ಬಳ್ಳಾರಿ: ನೆರೆಯ ಆಂಧ್ರದ (Andhra) ಕರ್ನೂಲ್ ಜಿಲ್ಲೆಯ ಆಲೂರು ತಾಲೂಕಿನ ಹೊಳಗುಂದ ಜಿಲ್ಲಾ ಪರಿಷತ್ತು ಕನ್ನಡ ಮಾಧ್ಯಮ ಶಾಲೆಗೆ (Kannada Medium School) ಸೋಮವಾರ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಈ ವೇಳೆ ಅಲ್ಲಿಯ ಕನ್ನಡ ಮಾಧ್ಯಮ ಶಾಲೆಯ ಪಾಲಕರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿ, ಮುಖ್ಯಗುರುಗಳನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಮಾತನಾಡಿದ ಅವರು, ನೆರೆಯ ಆಂಧ್ರದ ಗಡಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸಿಬಿಎಸ್‌ಇ ಹೆಸರಿನಲ್ಲಿ ಕಡ್ಡಾಯ ತೆಲುಗು, ಹಿಂದಿಯನ್ನು ಕಲಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.
ಆಂಧ್ರಪ್ರದೇಶ ಸರ್ಕಾರ ಗಡಿ ಭಾಗದಲ್ಲಿರುವ ಕನ್ನಡಿಗರ ಶೈಕ್ಷಣಿಕ ಹಕ್ಕುಗಳನ್ನು ಕಸಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಭಾಷಾವಾರು ಪ್ರಾಂತ್ಯಗಳ ರಚನೆಯ ಸಮಯದಲ್ಲಿ ಅನ್ಯಾಯಕ್ಕೆ ಒಳಪಟ್ಟ ಭಾಷಿಕರ ಹಿತ ರಕ್ಷಿಸಲು ಕೇಂದ್ರ ಸರ್ಕಾರ ಅಂದೇ ಇಲ್ಲಿಯ ಕನ್ನಡಿಗರನ್ನು ಭಾಷಾ ಅಲ್ಪಸಂಖ್ಯಾತರ ಪಟ್ಟಿಗೆ ಸೇರಿಸಿದೆ. ಸಂವಿಧಾನದ 350 ಬಿ ಅಡಿಯಲ್ಲಿ ಇಲ್ಲಿಯ ಕನ್ನಡಿಗರು ಭಾಷಾ ಅಲ್ಪ ಸಂಖ್ಯಾತರು. ಅವರ ಹಕ್ಕುಗಳನ್ನು ಸರ್ಕಾರ ಯಾವುದೇ ಕಾರಣಕ್ಕೂ ಬಲವಂತವಾಗಿ ಕಸಿಯುವಂತಿಲ್ಲ. ಒಂದು ವೇಳೆ ಕಸಿದುಕೊಂಡರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಶಾಲೆಯ ಮುಖ್ಯಗುರುಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Female Foeticide: ಹೆಣ್ಣು ಭ್ರೂಣ ಹತ್ಯೆ ತಡೆಗೆ ರಾಜ್ಯ ಮಟ್ಟದ ಟಾಸ್ಕ್‌ಫೋರ್ಸ್: ದಿನೇಶ್ ಗುಂಡೂರಾವ್
ಆಂಧ್ರಪ್ರದೇಶ ಸರ್ಕಾರ ಕನ್ನಡಿಗರ ಶೈಕ್ಷಣಿಕ ಭಾವನೆಗಳ ಜೊತೆ ಆಟವಾಡುವ ಕೆಲಸ ಮಾಡಬಾರದು. ಒಂದು ವೇಳೆ ಈ ಆದೇಶ ಮರಳಿ ಪಡೆಯದಿದ್ದರೆ ಅಮರಾವತಿಯ ಸೆಕ್ರೆಟರಿಯೇಟ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗಡಿ ಭಾಗದ ಕನ್ನಡಿಗರಿಗೆ ಪದೆಪದೇ ಅನ್ಯಾಯವಾಗುತ್ತಿದ್ದರೂ ಕರ್ನಾಟಕ ಸರ್ಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿರುವುದು ನಾಚಿಕೆಗೇಡು ಎಂದು ಕಿಡಿ ಕಾರಿದರು.
ಇದನ್ನೂ ಓದಿ: Rera Act : ಫ್ಲ್ಯಾಟ್ ಮಾಲೀಕರಿಗೆ ಭೂಮಿಯ ಮೇಲಿನ ಹಕ್ಕು ಏಕೆ ಸಿಕ್ತಿಲ್ಲ?
ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ಡಿ.ವಿಜಯಕುಮಾರ್, ಬಳ್ಳಾರಿ ಜಿಲ್ಲಾಧ್ಯಕ್ಷ ಕೀರ್ತಿಕುಮಾರ್, ನಗರಾಧ್ಯಕ್ಷ ಯುವರಾಜ, ಉಪಾಧ್ಯಕ್ಷ ವೆಂಕಟೇಶ ಬೈಲೂರ್, ಹೊಳಗುಂದ ಕನ್ನಡ ಸಂಘದ ಅಧ್ಯಕ್ಚ ಎಚ್.ಶಿವಶಂಕರ ಗೌಡ, ರುದ್ರಗೌಡ, ದೊಡ್ಡಬಸಪ್ಪ, ಗವಿಸಿದ್ದಪ್ಪ ಸೇರಿದಂತೆ ಸ್ಥಳೀಯರು ಇದ್ದರು.