Site icon Vistara News

Bengaluru News: ರಂಗೋಲಿ ಅಳಿಸಿದ್ದು ನಾನೇ ಎಂದ ಯುವತಿ; ಬೆಂಗಳೂರಲ್ಲಿ ಉತ್ತರ ಭಾರತದವರಿಗೆ ಬದುಕೋ ಹಕ್ಕಿಲ್ಲವೇ ಎಂದು ಪ್ರಶ್ನೆ

Bengaluru News

ಬೆಂಗಳೂರು: ನಗರದ ಬೊಮ್ಮನಹಳ್ಳಿಯ (Bengaluru News) ಅಪಾರ್ಟ್‌ಮೆಂಟ್‌ನ ಅಕ್ಕಪಕ್ಕದ ಮನೆಯವರ ರಂಗೋಲಿ ರಗಳೆ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿತ್ತು. ಮನೆ ಮುಂದೆ ಹಾಕಿದ ರಂಗೋಲಿ ಅಳಿಸಿ, ಚಪ್ಪಲಿ ಸ್ಟ್ಯಾಂಡ್‌ ಬೀಳಿಸುತ್ತಾಳೆ ಎಂದು ಉತ್ತರ ಭಾರತದ ಯುವತಿ ಮೇಲೆ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಯುವತಿ, ಹೌದು… ನಾನೇ ರಂಗೋಲಿ ಕೆಡಿಸಿದ್ದು, ಅದಕ್ಕೆ ಕಾರಣವಾದರೂ ಏನು ಎಂದು ಕೇಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಉತ್ತರ ಭಾರತದವರಿಗೆ ಬೆಂಗಳೂರಿನಲ್ಲಿ ಸುರಕ್ಷಿತ ಹಾಗೂ ನೆಮ್ಮದಿಯಾಗಿ ಬದುಕುವ ಹಕ್ಕಿಲ್ಲವೇ ಎಂದು ಕೇಳಿದ್ದಾಳೆ.

ಪಕ್ಕದ ಮನೆಯಾಕೆ ರಂಗೋಲಿ ಅಳಿಸುವುದು, ಶೂ ರ್ಯಾಕ್‌ ಅನ್ನು ಕಾಲಿನಲ್ಲಿ ಒದ್ದು ಬೀಳಿಸುತ್ತಿದ್ದಾಳೆ. ಈ ರೀತಿ ಸಾಕಷ್ಟು ಬಾರಿ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಸರಿತಾ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಪೋಸ್ಟ್‌ ಮಾಡಿ ಪೊಲೀಸರಿಗೆ ದೂರು ನೀಡಿದ್ದರು. ಮೂರನೇ ಮಹಡಿಯಲ್ಲಿರುವ ಮಂಜುನಾಥ್, ಸರಿತಾ ದಂಪತಿ ಹಾಗೂ ನೇಹಾ ಪ್ರಣಬ್, ಜ್ಯೋತಿ ಸಿಂಗ್ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದಾರೆ. ಆದರೆ, ಮನೆ ಮುಂದೆ ಇರುವ ಸಣ್ಣ ಜಾಗದಲ್ಲಿ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಇವರಿಬ್ಬರ ನಡುವೆ ಕಿರಿಕ್ ಆಗಿದೆ. ಇದೇ ಗಲಾಟೆ ದೊಡ್ಡ ಮಟ್ಟಕ್ಕೆ ತಲುಪಿ ದೂರು, ಪ್ರತಿ ದೂರು ಹಂತಕ್ಕೆ ತಲುಪಿತ್ತು.

ಇದನ್ನೂ ಓದಿ | Dead Body Found : ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ

ಯುವತಿ ಹೇಳಿದ್ದೇನು?

ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪಕ್ಕದ ಮನೆಯವರು ಹಾಕಿದ ರಂಗೋಲಿಯನ್ನು ಹಾಳು ಮಾಡಿದ್ದು ನಾನೇ. ನಾವು 2019ರಲ್ಲಿ ವಿವಾಹವಾಗಿ ಬೆಂಗಳೂರಿಗೆ ಬಂದಿದ್ದೆವು. ಕೋವಿಡ್‌ ಸಂದರ್ಭದಿಂದ ನಮಗೆ ಕನ್ನಡಿಗರ ಕುಟುಂಬ ಕಿರುಕುಳ ನೀಡಲು ಶುರು ಮಾಡಿತ್ತು. ಮನೆ ಮುಂದೆ ಕೇವಲ 5 ಮೀಟರ್ ಜಾಗ ಇದೆ. ಅದರಲ್ಲಿ ಈ ಕುಟುಂಬದವರೇ 3 ಮೀಟರ್ ಜಾಗ ಬ್ಲಾಕ್ ಮಾಡಿದ್ದಾರೆ. ಎಡಭಾಗದಲ್ಲಿ ಹೂವಿನ ಕುಂಡ, ಬಲಭಾಗದಲ್ಲಿ ಶೂ ರ್ಯಾಕ್ ಇಟ್ಟಿದ್ದಾರೆ. ಜೊತೆಗೆ ನಾವು ಓಡಾಡಲೂ ಜಾಗವಿಲ್ಲದಂತೆ 1.5 ಅಡಿ ರಂಗೋಲಿ ಹಾಕುತ್ತಿದ್ದಾರೆ. ನಾವು ಮನೆಯ ಬಾಗಿಲ ಬಳಿ ಹಾಕಿಸಿದ್ದ ಸೇಫ್ಟಿ ಗ್ರೀಲ್ ಅನ್ನು ಕೂಡ ಹಾಕಿಸಲು ಬಿಡದೇ ಅಸೋಸಿಯೇಷನ್‌ಗೆ ಹೇಳಿ ಓಪನ್ ಮಾಡಿಸಿದ್ದಾರೆ ಎಂದು ಯುವತಿ ಹೇಳಿದ್ದಾಳೆ.

ನಾವು ಓಡಾಡುವ ಜಾಗವನ್ನು ಸಂಪೂರ್ಣ ಬ್ಲಾಕ್ ಮಾಡಿದ್ದರು. ನಮಗೆ ಬರುವ ಪಾರ್ಸೆಲ್‌ಗಳನ್ನು ಕೂಡ ರಿಸೀವ್ ಮಾಡಿಕೊಳ್ಳೋಕೆ ಆಗುತ್ತಿರಲಿಲ್ಲ. ನಮ್ಮ ಊರಿನಿಂದ ಅಪ್ಪ, ಅಮ್ಮ, ಯಾರೇ ಸಂಬಂಧಿಗಳು ಬಂದರೂ ಅವರು ಓಡಾಡಲೂ ಕೂಡ ಜಾಗ ಇಲ್ಲದಂತೆ ಮಾಡುತ್ತಿದ್ದರು. ಜತೆಗೆ, ನಮ್ಮ ಮನೆಯಲ್ಲಿ ಎರಡು ಸಾಕು ಪ್ರಾಣಿಗಳಿವೆ. ಅವುಗಳನ್ನು ವಾಕಿಂಗ್ ಕರೆದುಕೊಂಡು ಹೋಗಲು ಬಿಡುತ್ತಿರಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಪಕ್ಕದ ಮನೆಯ ಮಂಜುನಾಥ್ ಅವರು, ನಮ್ಮ ಮನೆಯವರು ಓಡಾಡುವಾಗ ಸ್ವಲ್ಪ ರಂಗೋಲಿ ಹಾಳಾದರೂ ಪದೇ ಪದೇ ಕಾಲಿಂಗ್ ಬೆಲ್‌ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಇದನ್ನು ಪ್ರಶ್ನಿಸಿದರೆ ಆಗಾಗ ಧಮ್ಕಿ ಹಾಕುತ್ತಿದ್ದರು. ಅಲ್ಲದೇ ನಮ್ಮ ಮನೆ ಬಾಗಿಲಿಗೆ ಹೂ ಕುಂಡದಿಂದ ಹೊಡೆದು ಕಿರುಕುಳ ಕೊಡುತ್ತಿದ್ದರು. ದಬ್ಬಾಳಿಕೆಯನ್ನು ಪ್ರಶ್ನೆ ಮಾಡಿದರೆ ನಾನು ರಾಜಕೀಯ ಪಕ್ಷದವನು ಎಂದು ಬೆದರಿಸುತ್ತಿದ್ದರು. ಯಾಕೆ, ಉತ್ತರ ಭಾರತೀಯರಿಗೆ ಕರ್ನಾಟಕ ಮತ್ತು ಬೆಂಗಳೂರು ಸೇಫ್ ಅಲ್ಲವಾ ಎಂದು ನೇಹಾ ಪ್ರಶ್ನೆ ಮಾಡಿದ್ದಾರೆ.

ಬೆಡ್‌ ರೂಂ ಕಾಣಿಸುವಂತೆ ಸಿಸಿಟಿವಿ ಅಳವಡಿಕೆ

ಒಂದು ಕಡೆ ಮನೆ ಮುಂದೆ ರಂಗೋಲಿ ಅಳಿಸಿ, ಚಪ್ಪಲಿ ಸ್ಟ್ಯಾಂಡ್‌ ಬೀಳಿಸುತ್ತಾಳೆ ಎಂದು ಯುವತಿ ಮೇಲೆ ಮಂಜುನಾಥ್‌ ದಂಪತಿ ಪೊಲೀಸರಿಗೆ ದೂರು ನೀಡಿದ್ದರೆ. ಮತ್ತೊಂದೆಡೆ ಯುವತಿ ನೇಹಾ ವಾದವೇ ಬೇರೆ. ಅವರ ವಕೀಲೆ ಹೇಳುವಂತೆ ಬೆಡ್ ರೂಂ ಕಾಣಿಸುವಂತೆ ಮಂಜುನಾಥ್‌ ಮನೆಯವರು ಸಿಸಿಟಿವಿ ಹಾಕಿದ್ದಾರೆ. ಅದನ್ನು ತೆರವುಗೊಳಿಸಿ. ಇದು ನಮ್ಮ ಪ್ರೈವೆಸಿಗೆ ತೊಂದರೆ ಆಗುತ್ತಿದೆ ಎಂದು ನೇಹಾ ಮನವಿ ಮಾಡಿದ್ದರಂತೆ. ಸಿಸಿಟಿವಿ ತೆರವು ಮಾಡದೆ ಇದ್ದಾಗ, ಆರು ತಿಂಗಳ ಹಿಂದೆ ದೂರು ದಾಖಲು ಮಾಡಿದ್ದರಂತೆ. ನೇಹಾ ಕೊಟ್ಟ ಪ್ರತಿ ದೂರಿನ ಮೇಲೆ ಬೊಮ್ಮನಹಳ್ಳಿ ಪೊಲೀಸರು ಕಳೆದ ಡಿಸಂಬರ್‌ನಲ್ಲಿ ಮಂಜುನಾಥ್ ಮೇಲೆ 354A ಅಂದರೆ ಲೈಂಗಿಕ ದೌರ್ಜನ್ಯ ಆರೋಪದಡಿ‌ ಎಫ್ಐಆರ್ ದಾಖಲಿಸಿದ್ದರು.

ಈಕೆಯಿಂದ ಮಾನಸಿಕವಾಗಿ ಕಿರುಕುಳವಾಗುತ್ತಿದೆ. ಪ್ರತಿ ದಿನ ಜಗಳವಾಡಲು ಆಗುವುದಿಲ್ಲ. ಪ್ರಶ್ನೆ ಮಾಡಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾಳೆ ಎಂದು ಸರಿತಾ ಶಿಂಧೆ ಪೋಸ್ಟ್‌ ಮಾಡಿದ್ದರು. ಇನ್ನೂ ನಾವು ದೂರು ಕೊಟ್ಟರೆ ಪೊಲೀಸರು ಎನ್‌ಸಿಆರ್ ಮಾಡುತ್ತಾರೆ. ಆದರೆ ನಮ್ಮ ಮೇಲೆ ಪ್ರತಿ ದೂರು ಕೊಟ್ಟರೆ ಎಫ್ಐಆರ್ ಮಾಡುತ್ತಾರೆ. 354 A ಸೆಕ್ಷನ್ ಅಡಿಯಲ್ಲಿ ಕೇಸ್‌ ಹಾಕಿ, ಪೊಲೀಸ್ ಠಾಣೆಗೆ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು. ರಾತ್ರಿ ಇಡೀ ಠಾಣೆ ಮುಂದೆ ಕುಳಿತ ಮಂಜುನಾಥ್ ಹಾಗೂ ಸರಿತಾ ದಂಪತಿ, ಪೊಲೀಸರು ದೂರು ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

Exit mobile version