Site icon Vistara News

Ballari News: ಬಳ್ಳಾರಿಯಲ್ಲಿ ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ಸಮಾವೇಶಕ್ಕೆ ಚಾಲನೆ

Taluk level Jnana vikas womens conference in Ballari

ಬಳ್ಳಾರಿ: 12 ವರ್ಷಗಳಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ಸದಸ್ಯರಾಗಿದ್ದಾರೆ. ತಾಲೂಕಿನಲ್ಲಿ 1೦ ರೂ.ಗಳೊಂದಿಗೆ ಆರಂಭಿಸಿದ ಉಳಿತಾಯದ (Savings) ಹಣ ಈವರೆಗೆ 23 ಕೋಟಿಗಳಷ್ಟಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್‌ನ ಪ್ರಾದೇಶಿಕ ನಿರ್ದೇಶಕ ಬಿ. ಗಣೇಶ್ ತಿಳಿಸಿದರು.

ನಗರದ ಗೋವಿಂದಪ್ಪ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ ಬಳ್ಳಾರಿ ವತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಜ್ಞಾನವಿಕಾಸ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Karnataka Weather : ಮಂಜಿನ ನಗರವಾದ ಚಿಕ್ಕಬಳ್ಳಾಪುರ; ದಿನ ಪೂರ್ತಿ ಮೋಡ ಕವಿದ ವಾತಾವರಣ

ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಆಶಯದಿಂದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಡಾ. ಹೇಮಾವತಿ ಹಗ್ಗಡೆ ಅವರು ರಾಜ್ಯದ ಎಲ್ಲ ಕಡೆ ಮಹಿಳಾ ಸ್ವಸಹಾಯ ಗುಂಪುಗಳನ್ನು ಆರಂಭಿಸಿ, ವಾರಕ್ಕೆ 10 ರೂ. ಗಳಂತೆ ಉಳಿತಾಯ ಮಾಡುವ, ಈ ಮೂಲಕ ಮಹಿಳಾ ಗುಂಪುಗಳೇ ಅದರ ಪ್ರಯೋಜನ ಪಡೆದುಕೊಳ್ಳುವಂತೆ ಯೋಜನೆಗಳನ್ನು ರೂಪಿಸಿದರು. ಅದರ ಫಲವಾಗಿ ಬಳ್ಳಾರಿ ಜಿಲ್ಲೆಯಲ್ಲಿಯೇ ಉಳಿತಾಯ ಮಾಡಿದ ಹಾಗೂ ಬ್ಯಾಂಕ್‌ಗಳಿಂದ ಪಡೆದ ಸಾಲದ ಮೊತ್ತ ಬರೋಬ್ಬರಿ 450 ಕೋಟಿಗಳಷ್ಟಾಗಿದೆ. ಬ್ಯಾಂಕ್‌ನಲ್ಲಿ ಸಾಲ ನೀಡಲು ವೀರೇಂದ್ರ ಹೆಗ್ಗಡೆ ಅವರೇ ಜಾಮೀನುದಾರರಾಗಿದ್ದಾರೆ ಎಂದು ತಿಳಿಸಿದರು.

ಸಮಾರಂಭಕ್ಕೆ ಚಾಲನೆ ನೀಡಿದ ಬಿಜೆಪಿ ಹಿರಿಯ ಮುಖಂಡ, 24ನೇ ವಾಡ್೯ನ ಪಾಲಿಕೆ ಸದಸ್ಯ ಶ್ರೀನಿವಾಸ ಮೋತ್ಕರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳುತ್ತಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸ್ಮರಿಸಿದರಲ್ಲದೇ, ಮಹಿಳಾ ಜಾಗೃತಿ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ ಎಂದರು.

ನಗರದ ವೈದ್ಯೆ ಡಾ. ಅರುಣಾ ಕಾಮಿನೇನಿ ಅವರು ‘ಮಹಿಳೆಯರಲ್ಲಿ ಕಾಡುವ ವಿವಿಧ ಸಮಸ್ಯೆಗಳು ಹಾಗೂ ಪರಿಹಾರಗಳು’ ಕುರಿತು ತಿಳಿಸಿಕೊಟ್ಟರು. ರೂಪಶ್ರೀ, ಸೌಮ್ಯ ಗುರುರಾಜ್‌ ಹಾಗೂ ವೆಂಕಟೇಶ್ ನಿರ್ವಹಿಸಿದರು.

ಇದನ್ನೂ ಓದಿ: Business Guide : 2024ರಲ್ಲಿ ಹೊಸ ಬಿಸಿನೆಸ್‌ ಆರಂಭಿಸಲು 10 ಬೆಸ್ಟ್‌ ಐಡಿಯಾ

ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಹಾಗೂ ಮಕ್ಕಳಿಂದ ವಿವಿಧ ಗೀತೆಗಳಿಗೆ ಜಾನಪದ ನೃತ್ಯ ಪ್ರದರ್ಶನ ಜರುಗಿತು.

Exit mobile version