ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಎಂ.ಡಿ ಮತ್ತು ನಿಗಮದ ಅಧ್ಯಕ್ಷರ ನಡುವಿನ ಜಗಳ ತಾರಕಕ್ಕೇರಿದೆ. ತಾನು ಖಿನ್ನತೆಗೊಳಗಾಗಿ ಮೃತಪಟ್ಟರೆ ನಿಗಮದ ಎಂ.ಡಿ.ರೂಪಾ ಮೌದ್ವಿಲ್ ಕಾರಣ ಎಂದು ಅಧ್ಯಕ್ಷ ಬಿ. ರಾಘವೇಂದ್ರ ಶೆಟ್ಟಿ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಮೇ 27ರಂದು ಏರ್ಪಡಿಸಿದ್ದ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವಾರ್ಷಿಕ ಸಭೆಯಲ್ಲಿ ನಿಗಮದ ಎಂ.ಡಿ. ರೂಪಾ ಮೌದ್ಗಿಲ್ ಹಾಗೂ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ನಡೆದಿರುವ ಕಿತ್ತಾಟ ಇದೀಗ ಬಹಿರಂಗಗೊಂಡಿದೆ. ʼʼನಾಳೆ ನಾನು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪಾ ಐಪಿಎಸ್ ಕಾರಣʼʼ ಎಂದು ಪದೇಪದೆ ಸಭೆಯಲ್ಲಿ ಹೇಳಿದ್ದಾರೆ. ಈ ವೇಳೆ ಐಪಿಎಸ್ ರೂಪಾ, ಇದೇನು ವಾರ್ಷಿಕ ಸಾಮಾನ್ಯ ಸಭೆಯೇ(ಎಜಿಎಂ) ಎಂದು ಬೇಸರ ವ್ಯಕ್ತಪಡಿಸುತ್ತಾ ಸಭೆಯಿಂದ ಹೊರನಡೆದಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಐಪಿಎಸ್ ಅಧಿಕಾರಿ ಡಿ. ರೂಪಾ 2 ದಿನಕ್ಕೊಮ್ಮೆ ಕಚೇರಿಗೆ ಬರುತ್ತಾರೆ, ಫೈಲ್‌ಗಳನ್ನು ತರಿಸಿಕೊಂಡು ಮನೆಯಲ್ಲೇ ನೋಡುತ್ತಾರೆ ಎಂದು ವಿಧಾನಸೌಧದಲ್ಲಿ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪ ಮಾಡಿದ್ದಾರೆ. ʼʼನನ್ನ ಅವಧಿಯಲ್ಲಿ 5 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ರೂಪಾ ಆರೋಪಿಸಿದ್ದಾರೆ. ಅವರ ಬಳಿ ದಾಖಲೆಯಿದ್ದರೆ ಬಿಡುಗಡೆ ಮಾಡಲಿ. ಮಹಿಳಾ ಸಿಬ್ಬಂದಿ ನೇಮಿಸಲು ಕೇಳಿದ್ದೇನೆ ಅಂತ ಹೇಳಿದ್ದಾರೆ. ಕಚೇರಿಗೆ ಟೈಪಿಸ್ಟ್ ನೇಮಕ ಮಾಡಿ ಎಂದು ಕೇಳಿರುವುದು ತಪ್ಪಾ? ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸುಳ್ಳುʼʼ ಎಂದು ಶೆಟ್ಟಿ ಹೇಳಿದ್ದಾರೆ.
ಮುಖಕ್ಕೆ ಆಸಿಡ್ ಎರಚುವ ಧಮಕಿ
ಈ ರೀತಿ ಆತ್ಮಹತ್ಯೆ ಬೆದರಿಕೆ ಒಡ್ಡುವುದು ಐಪಿಸಿ ಪ್ರಕಾರ ಶಿಕ್ಷಾರ್ಹ ಅಪರಾಧ. ಇದರ ಬಗ್ಗೆ ಕೇಸ್ ದಾಖಲಿಸಲು ಅನುಮತಿ ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿ ಅವರನ್ನು ಕೋರಿದ್ದೇನೆ. ನನ್ನ ಮುಖಕ್ಕೆ ಆಸಿಡ್ ಎರಚಿಸುವ ಧಮಕಿ ಕೂಡ ಅಧ್ಯಕ್ಷರು ಹಾಕಿದ್ದಾರೆ. ನಾನು ಇದು ಯಾವುದೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದೇನೆ. ಗೂಂಡಾ ಪ್ರವೃತ್ತಿಯ ಇವರು ಆತ್ಮಹತ್ಯೆಯ ಬೆದರಿಕೆ ಹಾಗೂ ಆಸಿಡ್ ಎರಚುವ ಬೆದರಿಕೆ ಬಗ್ಗೆ ನಾನು ಎಲ್ಲಿಯೂ ಹೇಳಿಲ್ಲ ಎಂದು ರೂಪಾ ಮೌದ್ಗಿಲ್ ಬೇಸರ ಹೊರಹಾಕಿದ್ದಾರೆ.