Site icon Vistara News

Ballari News: ಬರ ನಿರ್ವಹಣೆಗೆ ಸನ್ನದ್ಧರಾಗಿ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಸೂಚನೆ

District Disaster Management meeting with officials of various departments from DC at Ballari

ಬಳ್ಳಾರಿ: ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ‘ಬರ ನಿರ್ವಹಣೆ’ (Drought Management’) ಗೆ ಸನ್ನದ್ಧರಾಗಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ತಾಲೂಕು ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಲಾಗಿದ್ದು, ಸಮಿತಿಯ ನೋಡೆಲ್ ಅಧಿಕಾರಿಗಳು ತಾಲೂಕು ಹಾಗೂ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ, ದನ-ಕರುಗಳಿಗೆ ಮೇವು ಸಮಸ್ಯೆ ಹಾಗೂ ಇತರೆ ಸಮಸ್ಯೆ ಕುರಿತು ಮಾಹಿತಿ ವರದಿ ಮಾಡಲಿದ್ದಾರೆ ಎಂದರು.

ಇದನ್ನೂ ಓದಿ: Vande Bharat: ಶೀಘ್ರದಲ್ಲೇ ಬರಲಿವೆ ವಂದೇ ಭಾರತ್‌ ಸ್ಲೀಪರ್‌, ಮೆಟ್ರೋ ರೈಲು; ಇವುಗಳ ವೈಶಿಷ್ಟ್ಯ ಏನು?

ಈಗಾಗಲೇ ಆಯಾ ತಾಲೂಕುಗಳಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು, ಮೊದಲನೇ ಹಂತದ ಬರ ಸಮೀಕ್ಷೆ ನಡೆಸಿದ್ದು, ಮತ್ತೊಮ್ಮೆ ಬೆಳೆ ಪರಿಸ್ಥಿತಿ ಕುರಿತು ನಿಜ ಸಮೀಕ್ಷಾ ವರದಿ ನಡೆಸಿ ಕಾಲಮಿತಿಯಲ್ಲಿ ಮಾಹಿತಿ ಸಿದ್ಧಪಡಿಸಬೇಕು. ಕೇಂದ್ರದಿಂದ ಬರ ಸಮೀಕ್ಷೆ ತಂಡ ಬರಲಿದೆ. ಯಾವ ವಿಧದ ಭೂಮಿ, ಬೆಳೆ ಹಾಗೂ ಎಷ್ಟು ವ್ಯಾಪ್ತಿಯಿದೆ ಎಂಬುದರ ಬರ ಸಮೀಕ್ಷೆ ಮಾಹಿತಿಯನ್ನು ಶೀಘ್ರವಾಗಿ ಜಿಲ್ಲಾಡಳಿತಕ್ಕೆ ನೀಡಬೇಕು. ಸೆ.30ರೊಳಗೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.

ಎಚ್‍ಎಲ್‍ಸಿ ಮತ್ತು ಎಲ್‍ಎಲ್‍ಸಿ ಕಾಲುವೆಗಳಿಗೆ ಈಗಾಗಲೇ ನೀರಿ ಹರಿಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಕ್ರಮವಹಿಸಬೇಕು. ಈ ಕುರಿತು ಆಯಾ ತಾಲೂಕು ತಹಸೀಲ್ದಾರರು ನೋಡಿಕೊಳ್ಳಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆಯಾದಲ್ಲಿ ನೀರಿನ ಟ್ಯಾಂಕರ್ ಇರಿಸಿಕೊಳ್ಳಬೇಕು ಎಂದು ಸೂಚಿಸಿದ ಡಿಸಿ ಅವರು, ಜಿಲ್ಲೆಯ 114 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಎಸ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸದ ಕೊಳವೆಬಾವಿಗಳನ್ನು ಗುರುತಿಸಿ, ಮರಳಿ ಪುನಃಶ್ಚೇತನಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ನಗರದಲ್ಲಿ ಹಾಗೂ ತಾಲೂಕುಗಳಲ್ಲಿ ಅಂಗನವಾಡಿ, ಶಾಲಾ ಕಟ್ಟಡ ಮತ್ತು ಆರೋಗ್ಯ ಕೇಂದ್ರ, ವಸತಿ ಶಾಲೆಗಳಿಗೂ ಕಟ್ಟಡಗಳ ಭೂಮಿಯ ಕೊರತೆಯಿದ್ದಲ್ಲಿ ಆಯಾ ತಹಸೀಲ್ದಾರರು ಹೃದಯ ಭಾಗದಲ್ಲಿ ಸರ್ಕಾರಿ ಭೂಮಿ ಗುರುತಿಸಿ ನೀಡಬೇಕು ಎಂದರು.

ಇದನ್ನೂ ಓದಿ: India vs Sri Lanka Final: ಫೈನಲ್​ ಪಂದ್ಯಕ್ಕೆ ಸಂಭಾವ್ಯ ತಂಡ; ಪಿಚ್​ ರಿಪೋರ್ಟ್​

ಜಿಲ್ಲೆಯಲ್ಲಿ ರೈತರು ಯಾವುದೇ ಕಾರಣಕ್ಕೂ ದೃತಿಗೆಡಬಾರದು. ಬ್ಯಾಂಕ್‍ಗಳಿಂದ ಸಾಲಪಡೆದ ರೈತರಿಗೆ ಲೇವಾದೇವಿದಾರರಿಂದ ಕಿರುಕುಳ ಕೊಡದಂತೆ ನೋಡಿಕೊಳ್ಳಬೇಕು ಮತ್ತು ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಆಯಾ ತಾಲೂಕು ತಹಸೀಲ್ದಾರ್‌ ಹಾಗೂ ತಾಪಂ ಇಒಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗದಂತೆ ಜಾಗೃತೆ ವಹಿಸಬೇಕು ಎಂದು ಡಿಸಿ ಸೂಚಿಸಿದರು.

ಪ್ರತಿ ತಿಂಗಳು ಹಾಸ್ಟೆಲ್‍ಗಳಿಗೆ ದಿಢೀರ್ ಭೇಟಿ ನೀಡಿ, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಬೇಕು. ಅಲ್ಲಿನ ಸಮಸ್ಯೆ ವರದಿ ಮಾಡಿ ಸರಿಪಡಿಸಬೇಕು ಈ ಕುರಿತು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಮೇವಿನ ಕೊರತೆ ಇರುವುದಿಲ್ಲ, ಅಗತ್ಯ ಮೇವಿನ ದಾಸ್ತಾನು ಇರಿಸಿಕೊಳ್ಳುವಂತೆ ಸೂಚಿಸಿದರು.

ಪ್ರತಿ ವಾರದಲ್ಲಿ ಒಂದು ದಿನ ನಿಗದಿಪಡಿಸಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಾಲೂಕು ಮತ್ತು ಗ್ರಾಮಗಳ ಸಮಸ್ಯೆಗಳನ್ನು ವರದಿ ಮಾಡಿ ಜಿಲ್ಲಾಡಳಿತ ಗಮನಕ್ಕೆ ತರಲು ಕ್ರಮವಹಿಸಬೇಕು ಎಂದರು.

ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, ಬರ ಘೋಷಣೆಯಾಗುತ್ತಿದ್ದಂತೆಯೇ ಉದ್ಯೋಗ ಖಾತರಿ ಯೋಜನೆಯಡಿ 100 ದಿನಗಳ ಮಾನವ ದಿನವನ್ನು 150 ದಿನಕ್ಕೆ ಹೆಚ್ಚಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಇದನ್ನೂ ಓದಿ: SBI recruitment 2023: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಹೇಮಂತ್‍ಕುಮಾರ್, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version