Site icon Vistara News

Bengaluru News: ಯುವಕರು ಕೈ ಚಾಚದೇ ಕೊಡುವ ಕೈಯಾಗಲಿ; ಯುವಶಕ್ತಿ ಯೋಜನೆಯಲ್ಲಿ ಸಿಎಂ ಬೊಮ್ಮಾಯಿ

CM Bommai launches Yuva Shakti scheme

CM Bommai launches Yuva Shakti scheme

ಬೆಂಗಳೂರು: ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ (Yuva Shakti scheme) 12 ಸಾವಿರ ಯುವ ಸಂಘಗಳನ್ನು ರಚಿಸಲಾಗಿದೆ. ಆ ಮೂಲಕ ಯುವಕರಿಗೆ ತರಬೇತಿ, ಉತ್ಪಾದನೆ, ಮಾರುಕಟ್ಟೆ, ಬ್ಯಾಂಕ್ ಸಹಾಯ ನೀಡಿ ಸ್ವಯಂ ಉದ್ಯೋಗಿಯಾಗಲು ನೆರವು ನೀಡಲಾಗುತ್ತಿದೆ. ಈ ರೀತಿಯ ಯೋಜನೆ ರಾಜ್ಯದಲ್ಲಿ ಈವರೆಗೆ ಇರಲಿಲ್ಲ. ನಮ್ಮ ಯುವಕರು ಕೈ ಚಾಚಬಾರದು ಅವರು ಕೊಡುವ ಕೈ ಆಗಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ (Cm Basavaraja bommai) ತಿಳಿಸಿದರು.

ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ವಿತರಣೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ ನೀಡಿದರು. ದುಡಿಮೆಗೆ ಗೌರವ ದೊರೆತರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದ ಅವರು, ಮನಸ್ಸಿನಲ್ಲಿ ಸಂಕಲ್ಪ ಸಾಧಿಸುವ ಛಲ‌ ಇದ್ದರೆ‌ ಏನಾದರೂ ಸಾಧಿಸಬಹುದು. ಸ್ವಾಮಿ ವಿವೇಕಾನಂದರು `ಶಕ್ತಿ ನಿಮ್ಮ ಒಳಗಡೆ ಇದೆ, ನೀವು ಏನು ಬೇಕಾದರು ಮಾಡಬಲ್ಲಿರಿ’ ಎಂದಿದ್ದಾರೆ. ನಿರಂತರ ಪ್ರಯತ್ನವಿದ್ದರೆ ಯಾವುದೂ ಅಸಾಧ್ಯವಲ್ಲ. ದುಡಿಮೆಗೆ ಪ್ರೋತ್ಸಾಹ ನೀಡಲು ಈ ಎಲ್ಲ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ.

ಮಹಿಳೆಯರ ಸಾಮರ್ಥ್ಯ ರಾಜ್ಯಕ್ಕೆ ಉಪಯೋಗ ಆಗಬೇಕು ಎಂದು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಮೊದಲ ಕಂತು 50 ಸಾವಿರ ರೂ.ಗಳನ್ನು 10 ಸಾವಿರ ಸಂಘಕ್ಕೆ ನೀಡಿದ್ದು, ಎರಡನೇ ಕಂತಿನಲ್ಲಿ 50 ಸಾವಿರ ರೂಪಾಯಿ ದೊರೆಯಲಿದೆ. 20 ಸಾವಿರ ಸಂಘಗಳಿಗೆ ನೇರವಾಗಿ ಅವರ ಖಾತೆಗಳಿಗೆ ಜಮಾ ಆಗಿದೆ. ಅವರಿಗೂ ತರಬೇತಿ ನೀಡಿ ಉತ್ಪಾದನೆಗೆ ಪೂರಕವಾಗಿ ನೆರವು ನೀಡಲಾಗುತ್ತಿದೆ. ಈ ವರ್ಷದ ಬಜೆಟ್‌ನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ.ಗಳನ್ನು ನೀಡುವ ಯೋಜನೆಗೆ ಅನುದಾನ ಮೀಸಲಿಡಲಾಗಿದೆ. ಯೋಜನೆ ಕೂಡಲೇ ಪ್ರಾರಂಭವಾಗಲಿದೆ ಎಂದರು. ಅತ್ಯಂತ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಸರ್ಕಾರ ವಿಶೇಷ ಕಾಳಜಿ ಮಾಡುತ್ತಿದೆ ಎಂದರು.

ಆಟೊ ಚಾಲಕರ ಮಕ್ಕಳಿಗೆ ವಿದ್ಯಾನಿಧಿ

ಆಟೊ ಚಾಲಕರು ಹಗಲಿರುಳು ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ 2.5 ಲಕ್ಷ ಆಟೊ ಚಾಲಕರಿದ್ದಾರೆ. ಅವರಿಗೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ಯೋಜನೆ‌ ಜಾರಿಗೆ ತರಲಾಗಿದೆ. 15 ಸಾವಿರ ಆಟೊ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಿಸಲಾಗಿದೆ. ಶಾಲಾ/ ಕಾಲೇಜು ಪ್ರವೇಶ ಪ್ರಮಾಣ ಪತ್ರ ನೀಡುವವರಿಗೆ 2500 ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕುರಿಗಾಹಿಗಳಿಗೆ ಆರ್ಥಿಕ ನೆರವು

ನೆಲೆಯಿಲ್ಲದ ಕುರಿಗಾಹಿಗಳಿಗೆ ಕಳೆದ ವರ್ಷ ಕುರಿ ದೊಡ್ಡಿ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ ಹಾಗೂ ಕುರಿ ಸತ್ತರೆ ಪರಿಹಾರ ನೀಡಲಾಗುತ್ತಿದೆ. ಕುರಿಗಾಹಿಗಳಿಗೆ 355 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 20 ಕುರಿ ಒಂದು ಮೇಕೆಯನ್ನು ಕೊಳ್ಳಲು ಪ್ರತಿಯೊಬ್ಬರಿಗೆ 1.31 ಲಕ್ಷ ರೂ. ನೀಡಿ ಈ ವರ್ಷ 20 ಸಾವಿರ ಕುರಿಗಾಹಿಗಳಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಅಮೃತ ಕುರಿಗಾಹಿ ಯೋಜನೆ ಚಾಲನೆ ವೇಳೆ ಸಿಎಂ ಸೇರಿ ಸಚಿವರು ಹಾಗೂ ಶಾಸಕರು ಕಂಬಳಿ ಧರಿಸಿದ್ದರು

ಕುರಿ ಉಣ್ಣೆ ಉತ್ಪಾದನೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಇದ್ದು, ಉತ್ಪಾದನೆಯನ್ನು ಮಾರುಕಟ್ಟೆಗೆ ಅಮೃತ ಕುರಿಗಾಹಿ ಯೋಜನೆ ಜೋಡಿಸುತ್ತದೆ. ಪೂರ್ಣ ಪ್ರಮಾಣದ ವ್ಯಾಪಾರಕ್ಕೆ 20 ಸಾವಿರ ಕುರಿಗಾಹಿಗಳಿಗೆ ಯೋಜನೆ ತಲುಪಿದೆ. ಇನ್ನೂ 50 ಸಾವಿರ ಕುರಿಗಾಹಿಗಳ ಸಂಘಗಳಿಗೆ ಯೋಜನೆಯ ಫಲ ನೀಡಲಾಗುವುದು. ಕುರಿ ಮಾಂಸ ಉತ್ಪಾದನೆ ಹೆಚ್ಚಳವಾಗಿ ಮಾಂಸ ವಿದೇಶಗಳಿಗೆ ರಪ್ತು ಆಗಬೇಕು. ಕುರಿಗಾಹಿಗಳ ಆದಾಯ ದ್ವಿಗುಣವಾಗಬೇಕು ಎಂದು ತಿಳಿಸಿದರು.

ಶಿಕ್ಷಣದಿಂದ ಬದಲಾವಣೆ

ಕಳೆದ ಒಂದು ವರ್ಷದಲ್ಲಿ 50 ಕನಕದಾಸ ಹಾಸ್ಟೆಲ್‌ ನಿರ್ಮಾಣ ಮಾಡಲಾಗುತ್ತಿದೆ. 5 ಮೆಗಾ ಹಾಸ್ಟೆಲ್ , ಮುಂದಿನ ವರ್ಷ ಐದು ಸಾವಿರ ಮಕ್ಕಳಿಗೆ ಹಾಸ್ಟೆಲ್‌ಗಳನ್ನು ತೆರೆಯಲಾಗುವುದು. ಶಿಕ್ಷಣದಿಂದ ಬದಲಾವಣೆ ಸಾಧ್ಯ. ಹಿಂದುಳಿದ ವರ್ಗಗಳಿಗೆ ಆರ್ಥಿಕ, ಶಿಕ್ಷಣ ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದಲ್ಲಿ ಬದಲಾವಣೆ ತರಲಾಗಿದೆ ಎಂದರು.

ಇದನ್ನೂ ಓದಿ: Modi In Karnataka: ಮಾ. 25ರಂದು ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ; ಮೆಡಿಕಲ್‌ ಕಾಲೇಜು ಉದ್ಘಾಟನೆ

ದುಡಿಯುವ ವರ್ಗಗಳಿಗೆ ಪ್ರತಿಯೊಬ್ಬರಿಗೆ 50 ಸಾವಿರ ರೂ. ನೀಡಿ ಅವರ ಉದ್ಯೋಗಕ್ಕೆ ಅನುಕೂಲ ಮಾಡುವ ಕಾಯಕ ಯೋಜನೆ ಜಾರಿಯಲ್ಲಿದೆ. ನಾಡುಕಟ್ಟಲು ದುಡಿಯುವ ವರ್ಗದಿಂದ ಮಾತ್ರ ಸಾಧ್ಯ. ಕುರಿಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ. ವಿದ್ಯಾನಿಧಿಯಿಂದ 11 ಲಕ್ಷ ರೈತರ ಮಕ್ಕಳಿಗೆ, ಮೀನುಗಾರರು, ನೇಕಾರರ ಮಕ್ಕಳಿಗೆ ಅನುಕೂಲ ಆಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಸಿ.ನಾರಾಯಣಗೌಡ, ಪ್ರಭು ಚೌಹಾಣ್, ಸಿ.ಎನ್. ಅಶ್ವತ್ಥನಾರಾಯಣ, ಶಾಸಕ ರಿಜ್ವಾನ್ ಅರ್ಷದ್ ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version