ಬೆಂಗಳೂರು: ಯೋಗ ದಿನಾಚರಣೆ (Yoga Day) ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಜನರು ಪ್ರತಿನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಆಗಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Bengaluru News) ತಿಳಿಸಿದರು.
ಆಯುಷ್ ಇಲಾಖೆಯು 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಇಂದಿನಿಂದ ಹಮ್ಮಿಕೊಂಡಿರುವ 10 ದಿನಗಳ ಯೋಗೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ 10 ದಿನಗಳಲ್ಲಿ ಯೋಗವನ್ನು ಹೇಳಿಕೊಡಲಾಗುತ್ತದೆ. ಅಲ್ಲದೇ ಆಯುರ್ವೇದ ಚಿಕಿತ್ಸಾ ಪದ್ದತಿಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಆಗಲಿದೆ ಎಂದ ಅವರು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯೋಗ ಹಾಗೂ ಆಯುರ್ವೇದದ ಮಹತ್ವ ನಮ್ಮ ಸಾಮಾನ್ಯ ಜನರಿಗೆ ತಲುಪಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Fortis Hospital: ನೈಜೀರಿಯನ್ ಯುವತಿಗೆ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’
ಯೋಗೋತ್ಸವದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳು/ಇಲಾಖೆಗಳು ಆಯುಷ್ಇಲಾಖೆ ಸಹಕಾರದೊಂದಿಗೆ ಜೂನ್ 11 ರಿಂದ 20 ರವರೆಗೆ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿವೆ. ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು /ಸಂಘ ಸಂಸ್ಥೆ ಯೋಗೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ 04 ಸಂಸ್ಥೆಗಳಲ್ಲಿ ಸುಮಾರು 4 ಲಕ್ಷ ಮಂದಿ ರಾಜ್ಯಾದ್ಯಂತ ಯೋಗ ಪ್ರದರ್ಶನವನ್ನು ಮಾಡುವುದರ ಮೂಲಕ ಯೋಗೋತ್ಸವನ್ನು ಆಚರಿಸಲಿದ್ದಾರೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯಿಂದ ಆರೋಗ್ಯಕರ ಜೀವನ ಶೈಲಿಯ ಕುರಿತು ಮಾಹಿತಿ ಹಾಗೂ ಆಯುಷ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರಿನಲ್ಲಿನ ಬೆಂಗಳೂರು ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಪ್ರಜಾಪಿತ ಬ್ರಹ್ಮಕುಮಾರಿ ಸಂಸ್ಥೆ, ಜೈನ್ ಯುನಿರ್ವಸಿಟಿ, ಲೂಲು ಮಾಲ್ ಹಾಗೂ ಮಾಲ್ ಆಫ್ ಏಷ್ಯಾ, ಸ್ಥಳಗಳಲ್ಲಿ ಯೋಗ ತರಬೇತಿ, ಆಯುಷ್ ವೈದ್ಯ ಪದ್ಧತಿಗಳ ಕುರಿತು ಅರಿವು ಹಾಗೂ ಆಯುಷ್ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯುಷ್ ಇಲಾಖಾ ವತಿಯಿಂದ ನಡೆಸಲಾಗುತ್ತಿದೆ.
ಈ ಕಾರ್ಯಕ್ರಮಗಳಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಗಂಗೋತ್ರಿ ಟ್ರಸ್ಟ್, ಶ್ರೀ ಪತಂಜಲಿ ಯೋಗಾಶ್ರಮ ಟ್ರಸ್ಟ್, ಸಂಯಮ ಟ್ರಸ್ಟ್ ಹಾಗೂ ಇನ್ನಿತರ ಖಾಸಗಿ ಯೋಗ ಸಂಸ್ಥೆಗಳು ಅಗತ್ಯ ಸಹಕಾರವನ್ನು ನೀಡಲಿದ್ದು, ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ದೊರೆಯಲಿದೆ.
ಇದೇ ಸಂದರ್ಭದಲ್ಲಿ ಆಯುರ್ವೇದ ಶಬ್ದಕೋಶ, ಯೋಗೋತ್ಸವ ಪೋಸ್ಟರ್, ಯೋಗೋತ್ಸವ ವೆಬ್‌ಸೈಟ್‌ಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಆಯುಕ್ತ ಶ್ರೀನಿವಾಸುಲು, ಟ್ರಾನ್ಸ್ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಉಪಕುಲಪತಿ ದರ್ಶನ್ ಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.