Site icon Vistara News

Bengaluru News: ಕನ್ನಡ-ಮಲೆಯಾಳಿ ಸಾಹಿತ್ಯ ಸಮ್ಮೇಳನ ಆಯೋಜಿಸಿ: ಸ್ಪೀಕರ್‌ ಯು.ಟಿ.ಖಾದರ್‌ ಸೂಚನೆ

Inauguration of Kannada learning classes for Malayali speakers

ಬೆಂಗಳೂರು: ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ (Bengaluru News) ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಕಾ ತರಗತಿಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಹಾಗೂ ಸಮಾಜದ ಅಭಿವೃದ್ಧಿಯಲ್ಲಿ ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚು ಭಾಷೆಯನ್ನು ಕಲಿಯುವವರು ಹೆಚ್ಚು ಸಾಧನೆ, ಯಶಸ್ಸು ಪಡೆಯುತ್ತಾರೆ. ನಾವು ಬೇರೆ ರಾಜ್ಯಗಳಿಗೆ ಹೋದಾಗ ಅಲ್ಲಿನ ಭಾಷೆಗೆ ಗೌರವ ಕೊಟ್ಟು ಭಾಷೆ ಕಲಿಯಲು ಮುಂದಾಗಬೇಕು. ಕರ್ನಾಟಕ ರಾಜ್ಯದಲ್ಲಿರುವ ಮಲೆಯಾಳಿ ಭಾಷಿಕರು ಕನ್ನಡ ಭಾಷೆ ಕಲಿಯುತ್ತಿರುವುದು ನಿಮ್ಮ ವ್ಯಕ್ತಿತ್ವ, ಆತ್ಮ ವಿಶ್ವಾಸ ಹೆಚ್ಚಿಸುವ ಜತೆಗೆ ಕರ್ನಾಟಕ ರಾಜ್ಯಕ್ಕೆ ಕೊಡುಗೆ ನೀಡಲು ಮುಂದಾಗಿರುವುದು ಸಂತೋಷದ ವಿಷಯ ಎಂದು ಹೇಳಿದರು.

ಇದನ್ನೂ ಓದಿ: Wonderla Offer: ವಂಡರ್‌ಲಾದಿಂದ ವಿಶೇಷ ಆಫರ್‌; 1 ಟಿಕೆಟ್‌ ಖರೀದಿಸಿದರೆ ಮತ್ತೊಂದು ಟಿಕೆಟ್‌ ಫ್ರೀ!

ಮಲೆಯಾಳಿ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಇಲ್ಲಿಗೆ ನಿಲ್ಲಬಾರದು. ಈ ಯೋಜನೆ ಹೆಚ್ಚು ವಿಸ್ತೃತವಾಗಿ ಪ್ರತಿ ಜಿಲ್ಲೆಗಳಲ್ಲಿರುವ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸ ಪ್ರಾಧಿಕಾರದಿಂದ ಆಗಬೇಕು. ಪ್ರಾಧಿಕಾರದಿಂದ ಆಯೋಜಿಸಿದ್ದ ಕನ್ನಡ ಕಲಿಕಾ ತರಗತಿಗಳಲ್ಲಿ ಕನ್ನಡ ಕಲಿತ ಮಲೆಯಾಳಿ ಭಾಷಿಕರಿಗಾಗಿ ಹಾಗೂ ಕೇರಳದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಜೀವನ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಭಾಷೆ ತುಂಬಾ ಪ್ರಮುಖವಾದುದು. ಹೆಚ್ಚು ಭಾಷೆ ಕಲಿತಷ್ಟು ವ್ಯಕ್ತಿತ್ವ ವಿಕಾಸನ ಆಗುವುದರೊಂದಿಗೆ ನಮ್ಮಲ್ಲಿನ ಜ್ಞಾನವೂ ಹೆಚ್ಚಾಗುತ್ತದೆ.

ಬೇರೆ ಬೇರೆ ಭಾಷೆಗಳಲ್ಲಿರುವ ಒಳ್ಳೆಯ ವಿಚಾರಗಳು ಕನ್ನಡಿಗರಿಗೆ ಪರಿಚಯವಾಗಬೇಕೆಂಬ ಉದ್ದೇಶದಿಂದ ಹಲವು ಪುಸ್ತಕಗಳನ್ನು ಅನುವಾದ ಮಾಡಿಸಲಾಗಿದೆ. ಕನ್ನಡ ಭಾಷೆಯಿಂದ ಮಲೆಯಾಳಿ ಭಾಷೆಗೆ ಮಲೆಯಾಳಿ ಭಾಷೆಯಿಂದ ಕನ್ನಡ ಭಾಷೆಗೆ ಹೆಚ್ಚೆಚ್ಚು ಕೃತಿಗಳು ಅನುವಾದವಾಗಬೇಕು. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕನ್ನಡ ಮತ್ತು ಮಲೆಯಾಳಿ ಭಾಷಿಕರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕರಾದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆ ಬಹಳ ಬಲಿಷ್ಠವಾಗಿ ಉಳಿಯಲು ರಾಜ್ಯಗಳ ಭಾಷೆಗಳು ಪ್ರಮುಖವಾದುದು. ಭಾಷೆ ದುರ್ಬಲವಾದರೆ ದೇಶದ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. 2011ರ ಜನಗಣತಿ ಪ್ರಕಾರ ಭಾರತದಲ್ಲಿ 19,509 ತಾಯ್ನುಡಿಗಳಿವೆ. ರಾಜ್ಯದಲ್ಲಿ 230ಕ್ಕೂ ಹೆಚ್ಚು ಭಾಷೆಗಳಿವೆ. ನಾವು ಎಲ್ಲರೂ ಸೇರಿ ರಾಜ್ಯ ಭಾಷೆಯನ್ನು ಬೆಳೆಸಬೇಕು ಅದರ ಜತೆಗೆ ಸಣ್ಣ ಭಾಷೆಗಳನ್ನು ಬೆಳೆಸಬೇಕು ಎಂದರು.

ಇದನ್ನೂ ಓದಿ: Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸುಧಾಕರನ್ ರಾಮಂತಳ್ಳಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಮತ್ತು ಮಲೆಯಾಳಂ ಮಿಷನ್ ಕೇರಳ ಸರ್ಕಾರ ಮತ್ತು ಕನ್ನಡ ಕಲಿಕಾ ಯೋಜನೆ ಸಂಚಾಲಕ ಟಾಮಿ ಜೆ. ಅಲುಂಕಲ್ ಉಪಸ್ಥಿತರಿದ್ದರು.

Exit mobile version