ಬೆಂಗಳೂರು: ಪೋಷಕರೇ ನೀವೇನಾದರೂ ಸೋಮವಾರ (ಸೆ.11) ಬೆಳಗ್ಗೆ ಮನೆ ಮುಂದೆ ಸ್ಕೂಲ್ ವ್ಯಾನ್, ಬಸ್, ಆಟೋ, ಕಾರು ಬರುತ್ತೆ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ ಎಂದುಕೊಂಡರೆ ತೊಂದರೆ ಗ್ಯಾರಂಟಿ. ಯಾಕೆಂದರೆ ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟ ಸಮರಕ್ಕೆ ಮುಂದಾಗಿದ್ದು, ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿದೆ.
ಹೀಗಾಗಿ ಸೆಪ್ಟೆಂಬರ್ 10ರ ಭಾನುವಾರ ರಾತ್ರಿ 12 ಗಂಟೆಯಿಂದ ಸೋಮವಾರ ರಾತ್ರಿ 12 ಗಂಟೆವರೆಗೆ ಖಾಸಗಿ ಸಾರಿಗೆ ಸೇವೆಗಳು ಬಂದ್ ಆಗಲಿವೆ. ಖಾಸಗಿ ಬಸ್‌ಗಳು, ಮಿನಿ ಲಗೇಜ್ ವಾಹನಗಳು, ಸ್ಕೂಲ್ ಬಸ್, ವ್ಯಾನ್, ಆಟೋ ಸೇರಿದಂತೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಕಂಪೆನಿ ಕ್ಯಾಬ್‌ಗಳ ಓಡಾಟ ಇರುವುದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ.
ಬೆಂಗಳೂರು ಬಂದ್ ಬಿಸಿ ಶಾಲಾ ಮಕ್ಕಳ ಓಡಾಟಕ್ಕೂ ತಟ್ಟಲಿದೆ. ಸ್ಕೂಲ್ ಬಸ್, ವ್ಯಾನ್, ಆಟೋ ಯಾವುದು ಇರುವುದಿಲ್ಲ. ಈ ಕಾರಣದಿಂದಾಗಿ ನಿಮ್ಮ ಮಕ್ಕಳು ಸರಿಯಾದ ಸಮಯಕ್ಕೆ ಶಾಲೆಗೆ ಹೋಗಬೇಕಾದರೆ ನಿಮ್ಮ ಸ್ವಂತ ವಾಹನ ಅಥವಾ ಬಿಎಂಟಿಸಿ ಬಸ್ ಗಟ್ಟಿ.
ರಜೆ ಘೋಷಿಸಿದ ಖಾಸಗಿ ಶಾಲೆಗಳು
ಖಾಸಗಿ ಸಾರಿಗೆ ಒಕ್ಕೂಟದಿಂದ ಬಂದ್ ಕರೆ ನೀಡುವುದರಿಂದ ಮುಂಜಾಗ್ರತಾ ಕ್ರಮವಾಗಿ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿವೆ. ಈಗಾಗಲೇ ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಆರ್ಕಿಡ್ ಶಾಲೆ ಸೇರಿದಂತೆ ಹಲವು ಶಾಲೆಗಳು ಮಕ್ಕಳಿಗೆ ರಜೆ ನೀಡಿವೆ. ಈ ಬಗ್ಗೆ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸೂಚನೆ ನೀಡಿದೆ. ಖಾಸಗಿ ಸಾರಿಗೆ ಒಕ್ಕೂಟಗಳ ಬಂದ್ ಹಿನ್ನೆಲೆ ರಜೆ ಘೋಷಣೆ ಎಂದು ಉಲ್ಲೇಖಿಸಿದೆ. ಸದ್ಯ ಇತರೆ ಶಾಲೆಗಳು ರಜೆ ಬಗ್ಗೆ ಸ್ಪಷ್ಟ ನಿಲುವು ಹೊಂದಿಲ್ಲ. ಎಂದಿನಂತೆ ಬಹುತೇಕ ಕಡೆಗಳಲ್ಲಿ ಶಾಲೆ ನಡೆಯಲಿದೆ.
ಚಾಲಕರ ಅಷ್ಟ ದಿಗ್ಬಂಧನ!
ಸೆ.11ರಂದು ಪ್ರಮುಖ ಜಂಕ್ಷನ್, ಹೆದ್ದಾರಿಯಲ್ಲಿ ವಾಹನಗಳ ತಡೆಗೆ ಚಾಲಕರು ಯೋಜನೆ ರೂಪಿಸಿದ್ದಾರೆ. ಮೆಜೆಸ್ಟಿಕ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ರ‍್ಯಾಲಿ ನಡೆಸಿ, ಮತ್ತೊಮ್ಮೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಸರ್ಕಾರವು ಲಿಖಿತ ಆದೇಶ ನೀಡುವವರೆಗೂ ಬಂದ್ ಕೈ ಬಿಡದಿರಲು ತೀರ್ಮಾನಿಸಿದ್ದಾರೆ.
ಮೆರವಣಿಗೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆದಿದ್ದು, ನೆಲಮಂಗಲ , ವೈಟ್ ಫೀಲ್ಡ್, ಕೆಂಗೇರಿ, ಕೆ.ಆರ್ ಪುರಂ, ಹೆಬ್ಬಾಳದಿಂದ ರ‍್ಯಾಲಿ ಬಂದು ಫ್ರೀಡಂ ಪಾರ್ಕ್ ಸೇರಲಿದ್ದಾರೆ. ಪೊಲೀಸರು ರ‍್ಯಾಲಿ ಹತ್ತಿಕ್ಕುವ ಪ್ರಯತ್ನ ಮಾಡಿದರೆ, ಸ್ಥಳದಲ್ಲೇ ರಸ್ತೆ ತಡೆದು ಪ್ರತಿಭಟನೆ ನಡೆಸಲು ಒಕ್ಕೂಟ ಪ್ಲ್ಯಾನ್ ಮಾಡಿದೆ.
ಟ್ರಾಫಿಕ್ ಕಿರಿಕಿರಿ
ಒಂದು ಕಡೆ ಖಾಸಗಿ ವಾಹನಗಳು ಸಿಗದೆ ಪ್ರಯಾಣಿಕರ ಪರದಾಟ ಅನುಭವಿಸಿದರೆ ಮತ್ತೊಂದು ಕಡೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಖಾಸಗಿ ವಾಹನ ಚಾಲಕರ ರ‍್ಯಾಲಿಯಿಂದಾಗಿ ಮೆಜಸ್ಟಿಕ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಬಹುದು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ