ಬೆಂಗಳೂರು: ಖಾಸಗಿ ಸಾರಿಗೆ ನೌಕರರ ಮುಷ್ಕರ (Bengaluru Bandh) ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport Passengers) ಟ್ಯಾಕ್ಸಿಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು, ವೈಟ್ ಬೋರ್ಡ್ ಕಾರುಗಳನ್ನು ತಂದು ಡ್ರಾಪ್ ನೀಡುವ ನೆಪದಲ್ಲಿ ದುಪ್ಪಟ್ಟು ಹಣವನ್ನು ವಸೂಲಿ ಮಾಡಿದ್ದಾರೆ.
ಏರ್‌ಪೋರ್ಟ್‌ನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯಲಾಗುತ್ತಿದೆ. ವೈಟ್ ಬೋರ್ಡ್ ಕಾರುಗಳಲ್ಲಿ 1300 ರಿಂದ 2000 ವರೆಗೂ ವಸೂಲಿ ಮಾಡಿದ್ದಾರೆ. ಏರ್‌ಪೋರ್ಟ್‌ನಿಂದ ಬನಶಂಕರಿಗೆ ಹೋಗಲು 1300 ಹಣ ಹೆಚ್ಚುವರಿಯಾಗಿ ಕೇಳಿದ್ದಾರೆ.
ಪ್ರಯಾಣಿಕರೊಬ್ಬರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದವರ ವಿಡಿಯೊ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪಲೋಡ್ ಮಾಡಿದ್ದಾರೆ. ಈ ಹಿಂದೆ 800 ರಿಂದ ಒಂದು ಸಾವಿರಕ್ಕೆ ಟ್ಯಾಕ್ಸಿಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ ಮುಷ್ಕರ ಎಂದು ಮೀಟರ್ ಏನು ಇಲ್ಲದೆ, ಮನಸೋ ಇಚ್ಛೆ ದರವೊಂದು ಫಿಕ್ಸ್ ಮಾಡಿ ಏರ್‌ಪೋರ್ಟ್ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ್ದಾರೆ.
ರ‍್ಯಾಪಿಡೋ ಬೈಕ್ ಬುಕ್ ಮಾಡಿ ಹಲ್ಲೆ
ಇತ್ತ ಬೆಂಗಳೂರಿನ ಮೆಜೆಸ್ಟಿಕ್ ಸುತ್ತಮುತ್ತ ರ‍್ಯಾಪಿಡೊ ಬೈಕ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ. ಕರ್ತವ್ಯನಿರತ ರ‍್ಯಾಪಿಡೋ ಚಾಲಕರನ್ನು ತಡೆದು ಮಡಿವಾಳ ಅಂಡರ್ ಪಾಸ್‌ನಲ್ಲಿ ದಾಂಧಲೆ ನಡೆಸಿದ್ದಾರೆ. ರ‍್ಯಾಪಿಡೋ ಚಾಲಕನಿಗೆ ಹಲ್ಲೆ ಮಾಡಿ ಕ್ಷಣಮಾತ್ರದಲ್ಲಿ ಕೆಲ ಆಟೋ ಚಾಲಕರು ಕಾಲ್ಕಿತ್ತಿದ್ದಾರೆ. ಐದಾರು ಮಂದಿ ಆಟೋ ಚಾಲಕರು ಮೊದಲಿಗೆ ಬೈಕ್‌ನ ಮೀರರ್ ಗ್ಲಾಸ್ ಸೇರಿದಂತೆ ಗಾಡಿಯನ್ನು ಸಂಪೂರ್ಣ ಜಖಂಗೊಳಿಸಿದ್ದಾರೆ. ನಂತರ ಚಾಲಕನನ್ನು ಹಿಡಿದು ಥಳಿಸಿದ್ದಾರೆ.
ಕೋರಮಂಗಲದದಲ್ಲಿ ಯೆಲ್ಲೋ ಬೋರ್ಡ್ ಕಾರನ್ನು ತಡೆದು ಚಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಕಾರು ಓಡಿಸದಂತೆ ಪ್ರತಿಭಟನಾಕಾರರು ಎಚ್ಚರಿಕೆ ಕೊಟ್ಟಿದ್ದು, ಈ ವೇಳೆ ದೇವ್ರಾಣೆಗೂ ನಾನು ಡ್ಯೂಟಿ ಮಾಡಿಲ್ಲ, ಮನೆಗೆ ವಾಪಾಸ್ ಆಗುತ್ತಿದ್ದೆನೆ ಅಷ್ಟೇ ಎಂದು ಟ್ಯಾಕ್ಸಿ ಚಾಲಕ ಗೋಗರಿದ್ದಾರೆ.
ಬೊಮ್ಮನಹಳ್ಳಿಯ ಮುಖ್ಯ ರಸ್ತೆಯಲ್ಲೇ ರ‍್ಯಾಪಿಡೊ ಬೈಕ್ ಚಾಲಕನ ಮೇಲೆ ಖಾಸಗಿ ಸಾರಿಗೆ ಒಕ್ಕೂಟದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಒಕ್ಕೂಟದವರೇ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದು, ಸ್ಥಳಕ್ಕೆ ಬೈಕ್ ಚಾಲಕ ಬರುತ್ತಿದ್ದಂತೆ ಹಲ್ಲೆ ನಡೆಸಿದ್ದಾರೆ. ಹೆಲ್ಮೆಟ್ ಹೊಡೆದು ಹಾಕಿ, ರ‍್ಯಾಪಿಡೋ ಬೈಕ್ ಚಾಲಕನಿಗೆ ಆವಾಜ್ ಹಾಕಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ