ಬಳ್ಳಾರಿ: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 (Lok Sabha Election 2024) ರ ಮತ ಎಣಿಕೆ ಕಾರ್ಯವು ಜೂ.04 ರಂದು ಬೆಳಿಗ್ಗೆ 08 ಗಂಟೆಯಿಂದ ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಲಿದ್ದು, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಮತ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿ, ಅಂತಿಮ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
ಜೂ.04 ರಂದು ಬೆಳಿಗ್ಗೆ 08 ಗಂಟೆಗೆ ಮತ ಎಣಿಕಾ ಕಾರ್ಯ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಸ್ಟ್ರಾಂಗ್ ರೂಂ ಗಳನ್ನು ತೆರೆಯುವುದು, ಪೋಸ್ಟಲ್ ಬ್ಯಾಲೆಟ್‍ಗಳ ಎಣಿಕೆಗೆ ಸಿದ್ಧ ಮಾಡಿಕೊಳ್ಳುವುದು, ಮತ ಎಣಿಕಾ ಕಾರ್ಯ ನೆರವೇರಿಸುವ ಅಧಿಕಾರಿ, ಸಿಬ್ಬಂದಿ, ಮಾಧ್ಯಮದವರು ಮತ್ತು ಏಜೆಂಟರುಗಳ ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ಕಲ್ಪಿಸಲು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು.
ಇದನ್ನೂ ಓದಿ: Gautam Gambhir: ಗೌತಮ್ ಗಂಭೀರ್ ಭಾರತದ ಮುಂದಿನ ಕೋಚ್; ಅಧಿಕೃತ ಘೋಷಣೆಯೊಂದೇ ಬಾಕಿ
ಈಗಾಗಲೆ ಮತ ಎಣಿಕಾ ಕೊಠಡಿಗಳನ್ನು ಅಗತ್ಯ ಬ್ಯಾರಿಕೇಡ್, ಎಣಿಕಾ ಟೇಬಲ್‍ಗಳ ವ್ಯವಸ್ಥೆ, ಮತ ಎಣಿಕಾ ಕೇಂದ್ರಕ್ಕೆ ಪ್ರವೇಶ ಕಲ್ಪಿಸುವ ದ್ವಾರದಲ್ಲಿ ಭದ್ರತೆ ಮುಂತಾದ ಕಾರ್ಯಗಳ ಬಗ್ಗೆಯೂ ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಮತಗಳ ಎಣಿಕಾ ಕಾರ್ಯ ಅತ್ಯಂತ ಸುಗಮ ಹಾಗೂ ಸುವ್ಯವಸ್ಥೆಯಿಂದ ಜರುಗಬೇಕು, ಈ ಬಗ್ಗೆ ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು. ಎಣಿಕಾ ಕೇಂದ್ರ ಕಟ್ಟಡದಲ್ಲಿ ಅಂದು ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ, ಸಿಬ್ಬಂದಿ, ಮಾಧ್ಯಮದವರು ಸೇರುವುದರಿಂದ ಉಪಹಾರ ಹಾಗೂ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು. ಕಟ್ಟಡದ ಪ್ರತಿ ಮಹಡಿಯಲ್ಲಿರುವ ಶೌಚಾಲಯಗಳನ್ನು ಸ್ವಚ್ಛವಾಗಿರಿಸಿ, ನಿಯಮಿತವಾಗಿ ಸ್ವಚ್ಛತೆಯ ನಿರ್ವಹಣೆಗೆ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕು, ಎಣಿಕಾ ಕೇಂದ್ರ ಪ್ರವೇಶಿಸಲು ಅಧಿಕೃತವಾಗಿ ಪಡೆದಿರುವ ಪ್ರವೇಶ ಅನುಮತಿ ಪತ್ರ (ಪಾಸ್) ಹೊಂದಿದವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: Cow Smuggling : ಕಂಟೇನರ್, ಮಿಲ್ಕ್ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಸೇರಿದಂತೆ ವಿವಿಧ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.