Site icon Vistara News

Lok Sabha Election 2024: ಪಾರದರ್ಶಕ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಜ್ಜು

Ballari DC Prashanth kumar Mishra pressmeet about lok sabha election

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ (Lok Sabha Election 2024) ಮೇ 07 ರಂದು ಮತದಾನ ಜರುಗಲಿದ್ದು, ಮೇ 05ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 18,84,040 ಮತದಾರರು ಇದ್ದು, 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ಕಾರ್ಯಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ 5952 ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Village Administrative Officer: ತಾಂತ್ರಿಕ ಸಮಸ್ಯೆ; ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಅವಧಿ ಮೇ 15ರವರೆಗೆ ವಿಸ್ತರಣೆ

ಲೋಕಸಭಾ ಚುನಾವಣೆ ನಿಮಿತ್ತ ಮೇ 07 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯದ 48 ಗಂಟೆಗೂ ಮುನ್ನ ಅಂದರೆ ಮೇ 05 ರ ಸಂಜೆ 06 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಂದರ್ಭದಲ್ಲಿ ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು.

ಮೇ 05ರ ಸಂಜೆ 06 ರಿಂದ ಮೇ 08ರ ಸಂಜೆ 06 ರವರೆಗೆ ಜಿಲ್ಲೆಯಾದ್ಯಂತ ಸಿ.ಆರ್.ಪಿ.ಸಿ ಕಲಂ 144 ಅಡಿ ಪ್ರತಿಬಂಧಕಾಜ್ಞೆ ಜಾರಿಯಾಗಲಿದ್ದು, 05ಕ್ಕಿಂತ ಹೆಚ್ಚು ಜನರು ಒಟ್ಟಾಗಿ ಓಡಾಡುವಂತಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಡಲು ಸೂಚನೆ ನೀಡಲಾಗಿದೆ. ಮತದಾನದ ದಿನ ಸಾರ್ವತ್ರಿಕ ರಜೆ, ಮೇ 08 ರ ಬೆಳಿಗ್ಗೆ 06 ಗಂಟೆಯವರೆಗೆ ಜಿಲ್ಲೆಯದ್ಯಂತ ಮದ್ಯ ಮಾರಾಟ ನಿಷೇಧಿಸಿದ್ದು ಡ್ರೈ ಡೇ ಆಚರಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದಂತೆ ಅಗತ್ಯ ಕ್ರಮ ವಹಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ‍್ಯಾರ್ಯಾಂಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಡಿಸಿ ಮಿಶ್ರಾ ಸ್ಪಷ್ಟಪಡಿಸಿದರು.

ಇದನ್ನೂ ಓದಿ: Drown In River: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಕುರಿಗಾಹಿ ಯುವಕ ಸಾವು

ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ ರ‍್ಯಾಂಪ್, ವೀಲ್‍ಚೇರ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ತೀವ್ರ ಬಿಸಿಲಿನ ಬೇಗೆ ಇರುವುದರಿಂದ ಮತಗಟ್ಟೆಗಳಲ್ಲಿ ಸ್ಟ್ಯಾಂಡಿಂಗ್ ಫ್ಯಾನ್ ಅಥವಾ ಕೂಲರ್ ವ್ಯವಸ್ಥೆಗೊಳಿಸಲು ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಆದಷ್ಟು ಬೇಗನೇ ಬಂದು ಮತ ಚಲಾಯಿಸಿ

ಈ ಬಾರಿ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಎಲ್ಲಾ ಮತದಾರರು ಬೆಳಗಿನ ಅವಧಿಯಲ್ಲಿಯೇ ಆದಷ್ಟು ಬೇಗನೇ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬೇಕು ಎಂದು ಡಿಸಿ ಕೋರಿದರು.

ಮತಗಟ್ಟೆ ಸಿಬ್ಬಂದಿಗಳಿಗೆ ತರಬೇತಿ

ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆಯ ಸಿಬ್ಬಂದಿಗಳಿಗೆ ಈಗಾಗಲೆ ತರಬೇತಿ ನೀಡಿದ್ದು, ಮೇ 07 ರಂದು ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 05.30 ಗಂಟೆಗೆ ಮತಗಟ್ಟೆ ಏಜೆಂಟರುಗಳ ಸಮ್ಮುಖದಲ್ಲಿ ಕನಿಷ್ಟ 50 ಮತಗಳ ಅಣುಕು ಮತದಾನ ನಡೆಯಲಿದ್ದು, ನಂತರ ನಿಯಮಾನುಸಾರ ಪ್ರಕ್ರಿಯೆ ಕೈಗೊಂಡು ಬೆಳಿಗ್ಗೆ 07 ಗಂಟೆಗೆ ಮತದಾನ ಪ್ರಾರಂಭವಾಗಲಿದೆ. ಈ ಎಲ್ಲ ಪ್ರಕ್ರಿಯೆಗಳ ಕುರಿತು ಮತಗಟ್ಟೆ ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಿ, ತರಬೇತಿ ನೀಡಲಾಗಿದೆ ಎಂದರು.

ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್

ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ ಒಟ್ಟು 1219 ಮತಗಟ್ಟೆಗಳ ಪೈಕಿ 299 ಸೂಕ್ಷ್ಮ ಹಾಗೂ 69 ವಲ್ನರೆಬಲ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟಾರೆ 610 ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಿ, ಸಿಸಿ ಟಿವಿ ಕ್ಯಾಮೆರಾ ಮೂಲಕ ನೇರವಾಗಿ ಮತಗಟ್ಟೆಗಳ ಲೈವ್ ವಿಡಿಯೋ ನೋಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚುನಾವಣಾ ಕಾರ್ಯದ ಮೇಲುಸ್ತುವಾರಿಗೆ ಒಟ್ಟು 330 ಮೈಕ್ರೋ ಆಬ್ಸರ್ವರ್‌ಗಳನ್ನು ಮತಗಟ್ಟೆಗಳಿಗೆ ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುತ್ತದೆ ಎಂದರು.

ಇದನ್ನೂ ಓದಿ: Summer Tour: ಬೇಸಿಗೆಯಲ್ಲಿ ಈ 8 ತಂಪು ಹಳ್ಳಿಗಳಿಗೆ ಪ್ರವಾಸ ಹೋಗಿ ಕೂಲ್ ಆಗಿ!

ಮತಗಟ್ಟೆಗಳಿಗೆ 5,815 ಸಿಬ್ಬಂದಿ ನೇಮಕ

ಜಿಲ್ಲೆಯಲ್ಲಿ ಶಾಂತಿಯುತ ಹಾಗೂ ಚುನಾವಣಾ ಆಯೋಗದ ನಿಯಮಾನುಸಾರ ಮತದಾನ ಜರುಗಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು 1,395 ಮತಗಟ್ಟೆ ಅಧಿಕಾರಿಗಳು, 1,395 ಸಹಾಯಕ ಅಧಿಕಾರಿಗಳು, 2,790 ಮತದಾನ ಸಹಾಯಕ ಸಿಬ್ಬಂದಿ ಸೇರಿ ಒಟ್ಟು 5,952 ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಮತ್ತು ಪ್ರತಿ ಮತಗಟ್ಟೆಗಳಿಗೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಮತಗಟ್ಟೆ ಸಿಬ್ಬಂದಿಗಳಿಗೆ ವಿಶೇಷ ಮೆಡಿಕಲ್ ಕಿಟ್

ಬಿಸಿಲಿನ ತಾಪಮಾನ ಹಾಗೂ ಶಾಖಾಘಾತದ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್, ಓಆರ್‍ಎಸ್ ಕಿಟ್‍ಗಳನ್ನು ಮಸ್ಟರಿಂಗ್ ಸಂದರ್ಭದಲ್ಲಿಯೇ ವಿತರಿಸಲು ಕ್ರಮ ವಹಿಸಲಾಗಿದೆ. ಅಲ್ಲದೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರು, ನರ್ಸ್‍ಗಳು, ಆಂಬುಲೆನ್ಸ್‌ಗಳನ್ನು ಯಾವುದೇ ಸಂದರ್ಭದಲ್ಲಿ ಅಗತ್ಯ ವೈದ್ಯಕೀಯ ನೆರವಿಗಾಗಿ ಸಜ್ಜಾಗಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 85 ವರ್ಷ ದಾಟಿದ 662 ಹಿರಿಯ ನಾಗರಿಕರು ಹಾಗೂ 452 ವಿಕಲಚೇತನ ಮತದಾರರು ಮನೆಯಿಂದ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿದ್ದರು, ಈ ಪೈಕಿ 85 ವರ್ಷ ಮೇಲ್ಪಟ್ಟ 630 ಮತದಾರರು ಹಾಗೂ 444 ವಿಕಲಚೇತನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ.

ಇದನ್ನೂ ಓದಿ: Karnataka Weather: ಮೈಸೂರಲ್ಲಿ ಬಿರುಗಾಳಿಗೆ ಸಿಲುಕಿ ವೃದ್ಧೆ ಸಾವು; ಮತ್ತೆ ಗುಡುಗು ಸಹಿತ ಗಾಳಿ ಮಳೆಯ ಎಚ್ಚರಿಕೆ

ಅಗತ್ಯ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆ ಹಾಗೂ ಕ್ಷೇತ್ರಗಳ 863 ಮತದಾರರು ಮತ ಚಲಾಯಿಸಲು ಫಾರಂ 12 ಡಿ ಅಂಚೆ ಮತ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇವರ ಮತದಾನಕ್ಕೆ ಅನುಕೂಲವಾಗುವಂತೆ ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಗಾಂಧಿ ಭವನದಲ್ಲಿ ಅಂಚೆ ಮತದಾನ ಕೇಂದ್ರ ತೆರೆಯಲಾಗಿತ್ತು. ಮೇ 01 ರಿಂದ 03 ರವರೆಗೆ ಮತದಾನ ಜರುಗಿದ್ದು, 460 ಜನರು ಮತ ಚಲಾಯಿಸಿದ್ದಾರೆ. ಉಳಿದಂತೆ ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಂಚೆ ಮತದಾನಕ್ಕೆ ಇದೇ ಗಾಂಧಿ ಭವನದಲ್ಲಿ ಫೆಸಿಲಿಟೇಶನ್ ಸೆಂಟರ್ ತೆರೆಯಲಾಗಿದ್ದು, ಮೇ 06 ರವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚುನಾವಣಾ ಅಕ್ರಮ ಚಟುವಟಿಕೆ ತಡೆಗೆ ಸಹಾಯವಾಣಿ ಬಳಸಿ

ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಯಾವುದೇ ಆಸೆ-ಆಮೀಷ ಒಡ್ಡುವ ಘಟನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 1950 ಕೆ ಕರೆ ಮಾಡಿ ತಿಳಿಸಬಹುದು ಅಥವಾ ಸಿ-ವಿಜಿಲ್ ಆಪ್ ಮೂಲಕ ದೂರು ದಾಖಲಿಸಬಹುದು ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ದಿನದಂದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಗಾ ವಹಿಸಲು ಹಾಗೂ ಭದ್ರತೆಗೆ ಒಟ್ಟು 2,048 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೊರ ಜಿಲ್ಲೆಯಿಂದ ಸುಮಾರು 850 ಪೊಲೀಸ್ ಸಿಬ್ಬಂದಿಗಳು ಭದ್ರತಾ ಕಾರ್ಯಕ್ಕೆ ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಗೆ ಸಿಆರ್‌ಪಿಎಫ್ ಪಡೆಯ ಮೂರು ತಂಡಗಳು ಜಿಲ್ಲೆಗೆ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಚುನಾವಣಾ ಅಕ್ರಮ ನಡೆಯದಂತೆ 24 ಚೆಕ್‍ಪೋಸ್ಟ್‌ಗಳಲ್ಲಿ ನಿರಂತರ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮತದಾನ ಸಮಯದಲ್ಲಿ ಅಹಿತಕರ ಘಟನೆ ಸೃಷ್ಟಿಸುವಂತಹ 11 ರೌಡಿಶೀಟರ್ ಪ್ರಕರಣಗಳಲ್ಲಿ 09 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ಗೂಂಡ ಆಕ್ಟ್ ಅಡಿ 1 ಪ್ರಕರಣ ದಾಖಲಾಗಿದೆ. ಚುನಾವಣೆ ನೀತಿ ಸಂಹಿತೆ ಘೊಷಣೆಯ ಬಳಿಕ ಈವರೆಗೆ ಜಿಲ್ಲೆಯಲ್ಲಿ ರೂ.8.41 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: MTR: ಬೆಂಗಳೂರಿನಲ್ಲಿ ಎಂಟಿಆರ್ ಕರುನಾಡು ಸ್ವಾದ; 2 ದಿನಗಳ ಆಹಾರ ಉತ್ಸವದಲ್ಲಿ ಏನೇನಿವೆ?

ಈ ವೇಳೆ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

Exit mobile version