ಬಳ್ಳಾರಿ: “ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023” (Vistara News Best Teacher Award-2023) ಕಾರ್ಯಕ್ರಮಕ್ಕೆ ಬಳ್ಳಾರಿಯಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ವಿಸ್ತಾರ ನ್ಯೂಸ್ ಈ ಅವಾರ್ಡ್ ಅನ್ನು ನೀಡುತ್ತಿದೆ. ಶನಿವಾರ ಸಂಜೆ ಬಳ್ಳಾರಿ ನಗರದ ಬಿಡಿಎಎ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಚಾಲನೆ ನೀಡಿದರು.
ಬಳ್ಳಾರಿಯ ಜ್ಞಾನಾಮೃತ ಪ್ರೌಢಶಾಲೆ ಮತ್ತು ಪಿಯು ಕಾಲೇಜು, ಎಸ್.ಕೆ. ಮೋದಿ ನ್ಯಾಷನಲ್ ಸ್ಕೂಲ್, ಬಳ್ಳಾರಿ., ಇಂಡೋ-ಅಮೇರಿಕನ್ ಸ್ಕೂಲ್ ಆ್ಯಂಡ್ ಕಾಲೇಜು, ಬಳ್ಳಾರಿ., ಅಮೃತಾ ಪ್ರಾಪರ್ಟೀಸ್, ಬಳ್ಳಾರಿ (ರಿಯಲ್ ಎಸ್ಟೇಟ್ ಸಂಸ್ಥೆ), ಬಳ್ಳಾರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ ಹಳೆಯ ವಿದ್ಯಾರ್ಥಿಗಳ ಬಳಗದ ಸಹಯೋಗದಲ್ಲಿ, ವಿಸ್ತಾರ ನ್ಯೂಸ್ ವತಿಯಿಂದ “ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023” ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ವಿಸ್ತಾರ ನ್ಯೂಸ್ (Vistara News) ಅಲ್ಪ ಕಾಲದಲ್ಲಿಯೇ ಜನಮಾನಸದಲ್ಲಿ ಉಳಿಯುವ ಕೆಲಸವನ್ನು ಮಾಡುತ್ತಿದೆ. ಇದರ ಭಾಗವೇ ಬೆಸ್ಟ್ ಟೀಚರ್ ಅವಾರ್ಡ್ (Best Teacher Award) ಎಂದು ಬಣ್ಣಿಸಿದರು.
ಸಮಾಜಮುಖಿ ಚಿಂತನೆಯೇ ಚಾನೆಲ್‌ನ ಜೀವಾಳ ಎಂಬುದಕ್ಕೆ ಇಂತಹ ಹತ್ತು ಹಲವು ಕಾರ್ಯಕ್ರಮಗಳೇ ಸಾಕ್ಷಿಯಾಗಿವೆ. ಚಾನೆಲ್ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಉತ್ತರೋತ್ತರವಾಗಿ ಬೆಳೆಯುವಂತಾಗಲಿ ಎಂದು ಸಚಿವ ಬಿ. ನಾಗೇಂದ್ರ ಈ ವೇಳೆ ಹಾರೈಸಿದರು.
ಇದನ್ನೂ ಓದಿ: Gold Rate Today: ಬಂಗಾರದ ದರ ಯಥಾಸ್ಥಿತಿ, 24 ಕ್ಯಾರಟ್ ಬೆಲೆ ಹೀಗಿದೆ
ಶಿಕ್ಷಕರ ಹುದ್ದೆಯು ಅತ್ಯಂತ ಪವಿತ್ರ ಹಾಗೂ ಗೌರವಯುತವಾದದ್ದು. ಜೀವನದಲ್ಲಿ ಶಿಕ್ಷಣ ಕೊಟ್ಟಂತಹ ಶಿಕ್ಷಕರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಚಾನೆಲ್‌ಗಳನ್ನು ಬದಿಗೊತ್ತಿ ವಿಸ್ತಾರ ಚಾನೆಲ್ ಮುನ್ನುಗ್ಗುತ್ತಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ವಿಸ್ತಾರ ಚಾನೆಲ್ ವತಿಯಿಂದ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ. ಜನರಿಗೆ, ಯುವಕರಿಗೆ ಸೇರಿದಂತೆ ಎಲ್ಲರಿಗೂ ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಅದ್ಭುತವಾಗಿ ಮೂಡಿಬರುತ್ತಿದೆ ಎಂದು ತಿಳಿಸಿದರು.
ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ, ಸಾಧಕನ ಹಿಂದೆ ಶಿಕ್ಷಕರ ಪಾತ್ರವಿದೆ. ವಿಸ್ತಾರ ಚಾನೆಲ್ ಇಂಥ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಿಸ್ತಾರವಾಗಿ ಬೆಳೆಯಲಿ ಎಂದು ಹಾರೈಸಿದರು.
ಇದನ್ನೂ ಓದಿ: Ration Card : ಆರು ತಿಂಗಳಿಂದ ರೇಷನ್ ಪಡೆದಿಲ್ಲವೇ? ನಿಮ್ಮ ಕಾರ್ಡ್ ರದ್ದಾಗುವ ಭಯ ಬೇಡ! ಆದರೆ..?
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ (ಅಭಿವೃದ್ಧಿ) ಉಪ ನಿರ್ದೇಶಕಿ ಎ. ಹನುಮಕ್ಕ ಮಾತನಾಡಿ, ಬದುಕು ರೂಪಿಸಿದ ಗುರುವಿಗೊಂದು ನಮನ ಹೆಸರಿನಲ್ಲಿ ಬೆಸ್ಟ್ ಟೀಚರ್ ಅವಾರ್ಡ್ ನೀಡುತ್ತಿರುವಂತಹ ವಿಸ್ತಾರ ನ್ಯೂಸ್ ಕೆಲಸ ಪ್ರಶಂಸನೀಯ, ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ವಿಸ್ತಾರ ನ್ಯೂಸ್ ಹಮ್ಮಿಕೊಳ್ಳುವಂತಾಗಲಿ. ಒಂದು ಚಾನೆಲ್ ಆಗಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮರ್ಚೇಡ್ ಗ್ರೂಪ್ ಆಫ್ ಕಂಪನೀಸ್‌ನ ನಿರ್ದೇಶಕ, ಬಳ್ಳಾರಿ ವಿಎಸ್‌ಕೆ ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ, ಬಳ್ಳಾರಿಯ ಇಂಡೋ-ಅಮೆರಿಕನ್ ಕಾಲೇಜಿನ ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್‌ನ ಎಚ್‌ಒಡಿ ಕೆ.ಪಿ. ಸುಧೀರ್ ಕುಮಾರ್, ಅಮೃತ್ ಪ್ರಾಪರ್ಟಿಸ್‌ನ ನಿಪುಣ್ ಹಾಗೂ ಪೂರ್ವವಲಯದ ಬಿಇಒ ನಯೀಮುರ್ ರಹಮಾನ್ ಕೆ.ಎಸ್., ಸಿರುಗುಪ್ಪ ಬಿಇಓ ಗುರ್ರಪ್ಪ, ಸಂಡೂರು ಬಿಇಒ ಅಕ್ಕಿ ಅವರು ಪಾಲ್ಗೊಂಡಿದ್ದರು.
ಪ್ರಶಸ್ತಿ ಪುರಸ್ಕೃತ ಶಿಕ್ಷಕರು
ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023ಕ್ಕೆ ಆಯ್ಕೆಯಾದ ಗುತ್ತಿಗನೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಗುರು ಗುರುಬಸವರಾಜ್ ಎಂ.ಎಸ್., ಮೋಕಾ (ಬಿಡಿ ಹಳ್ಳಿ) ಸರ್ಕಾರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅನಸೂಯ ಕೆ., ಇಬ್ರಾಹಿಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಗುರು ದೊಡ್ಡಗುರು ಎರ್ರಿಸ್ವಾಮಿ, ಕೊಡಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪ್ರೇಮಾ ಕೆ., ಎಂ.ಸೂಗೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ವೈ.ಹನುಮನಗೌಡ, ಗುಡದೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಗುರುಬಸಯ್ಯ, ಬೈಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರು ಮಲ್ಲಿಕಾರ್ಜುನ, ಜ್ಞಾನಾಮೃತ ಶಾಲೆ ಮತ್ತು ಪಿಯು ಕಾಲೇಜಿನ ಸಸ್ಯಶಾಸ್ತ್ರ ಉಪನ್ಯಾಸಕ ಪ್ರಣವ್ ಕುಮಾರ್, ಬಳ್ಳಾರಿಯ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್‌ನ ಮುಖ್ಯಗುರು ಸರಸ್ವತಿ, ಬಳ್ಳಾರಿಯ ಸೇಂಟ್ ಜಾನ್ಸ್ ಹೈಸ್ಕೂಲ್‌ನ ಮುಖ್ಯಗುರು ಶಾಂತು ಶೀಲನ್, ಹಡ್ಲಿಗಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಸುರೇಶ್ ಆರ್. ಅವರಿಗೆ ವಿಸ್ತಾರ ನ್ಯೂಸ್ ಬೆಸ್ಟ್ ಟೀಚರ್ ಅವಾರ್ಡ್-2023 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು
ಆರಂಭದಲ್ಲಿ ದೊಡ್ಡಬಸವ ಗವಾಯಿಗಳ ತಂಡದಿಂದ ಸಂಗೀತ ಕಾರ್ಯಕ್ರಮ, ಬಳ್ಳಾರಿಯ ಸೂರ್ಯಕಲಾ ಟ್ರಸ್ಟ್ ವತಿಯಿಂದ ಭರತನಾಟ್ಯ, ಸಿರುಗುಪ್ಪದ ಹಾಸ್ಯ ಕಲಾವಿದ, ಶಿಕ್ಷಕ ಜೆ. ನರಸಿಂಹಮೂರ್ತಿ ಅವರಿಂದ ಹಾಸ್ಯ ಕಾರ್ಯಕ್ರಮ, ಕಲಾವಿದ ಕಾಳಿದಾಸ ಅವರಿಂದ ಮಾತನಾಡುವ ಗೊಂಬೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ರಸದೌತಣ ನೀಡಿದವು.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ, ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು, ಬಳ್ಳಾರಿ ಜಿಲ್ಲೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಮತ್ತು ತಾಲೂಕು ಘಟಕಗಳು, ಬಳ್ಳಾರಿ ಜಿಲ್ಲೆ, ಬಳ್ಳಾರಿಯ ಸನ್ಮಾರ್ಗ ಗೆಳೆಯರ ಬಳಗದ ಸಹಕಾರದಲ್ಲಿ ಕಾರ್ಯಕ್ರಮವು ಅದ್ಭುತವಾಗಿ ಮೂಡಿಬಂತು. ವಿಸ್ತಾರ ನ್ಯೂಸ್ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: Sachin Tendulkar: ವಿಕ್ಕಿ ಕೌಶಲ್ ಸಿನಿಮಾ ಕಂಡು ʻಸೂಪರ್ ಇಂಪ್ರೆಸ್ಡ್ʼ ಆದ ಸಚಿನ್ ತೆಂಡೂಲ್ಕರ್!
ಕನ್ನಡ ಸಹ ಶಿಕ್ಷಕಿ ಡಾ. ಉಮಾ ಎಚ್. ಕಾರ್ಯಕ್ರಮವನ್ನು ನಿರ್ವಹಿಸಿದರು. ವಿಸ್ತಾರ ನ್ಯೂಸ್‌ನ ಕಲ್ಯಾಣ ಕರ್ನಾಟಕ ಬ್ಯೂರೋ ಮುಖ್ಯಸ್ಥ ಶಶಿಧರ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.