Site icon Vistara News

Bengaluru Metro: ಮೆಟ್ರೋ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರಿಡಲು ಒತ್ತಾಯ

Bengaluru Metro

Bengaluru Metro

ಬೆಂಗಳೂರು: ಮೆಟ್ರೋ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರರ ಹೆಸರಿಡಬೇಕೆಂಬ ಕೂಗು ಮತ್ತೆ ಕೇಳಿ ಬಂದಿದೆ. ಬೆಂಗಳೂರಿನ ಪ್ರಮುಖ ಸ್ಥಳ, ನಿಲ್ದಾಣಗಳಿಗೆ (Bengaluru Metro) ಈಗಾಗಲೇ ಪ್ರಸಿದ್ಧ ಹೆಸರುಗಳ ನಾಮಕರಣ ಮಾಡಲಾಗಿದೆ. ಇದೀಗ ಮೆಟ್ರೋ ನಿಲ್ದಾಣಕ್ಕೆ ಬಸವಣ್ಣನವರ ಹೆಸರಿಡಬೇಕೆಂದು ಒತ್ತಾಯ ಬಂದಿದೆ. ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಸದಸ್ಯರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Cm Basavarajbommai) ಅವರಿಗೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ ಶುಕ್ರವಾರ ನಡೆಯುವ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಮಹಾವೇದಿಕೆ, ಇನ್ನಿತರ ಸಂಘ ಸಂಸ್ಥೆಗಳು ಜಂಟಿಯಾಗಿ ಸೇರಿ ಮನವಿ ಪತ್ರವನ್ನು ನೀಡಿದೆ. 12ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವಕ್ಕೆ ಬುನಾದಿ ಹಾಕಿದ ಸಮಾನತೆಯ ಹರಿಕಾರ, ವರ್ಗ, ವರ್ಣ, ಅಂತಸ್ತುಗಳ ಭೇದವಿಲ್ಲದೇ, ಲಿಂಗ ತಾರತಮ್ಯವಿಲ್ಲದೇ ಸರ್ವರಿಗೂ ಸಮಾನತೆಯನ್ನು ಸಾರಿದ ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಹೆಸರನ್ನು ಬೆಂಗಳೂರಿನ ಮೆಟ್ರೋಗೆ ನಾಮಕರಣ ಮಾಡಲು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯು ಮನವಿ ಮಾಡಿದೆ.

ಈಗಾಗಲೇ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಹೆಸರನ್ನು ಹಾಗೂ ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರ ಹೆಸರನ್ನು ಇಡಲಾಗಿದೆ. ದೆಹಲಿಯ ಪಾರ್ಲಿಮೆಂಟ್ ಭವನದ ಎದುರು ಹಾಗೂ ಪ್ರಜಾಪ್ರಭುತ್ವಕ್ಕೆ ಮಾದರಿಯಾದ ಬ್ರಿಟನ್‌ ಸಂಸತ್ತಿನ ಎದುರು ಥೇಮ್ಸ್ ನದಿಯ ದಡದಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯು ಅನಾವರಣಗೊಂಡಿದೆ.

ಇದನ್ನೂ ಓದಿ: Amit Shah Visit : ವಿಜಯೇಂದ್ರ ಹೆಗಲ ಮೇಲೆ ಕೈ, ಅವರಿಂದಲೇ ಹೂಗುಚ್ಛ ಸ್ವೀಕಾರ; ದೊಡ್ಡ ಸಂದೇಶ ರವಾನಿಸಿದ ಅಮಿತ್‌ ಶಾ

ದೇಶ, ವಿದೇಶಗಳಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿಯು ಅನಾವರಣಗೊಳ್ಳುತ್ತಿರುವ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಮೆಟ್ರೋಗೆ ಬಸವೇಶ್ವರ ಮೆಟ್ರೋ ಎಂದು ನಾಮಕರಣ ಮಾಡಲು ಮನವಿ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version