ಬೆಂಗಳೂರು: ಅನಧಿಕೃತ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಯಿಂದಾಗಿ ಆಟೋರಿಕ್ಷಾ ಚಾಲಕರ ದುಡಿಮೆಗೆ ಮಾರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬೆಂಗಳೂರು ಆಟೋ ಚಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಮಾ.20ರಂದು ಇಡೀ ದಿನ ಬೆಂಗಳೂರಲ್ಲಿ ಆಟೋ ಸೇವೆಯನ್ನು (Bengaluru Auto Bandh) ಬಂದ್ ಮಾಡಿ ಮುಷ್ಕರಕ್ಕೆ ಕರೆ ಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಇಡೀ ದಿನ ನಗರದಲ್ಲಿ ಆಟೋ ಸೇವೆ ಇರುವುದಿಲ್ಲ.
ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಆಟೋ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಧ್ಯರಾತ್ರಿ 12ರಿಂದ ಆಟೋ ಓಡಾಟ ಸ್ಥಗಿತಗೊಳಿಸಿ, ಸೋಮವಾರ ರಾತ್ರಿ 12ರ ವರೆಗೆ ಸಂಚಾರ ಬಂದ್ ಮಾಡಲಾಗುತ್ತದೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರೇಸ್ ಕೋರ್ಸ್‌ನಲ್ಲಿರುವ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಚಾಲಕರು ತೀರ್ಮಾನಿಸಿದ್ದಾರೆ.
ಆಟೋ ಚಾಲಕರು ರಾಜ್ಯ ಸರ್ಕಾರಕ್ಕೆ ಮೂರು ದಿನಗಳ ಡೆಡ್‌ಲೈನ್ ಕೊಟ್ಟಿದ್ದರು. ಭಾನುವಾರದ ವರೆಗೆ ಗಡುವು ನೀಡಲಾಗಿತ್ತು. ಆದರೆ, ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಸೋಮವಾರ ಮುಷ್ಕರ ನಡೆಸಲು ಕರೆ ಕೊಡಲಾಗಿದೆ. ಮೂರು ದಿನಗಳ ಕಾಲ ಆಟೋ ಚಾಲಕರು ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿರುವ ಒಟ್ಟಾರೆ 21 ಆಟೋ ಚಾಲಕರ ಸಂಘಟನೆಗಳು ಮುಷ್ಕರಕ್ಕೆ ಸಾಥ್ ನೀಡಿದ್ದು, 2 ಲಕ್ಷದ 10 ಸಾವಿರ ಆಟೋಗಳ ಓಡಾಟ ಬಂದ್ ಆಗಲಿದೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಲಾಗಿದೆ. ಈಗಾಗಲೇ ದೆಹಲಿ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಬಹಿಷ್ಕಾರ ಮಾಡಲಾಗಿದೆ.
ಇದನ್ನೂ ಓದಿ: Dog thieves In Bengaluru: ಶ್ವಾನ ಮಾಲೀಕರೇ Be Alert; ಬೆಂಗಳೂರಲ್ಲಿ ಹೆಚ್ಚಾಯ್ತು ನಾಯಿ ಕಳ್ಳರ ಹಾವಳಿ
ಆದರೆ, ರಾಜ್ಯದಲ್ಲಿ ಈ ಯೋಜನೆಗೆ ಸರ್ಕಾರವೇ ಬೆಂಬಲ ನೀಡುತ್ತಿದೆ. ಕಳೆದ ಎರಡು ವರ್ಷಗಳಿಂದ ಸಾರಿಗೆ ಇಲಾಖೆ ಮತ್ತು ಸಚಿವರ ಬೆಂಬಲದಿಂದಾಗಿ ಆ್ಯಪ್ ಆಧಾರಿತ ಅನಧಿಕೃತವಾಗಿ ವೈಟ್‌ಬೋರ್ಡ್ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ ಎಂದು ಆಟೋ ಸಂಘಟನೆ ಮುಖಂಡರು ಕಿಡಿಕಾರಿದ್ದಾರೆ. ಇನ್ನು ಆಟೋ ಚಾಲಕರ ಪ್ರತಿಭಟನೆಯಿಂದ ಜನಸಾಮಾನ್ಯರಿಗೆ ತೊಂದರೆಯುಂಟಾಗಲಿದೆ.
ಆಟೋ ಮುಷ್ಕರಕ್ಕೆ ಕೆಲವರ ನಕಾರ
ಸೋಮವಾರದ ಆಟೋ ಚಾಲಕರ ಮುಷ್ಕರಕ್ಕೆ ಕೆಲವು ಆಟೋ ಸಂಘಟನೆಗಳು ಬೆಂಬಲ ನೀಡಿಲ್ಲ. ಮಾ.22ರಂದು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವವರು ಸಂಖ್ಯೆ ಹೆಚ್ಚಿರುತ್ತದೆ. ಈ ಸಮಯದಲ್ಲಿ ಪ್ರತಿಭಟನೆ ಮಾಡಿದರೆ ನಮಗೆ ನಷ್ಟವುಂಟಾಗುತ್ತದೆ. ಹೀಗಾಗಿ ಈ ಬಂದ್‌ಗೆ ಬೆಂಬಲ ನೀಡದಿರಲು ಕೆಲವರು ನಿರ್ಧರಿಸಿದ್ದಾರೆ.
ಆಟೋ ಚಾಲಕರಿಂದಲೇ ಕಾರ್ಯನಿರ್ವಹಿಸುತ್ತಿರುವ “ನಮ್ಮ ಯಾತ್ರಿ” ಆ್ಯಪ್ ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿದೆ. ಸುಮಾರು 3 ಸಾವಿರಕ್ಕೂ ಅಧಿಕ ಆಟೋ ಚಾಲಕರು ಈ ಆ್ಯಪ್ ಮೂಲಕ ಸೇವೆ ನೀಡುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ