ಬೆಂಗಳೂರು : ರಾಜ್ಯ ಸರ್ಕಾರವು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಒಂದೊಂದು ಅರಣ್ಯ ಪ್ರದೇಶವನ್ನು ಹೊಸದಾಗಿ “ರಕ್ಷಿತ ಅರಣ್ಯʼʼ ಎಂದು ಘೋಷಿಸಿ, ಅಧಿಸೂಚನೆ ಹೊರಡಿಸಿದೆ.
ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಡೇಕೋಟೆ ಹೋಬಳಿಯ ಕಸಾಪುರ ಗ್ರಾಮದ 1.83 ಹೆಕ್ಟೇರ್ (4.53 ಎಕರೆ) ಅರಣ್ಯ ಪ್ರದೇಶವನ್ನು (ಸರ್ವೇ ನಂಬರ್ 418/2) ರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ.
ಅದೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಹೋಬಳಿ, ಅಪ್ಪಲಾಪುರ ಗ್ರಾಮದ 1.998 ಹೆಕ್ಟೇರ್ (4.94 ಎಕರೆ) ಪ್ರದೇಶವನ್ನು (ಸರ್ವೇ ನಂಬರ್ 25/1&25/2) ರಕ್ಷಿತ ಅರಣ್ಯ ಎಂದು ಘೋಷಿಸಲಾಗಿದೆ.
ಈ ಪ್ರದೇಶದಲ್ಲಿರುವ ಅರಣ್ಯ ಸಂಪತ್ತನ್ನು ರಕ್ಷಿಸಲು ಇನ್ನು ಅರಣ್ಯ ಇಲಾಖೆಯು ಕ್ರಮ ತೆಗೆದುಕೊಳ್ಳಲಿದ್ದು, ಗಡಿಯನ್ನು ಗುರುತಿಸಿ ಅತಿಕ್ರಮವಾಗದಂತೆ ನೋಡಿಕೊಳ್ಳಲಿದೆ.
ಬೆಳ್ಳೂರು ಮೀಸಲು ಅರಣ್ಯದ ಗಡಿ ಗುರುತು
ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿಯ ಬೆಳ್ಳೂರು ಮೀಸಲು ಅರಣ್ಯ ಪ್ರದೇಶವನ್ನೂ ಸರ್ಕಾರ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ.
2018ರಲ್ಲಿಯೇ ಸರ್ಕಾರ ಈ ಬೆಳ್ಳೂರು ಗ್ರಾಮದ 37 ಎಕರೆ 15 ಗುಂಟೆ ಪ್ರದೇಶವನ್ನು ಮೀಸಲು ಅರಣ್ಯವೆಂದು ಘೋಷಿಸಲು ಉದ್ದೇಶಿಸಿತ್ತು. ಈ ಪ್ರದೇಶವನ್ನು ಅಧಿಕಾರಿಗಳು ಪರಿಶೀಲಿಸಿ, ಶಿಫಾರಸು ಮಾಡಿರುವುದರಿಂದ ಈಗ ಅಧಿಕೃತವಾಗಿ ಈ ಅರಣ್ಯ ಪ್ರದೇಶವನ್ನು (ಸರ್ವೇ ನಂಬರ್ 33) “ಬೆಳ್ಳೂರು ಬ್ಲಾಕ್ʼʼ ಮೀಸಲು ಅರಣ್ಯ ಎಂದು ಘೋಷಿಸಲಾಗಿದೆ.
ಈ ಮೀಸಲು ಅರಣ್ಯ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳಿಗೆ ಎಳೆಯ ನೆಡುತೋಪು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ತಮ್ಮ ಜಾನುವಾರುಗಳಿಗೆ ಉಚಿತವಾಗಿ ಹುಲ್ಲು ಮೇಯಿಸಲು ಹಾಗೂ ತಮ್ಮ ಸ್ವಂತ ಉಪಯೋಗಕ್ಕಾಗಿ ಉಚಿತವಾಗಿ ಒಣ ಎಲೆಯನ್ನು ಸಂಗ್ರಹಿಸಲು ಅವಕಾಶವಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ | ನಮೀಬಿಯಾದಿಂದ ಬಂದ ಚೀತಾಗಳ ಮೊದಲ ಬೇಟೆ; ಅರಣ್ಯಕ್ಕೆ ಬಿಡುತ್ತಿದ್ದಂತೆ ಕೊಂದಿದ್ದು ಯಾವ ಪ್ರಾಣಿಯನ್ನು ಗೊತ್ತಾ?