Site icon Vistara News

Press Day: ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿಯ ಕೊಡುಗೆ ಅಪಾರ: ಡಾ.ಕರಿಯಪ್ಪ ಮಾಳಿಗಿ

Press Day and Pratibha Puraskara programme in Ballari

ಬಳ್ಳಾರಿ: ಬಳ್ಳಾರಿಯ ಜೆಟಿ ಫೌಂಡೇಶನ್, ಶ್ರೀ ಲಕ್ಷ್ಮಿ ವೆಂಕಟೇಶ್ವರ ಫಿಲ್ಲಿಂಗ್ ಸ್ಟೇಷನ್ ಜೋಳದರಾಶಿ ಹಾಗೂ ಬಳ್ಳಾರಿ ಪತ್ರಕರ್ತರ ಸಹಯೋಗದಲ್ಲಿ ನಗರದ ಬಿಡಿಎಎ ಮೈದಾನ ಸಭಾಂಗಣದಲ್ಲಿ ಸೋಮವಾರ ಪತ್ರಿಕಾ ದಿನಾಚರಣೆ (Press Day) ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಸಮಾರಂಭಕ್ಕೆ ಶುಭ ಹಾರೈಸಿದರು.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಗಿ, ಮಾಧ್ಯಮ ಕ್ಷೇತ್ರಕ್ಕೆ ಬಳ್ಳಾರಿಯ ಕೊಡುಗೆ ಅಪಾರವಾಗಿದ್ದು, ಕನ್ನಡದ ಮೊದಲ ಪತ್ರಿಕೆ `ಮಂಗಳೂರು ಸಮಾಚಾರ’ ಮೊದಲು ಮುದ್ರಣವಾಗಿದ್ದು ಬಳ್ಳಾರಿಯಲ್ಲಿ ಎಂದು ತಿಳಿಸಿದರು.

ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು, ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕು. ನ್ಯಾಯಸಮ್ಮತವಾದ, ಪಾರದರ್ಶಕವಾದ ಹಾಗೂ ನಿಖರವಾದ ಮಾಹಿತಿಯನ್ನು ಓದುಗರಿಗೆ ನೀಡುವುದು ಮಾಧ್ಯಮದ ಹೊಣೆಗಾರಿಕೆಯಾಗಿದೆ ಎಂದರು.

ಇದೇ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪತ್ರಿಕೆಗಳನ್ನು ಓದಬೇಕು. ಪತ್ರಿಕೆಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪತ್ರಿಕೆ ಓದು ಬಹಳ ಮುಖ್ಯ ಎಂದು ತಿಳಿಸಿದರು.

ಚಿತ್ರದುರ್ಗದ ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ, ಪತ್ರಕರ್ತ ಬರೀ ವರದಿ
ಮಾಡಿದರೆ ಸಾಲದು. ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸ್ಥಳೀಯ ಸಮಸ್ಯೆಗಳಿಗೆ
ಧ್ವನಿಯಾಗಬೇಕು. ಜನಪರ ಚಳುವಳಿಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಬೇಕು ಎಂದು
ಹೇಳಿದರು.

ಹಿರಿಯ ಪತ್ರಕರ್ತರಾದ ನಂಜುಂಡೇಗೌಡ ಹಾಗೂ ಶಿವಮೊಗ್ಗದ ಹಿರಿಯ ಪತ್ರಕರ್ತ ಮಾರ್ಕ್ಸ್
ತೇಜಸ್ವಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಯಚೂರು ಜಿಲ್ಲೆಯ ವೀರಗೋಟಮಠದ ಶ್ರೀ ಅಡವಿಲಿಂಗ ಮಹಾರಾಜ ಸ್ವಾಮೀಜಿ, ಆಂಧ್ರಪ್ರದೇಶ ಪಾಲ್ತೂರಿನ ಕಲ್ಲುಹೊಳೆಮಠದ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಜಂಗಮಹೊಸಹಳ್ಳಿ ಪುರವರ್ಗಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಡಿ. ನಾಗೇನಹಳ್ಳಿ ನಂಜುಂಡೇಶ್ವರ ಶರಣರು ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರರು, ಛಾಯಾಗ್ರಾಹಕರು ಮತ್ತು ವಿಡಿಯೋ ಜರ್ನಲಿಸ್ಟ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬಳಿಕ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

ಜೆ.ಟಿ. ಫೌಂಡೇಶ್ ನ ಮುಖ್ಯಸ್ಥ ತಿಮ್ಮಪ್ಪ ಜೋಳದರಾಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತಾರ ನ್ಯೂಸ್‌ನ ಕಲ್ಯಾಣ ಕರ್ನಾಟಕ ಬ್ಯುರೋ ಮುಖ್ಯಸ್ಥ ಶಶಿಧರ ಮೇಟಿ ಆಶಯ ನುಡಿ ನುಡಿದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಎಂ.ವಿನೋದ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Exit mobile version