ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ (New Year Celebration) ಡಿಸೆಂಬರ್ 31ರಂದು ರಾತ್ರಿ ಕಬ್ಬನ್ಪಾರ್ಕ್ ಉಪವಿಭಾಗದ ಅಶೋಕನಗರ ಮತ್ತು ಕಬ್ಬನ್ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಆರ್ಎಚ್ಪಿ ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರ ಬಾ ರಸ್ತೆ ಸೇರಿ ವಿಭಾಗದ ವಿವಿಧ ರಸ್ತೆಗಳಲ್ಲಿ ಸಾವಿರಾರು ಜನ ಸೇರುವುದರಿಂದ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು ಎಂದು ಕೇಂದ್ರ ವಿಭಾಗದ ಎಸಿಪಿ ಮತ್ತು ಠಾಣಾಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಸೂಚಿಸಿದ್ದಾರೆ.
ಕಬ್ಬನ್ಪಾರ್ಕ್ ಉಪವಿಭಾಗದ ಅಶೋಕನಗರ ಮತ್ತು ಕಬ್ಬನ್ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಚಿಸಿರುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪೊಲೀಸ್ ಠಾಣಾಧಿಕಾರಿಗಳಿಗೆ ನೀಡಿರುವ ಸೂಚನೆಗಳು
- ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ಗಸ್ತು ನಿರ್ವಹಿಸಲು ಕ್ರಮ, ಹೊಸ ವರ್ಷಾಚರಣೆಯನ್ನು ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹಿಸಿ ಅಂತಹ ಸಂಘ ಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು.
- ಮಾಲ್ಗಳಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಬಗ್ಗೆ, ಮಾಲ್ಗಳಿಗೆ ಆಗಮಿಸುವ ವಾಹನಗಳನ್ನು ಸೂಕ್ತವಾಗಿ ಪರಿಶೀಲಿಸಿದ ನಂತರ ಒಳಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಮಾಲ್ಗಳ ಮಾಲೀಕರಿಗೆ ಸೂಕ್ತ ತಿಳಿವಳಿಕೆ ನೀಡುವುದು.
- ಎಲ್ಲಾ ಪಿಐಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡು ಮೇಲುಸ್ತುವಾರಿ ವಹಿಸುವುದು. ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ವಾಹನ ತಪಾಸಣಾ ಪಾಯಿಂಟ್ / ಪಿಕೆಟಿಂಗ್ ಪಾಯಿಂಟ್ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸುವುದು.
- ರಾತ್ರಿ ಸಮಯದಲ್ಲಿ ಸಾರ್ವಜನಿಕರು ಮದ್ಯಪಾನ ಸೇವಿಸಿ ಬರುವ ಸಂಭವವಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸುವುದು. ಪ್ರಮುಖವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಿಸೆ ಕಳ್ಳತನ, ಸರ ಅಪಹರಣ ಇತ್ಯಾದಿಗಳು ನಡೆಯುವ ಸಾದ್ಯತೆಗಳಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸುವುದು ಮತ್ತು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವುದು.
- ನೂತನ ವರ್ಷಾಚರಣೆ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ದ ಕೂಡಲೇ ಗಮನಹರಿಸಿ ಕಾನೂನಿನಡಿಯಲ್ಲಿ ಬಂದನಕ್ಕೆ ಒಳಗಾಗಿಸುವುದು. ಕುಡಿದು ರಸ್ತೆಗಳ ಮೇಲೆ ಬಾಟಲಿಗಳನ್ನು ಹೊಡೆದು / ಎಸೆದು ದಾಂದಲೆ ಮಾಡುವವರನ್ನು ಕೂಡಲೇ ವಶಕ್ಕೆ ಪಡೆದು ಅಗತ್ಯ ಕಾನೂನು ಕ್ರಮ ಜರುಗಿಸುವುದು.
- ಹೊಸ ವರ್ಷಾಚರಣೆಯ ಸಂದರ್ಭವನ್ನು ಬಳಸಿಕೊಂಡು ದಾಂಧಲೆ ಮಾಡುವ ಕಿಡಿಗೇಡಿಗಳ ವಿರುದ್ಧ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು. ಎಲ್ಲಾ ಠಾಣೆಯ ಅಧಿಕಾರಿಗಳು, ಎಲ್ಲಾ ಉಪ ವಿಭಾಗಾಧಿಕಾರಿಗಳು ಅವರ ವ್ಯಾಪ್ತಿಯಲ್ಲಿ ಚಟುವಟಿಕೆಯಲ್ಲಿರುವ ರೌಡಿಗಳು ಹಾಗೂ ಅವರ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು.
- ಇತ್ತೀಚಿನ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೆಲವು ಸಮಾಜ ಘಾತುಕ ಚಟುವಟಿಕೆಗಳು ಶಾಂತಿಭಂಗವನ್ನುಂಟು ಮಾಡುವ ಸಂಭವವಿದ್ದು, ಅಂತಹವರ ಮೇಲೆ ಸೂಕ್ತ ನಿಗಾವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
- ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರು ಮದ್ಯಪಾನ ಮಾಡುವ ಸಾಧ್ಯತೆಯಿದ್ದು, ಮದ್ಯಪಾನ ಮಾಡಿದ ನಂತರ ತಮ್ಮ ಮನೆಗಳಿಗೆ ಹೋಗುವ ಸಮಯದಲ್ಲಿ ಸ್ವಂತ ವಾಹನಗಳನ್ನು ಬಳಸಲಿದ್ದು, ಅಂತಹ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಅಫಘಾತಗಳು ನಡೆಯುವ ಸಾಧ್ಯತೆಯಿರುತ್ತದೆ. ಆದ್ದರಿಂದ ಹೊಸ ವರ್ಷಾಚರಣೆಯ ಸಮುಯದಲ್ಲಿ ಹೆಚ್ಚಿನ ಸಂಖ್ಯೆಯ ಮದ್ಯಪಾನ ಪ್ರಕರಣಗಳನ್ನು ದಾಖಲಿಸುವ ಬಗ್ಗೆ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರುಗಳು ಅಗತ್ಯ ಕ್ರಮ ವಹಿಸುವುದು.
ಇದನ್ನೂ ಓದಿ | New year Celebration : ಹೊಸ ವರ್ಷಾಚರಣೆಗೆ ಕೋವಿಡ್ ಮಾರ್ಗಸೂಚಿ ಇಲ್ಲ, ಬಿಗಿ ಭದ್ರತೆ ಮಾತ್ರ