನವನ್ನು, ಸಂಘಕ್ಕೆ ನೀಡಿದ್ದು, ಈ ಸ್ಥಳದಲ್ಲಿ ಸಮುದಾಯದ ಹೆಣ್ಣು ಮಕ್ಕಳಿಗೆ ಉಚಿತ ಹಾಸ್ಟೆಲ್, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ಕೇಂದ್ರ, ಅತ್ಯಾಧುನಿಕ ಗ್ರಂಥಾಲಯ, ಸಮುದಾಯ ಭವನ ಮಾಡುವ ಚಿಂತನೆಯಿದೆ. ಈ ಆಸ್ತಿಯು ರಾಜ್ಯದ ಎಲ್ಲ ಕುಂಬಾರ ಜನಾಂಗದ ಮಕ್ಕಳಿಗಾಗಿ ಮೀಸಲು ಎಂದು ತಿಳಿಸಿದರು.

ಇದನ್ನೂ ಓದಿ: Dog Love : ಓಡೋಡಿ ಬಂದು ಮೇಕೆ ಮರಿಗೆ ಹಾಲುಣಿಸುವ ಶ್ವಾನ! ಮಾತೃತ್ವಕ್ಕೆ ಮಾರುಹೋದ ಜನ

ಸಮುದಾಯದ ಮುಖಂಡ, ಜನಸೈನ್ಯ ರಾಜ್ಯಾಧ್ಯಕ್ಷ ಕೆ.ಎರ‍್ರಿಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರದುರ್ಗದ ಕುಂಬಾರ ಗುಂಡಯ್ಯ ಗುರು ಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮಿಗಳು, ಪಾಲಿಕೆ ಉಪಮೆಯರ್ ಬಿ.ಜಾನಕಿ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷೆ ನಿರ್ಮಲ, ಬಸವರಾಜು ಚಕ್ರಸಾಲಿ, ಜಂಟಿ ಕಾರ್ಯದರ್ಶಿ ಪಂಕಜ, ಚಿಕ್ಕ ವೀರಯ್ಯ, ಗುರುರಾಜ್, ರಂಗಧಾಮಯ್ಯ, ಎಚ್.ಎಂ.ದಿನೇಶ್, ಶಿವಮಾದಯ್ಯ, ಲಿಂಗರಾಜು, ಸಂಗಮೇಶ್, ಭೀಮಪ್ಪ, ಸುರೇಶ್, ಕೇಶವಮೂರ್ತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version