ಬೆಂಗಳೂರು: ಬಿಜೆಪಿ (BJP) ಮತ್ತು ಆರೆಸ್ಸೆಸ್ (RSS) ವಿಷವಿದ್ದಂತೆ. ಅದರ ರುಚಿ ನೋಡಬೇಡಿ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಬಿಜೆಪಿ ನಿಯೋಗವು ಬುಧವಾರ ಚುನಾವಣಾ ಆಯೋಗ ಕಚೇರಿಗೆ ದೂರು (Bengaluru News) ನೀಡಿದೆ.
ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್, ಆರ್ಥಿಕ ಪ್ರಕೋಷ್ಟದ ರಾಜ್ಯ ಸಂಚಾಲಕ ಪ್ರಶಾಂತ್ ಜಿ.ಎಸ್, ಜಿಲ್ಲಾ ವಕ್ತಾರರಾದ ಕಾಂತಿ ಶೆಟ್ಟಿ, ಚುನಾವಣಾ ಆಯೋಗ ಸಮಿತಿಯ ವಿನೋದ್‍ಕುಮಾರ್, ರಾಜ್ಯ ಮಾಧ್ಯಮ ವಿಭಾಗದ ಸದಸ್ಯ ಅವಿನಾಶ್ ಹಾಗೂ ಇತರರು ಬುಧವಾರ ನಗರದ ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿ ದೂರು ನೀಡಿದರು.
ಇದನ್ನೂ ಓದಿ: Borewell Tragedy: ವಿಜಯಪುರ; ಅಜ್ಜನ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ, ರಕ್ಷಿಸಲು ಹರಸಾಹಸ
ಖರ್ಗೆಯವರು ತಮ್ಮ ಹೇಳಿಕೆ ಮೂಲಕ ಮತದಾರರನ್ನು ನಮ್ಮ ಪಕ್ಷದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಲಾಗಿದೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಚುನಾವಣಾ ಪ್ರಚಾರದಿಂದ ಕೂಡಲೇ ನಿರ್ಬಂಧಿಸಬೇಕು ಎಂದು ಆಗ್ರಹಿಸಲಾಗಿದೆ.
ಪ್ರಧಾನಿಯವರ ಫೋಟೊ ಬಳಸಿಕೊಂಡು ಸುಳ್ಳು ಆರೋಪ ಮಾಡುತ್ತಿರುವ ಯುವ ಕಾಂಗ್ರೆಸ್‍ನ ಮೀಡಿಯಾ ಪ್ಯಾನೆಲಿಸ್ಟ್ ಅಕ್ಷತಾ ರವಿಕುಮಾರ್ ಅವರ ಎಕ್ಸ್ (ಟ್ವಿಟರ್) ಖಾತೆಯನ್ನು ಕೂಡಲೇ ನಿರ್ಬಂಧಿಸುವಂತೆ ಇನ್ನೊಂದು ಪತ್ರದಲ್ಲಿ ಆಗ್ರಹಿಸಿದೆ.