ಬಳ್ಳಾರಿ/ಧಾರವಾಡ: ಮತ್ತೆ ಹಲವೆಡೆ ಕಾಡು ಪ್ರಾಣಿಗಳು (Wild animals Attack) ನಗರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿವೆ. ಬಳ್ಳಾರಿಯಲ್ಲಿ ಕರಡಿ ದಾಳಿಗೆ (Bear attack) ರೈತರು ಗಾಯಗೊಂಡಿದ್ದರೆ, ಧಾರವಾಡದಲ್ಲಿ ಚಿರತೆಯು (Leopard Attack) ಮೂರು ಕರುಗಳನ್ನು ತಿಂದುಹಾಕಿದೆ. ಇದರಿಂದಾಗಿ ಜನರು ಒಬ್ಬಂಟಿಯಾಗಿ ಓಡಾಡಲು ಹೆದರುವಂತಾಗಿದೆ.
ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವ ಪ್ರಮಾಣ ಹೆಚ್ಚಾಗುತ್ತಿದ್ದು, ಜನರು ಭೀತಿಯಲ್ಲಿ ಇರುವಂತಾಗಿದೆ. ಆಹಾರ ಅರಸಿ ಕಾಡಿನಿಂದ ಮನೆ ಬಾಗಿಲಿಗೆ ಬರುತ್ತಿದೆ. ಬಳ್ಳಾರಿಯ ಹಲಕುಂದಿ ಗ್ರಾಮದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಕರಡಿಗಳು ದಾಳಿ ಮಾಡಿವೆ. ಕರಡಿ ದಾಳಿಯಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಲಕುಂದಿಯ ಕೃಷ್ಣನಾಯಕ್, ಮೊಳಕಾಲ್ಮೂರಿನ ಪ್ರಸನ್ನ ಕುಮಾರ್ ಗಾಯಾಳುಗಳಾಗಿದ್ದಾರೆ. ತೋಟದ ಕೆಲಸಕ್ಕೆ ತೆರಳಿದ್ದ ಕೃಷ್ಣ ನಾಯಕ ಮೇಲೆ ಕರಡಿ ದಾಳಿ ಮಾಡಿದ್ದರಿಂದ ಕೈಗೆ ಗಾಯವಾಗಿದೆ. ಇತ್ತ ಹಲಕುಂದಿ ಮಠದ ಸಮೀಪ ಪ್ರಸನ್ನ ಕುಮಾರ ಮೇಲೆ ಮೂರು ಕರಡಿಗಳು ಒಮ್ಮೆಲೆ ದಾಳಿ ಮಾಡಿದೆ. ಇದರಿಂದಾಗಿ ಮುಖ, ದೇಹದ ವಿವಿಧ ಭಾಗಗಳಿಗೆ ತೀವ್ರಗಾಯವಾಗಿದೆ. ಸದ್ಯ ಕರಡಿಗಳ ದಾಳಿಯಿಂದ ಗಾಯಗೊಂಡವರನ್ನು ನಗರದ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Road Accident : ಹಾಸನದಲ್ಲಿ ಹಿಟ್ ಆ್ಯಂಡ್ ರನ್‌ಗೆ ಮಾವ-ಅಳಿಯ ಬಲಿ; ಮಗಳು ಗಂಭೀರ
ಧಾರವಾಡದಲ್ಲಿ ಮೂರು ಕರುಗಳ ಮೇಲೆ ಚಿರತೆ ದಾಳಿ
ಧಾರವಾಡ ತಾಲೂಕಿನ ಮನಸೂರ ಗ್ರಾಮದ ಬಳಿಯ ಜೋಶಿ ಫಾರ್ಮ್ ಹೌಸ್‌ನಲ್ಲಿ ಕಟ್ಟಿ ಹಾಕಿದ್ದ ಕರುಗಳು ಮೇಲೆ ಚಿರತೆಯು ದಾಳಿ ಮಾಡಿದೆ. ಕಳೆದ ಶುಕ್ರವಾರ ರಾತ್ರಿ ಕರುಗಳ ಮೇಲೆ ದಾಳಿ ಮಾಡಿರುವ ಚಿರತೆ ಕೊಂದು ಹಾಕಿದೆ. ಕಳೆದ ವಾರ ಇದೇ ಗ್ರಾಮದಲ್ಲಿ ಕರು ಒಂದನ್ನು ಚಿರತೆ ಬಲಿ ಪಡೆದಿತ್ತು.
ನಂತರ ಚಿರತೆ ಹಿಡಿಯಲು ಒತ್ತಾಯಗಳು ಬಂದ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಚಿರತೆ ಸಿಗದೇ ಕಾರ್ಯಾಚರಣೆಯನ್ನು ಅರ್ಧಕ್ಕೆ ಕೈ ಬಿಟ್ಟಿದ್ದರು. ಆದರೆ ಕಳೆದ ರಾತ್ರಿ ಮತ್ತೇ ಕಾಣಿಸಿಕೊಂಡ ಚಿರತೆಯು ಕರುಗಳ ಮೇಲೆ ದಾಳಿ ಮಾಡಿದೆ.
ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಬಾರದ ಇರುವುದಕ್ಕೆ ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.ಅದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Murder case : ತಲಘಟ್ಟಪುರದಲ್ಲಿ ಚಾಕು ಇರಿದು ವ್ಯಕ್ತಿ ಹತ್ಯೆ; ಕೊಲೆಗಾರ ಎಸ್ಕೇಪ್
ಚಿರತೆ ನೋಡಿ ಕಂಗಾಲಾದ ಗ್ರಾಮಸ್ಥರು
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕುಂಟೋಜಿ ಗ್ರಾಮದ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಕಂಡು ಕುಂಟೋಜಿ ಗ್ರಾಮ ಹಾಗೂ ಅಡವಿ ವಸತಿ ಕುಟುಂಬಗಳು ಕಂಗಾಲಾಗಿವೆ. ಗ್ರಾಮಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಹಿಡಿಯಲು ಮುಂದಾಗಿದ್ದಾರೆ.
ಕಾರವಾರದ ಜನವಸತಿ ಪ್ರದೇಶದಲ್ಲೂ ಚಿರತೆ ಹಾವಳಿ
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಕಳಸವಾಡದಲ್ಲಿ ಚಿರತೆ ಓಡಾಟವು ಆತಂಕ ಸೃಷ್ಟಿಸಿದೆ. ರಾತ್ರಿ ವೇಳೆ ಮನೆಯ ಕಾಂಪೌಂಡ್ ಹಾರಿ ರಸ್ತೆ ದಾಟಿರುವ ಚಿರತೆ ಓಡಾಟದ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳಸವಾಡ, ಬಾಂಡಿಶಿಟ್ಟಾ ಭಾಗದಲ್ಲಿ ಚಿರತೆ ಓಡಾಡುತ್ತಿದ್ದು, ಜನವಸತಿ ಪ್ರದೇಶದಲ್ಲಿ ಚಿರತೆ ಕಂಡು ನಿವಾಸಿಗಳು ಆತಂಕಗೊಂಡಿದ್ದಾರೆ. ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ