Site icon Vistara News

Bengaluru News: ಕಲಾ ರಸಿಕರ ಮನಸೂರೆಗೊಳಿಸಿದ ‘ಶ್ರದ್ಧಾ ನೃತ್ಯಾರ್ಣವʼ ವಿಶೇಷ ನೃತ್ಯೋತ್ಸವ

Shraddha Nrityarnava special dance festival in Bengaluru

ಬೆಂಗಳೂರು: ನಗರದ ಶ್ರದ್ಧಾ ನೃತ್ಯ ಸಂಸ್ಥೆಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಶ್ರದ್ಧಾ ನೃತ್ಯಾರ್ಣವ’ ವಿಶೇಷ ನೃತ್ಯೋತ್ಸವ ಕಲಾ ರಸಿಕರ (Bengaluru News) ಮನಸೂರೆಗೊಂಡಿತು.

ನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉತ್ಸಾಹಿ ಕಲಾವಿದರಿಂದ ನೃತ್ಯ ಸಮರ್ಪಣೆಯಾಗಿದ್ದು ವಿಶೇಷ. ಇದುವೇ ‘ನೃತ್ಯಾರ್ಣವʼದ ವಿಶೇಷ.

ದೇಶದ ಸುವಿಖ್ಯಾತ ರಚನೆಕಾರರ ಕೃತಿಗಳನ್ನು ಮೊದಲ ಹಂತದಲ್ಲಿ ನೃತ್ಯಾರ್ಣವಕ್ಕೆ ಸಮರ್ಥವಾಗಿ ಬಳಸಿಕೊಂಡು ಅದಕ್ಕೆ ತಕ್ಕಂತೆ ಚೇತೋಹಾರಿಯಾಗಿ ಯುವತಿಯರು ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ವಾಹನ ಬಿಡಿಭಾಗ ತಯಾರಿಕೆ; ಬಂಡವಾಳ ಹೂಡಿಕೆಗೆ ದ.ಕೊರಿಯಾ ಒಲವು

ಉತುಕ್ಕಾಡು ವೆಂಕಟಸುಬ್ಬಯ್ಯ ಅವರ ಆನಂದ ನರ್ತನ ಗಣಪತಿ, ತುಳಸೀ ದಾಸರ ಶ್ರೀ ರಾಮಚಂದ್ರ ಕೃಪಾಳು ಭಜಮನ, ಪದ್ಮಚರಣರ ಪ್ರದೋಷ ಸಮಯದಿ ಪರಶಿವ ತಾಂಡವ, ಪುರಂದರ ದಾಸರ ಭಾಗ್ಯದ ಲಕ್ಷ್ಮಿ ಬಾರಮ್ಮ – ಕೃತಿಗಳಿಗೆ ಸಂಸ್ಥೆಯ ಕಿರಿಯ ಕಲಾವಿದರು ನರ್ತಿಸಿ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯಿತು.

ಕಲಾಭಿವ್ಯಕ್ತಿಗೆ ಹೊಸ ಆಯಾಮ

ಕಾರ್ಯಕ್ರಮದಲ್ಲಿ ‘ಅಮೃತ ಮಂಥನ’ ನೃತ್ಯ ರೂಪಕ ಕಲಾಭಿವ್ಯಕ್ತಿಗೆ ಹೊಸ ಆಯಾಮವನ್ನೇ ನೀಡಿತು. ಸಂಸ್ಥೆ ನಿರ್ದೇಶಕಿ ಶಮಾ ಕೃಷ್ಣ ಹಾಗು ಹಿರಿಯ ಕಲಾವಿದರಿಂದ ಅಮೃತ ಮಂಥನ ಎಂಬುವ ರಸಪೂರ್ಣ ನೃತ್ಯ ನಾಟಕದ ಪ್ರಸ್ತುತಿ ವಿಶೇಷವಾಗಿ ಮೂಡಿಬಂತು. ಇದಕ್ಕೆ ಶತಾವಧಾನಿ ಡಾ. ಆರ್. ಗಣೇಶ್‌ರ ಸಾಹಿತ್ಯ, ಕಲಾವಿದ ಪ್ರವೀಣ್ ಡಿ. ರಾವ್ ಸಂಗೀತ ಮತ್ತು ವಿದುಷಿ ಶಮಾ ಕೃಷ್ಣ ಅವರ ನೃತ್ಯ ಸಂಯೋಜನೆ ಸಮರ್ಥವಾದ ನ್ಯಾಯ ಒದಗಿಸಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ʼಅಮೃತ ಮಂಥನ’ ಕ್ಕೆ ಖ್ಯಾತ ಸಂಶೋಧಕಿ ಪ್ರೊ. ಕರುಣಾ ವಿಜಯೇಂದ್ರ, ಖ್ಯಾತ ನೃತ್ಯ ಪಟುಗಳಾದ ಶೇಷಾದ್ರಿ ಅಯ್ಯಂಗಾರ್ ಮತ್ತು ನವ್ಯಾ ನಟರಾಜ ಅವರು ಕಲಾ ರಸದೌತಣಕ್ಕೆ ಸಾಕ್ಷಿಯಾಗಿದ್ದು ಬಹು ವಿಶೇಷ.

ಇದನ್ನೂ ಓದಿ: Gold Rate Today: ಮತ್ತೆ ಮೇಲ್ಮುಖವಾಗಿ ಸಾಗಿದ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

ಹಿರಿಯ ಭರತನಾಟ್ಯ ಕಲಾವಿದೆ ವಿದುಷಿ ಶಮಾ ಕೃಷ್ಣ ಮಾತನಾಡಿ, ನನ್ನ ಕನಸು, ಕಲ್ಪನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಿರಿಯ ಮತ್ತು ಕಿರಿಯ ಶಿಷ್ಯರು ಸೂಕ್ತವಾಗಿ ಸ್ಪಂದಿಸಿದ್ದಾರೆ. ನೃತ್ಯ ರೂಪಕ ಪ್ರಸ್ತುತಿ ಸಂದರ್ಭ ಕಲಾವಿದರ ಪ್ರತಿ ಹೆಜ್ಜೆಯಲ್ಲೂ ಹೊಸತನ ಮೂಡಿದೆ. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಹೊಸ ಪ್ರಯೋಗಕ್ಕೆ ಅಣಿಯಾಗಲು ‘ನೃತ್ಯಾರ್ಣವ’ ಹೊಸ ಚೈತನ್ಯ ನೀಡಿದೆ ಎಂದು ತಿಳಿಸಿದ್ದಾರೆ.

Exit mobile version