ಬೆಂಗಳೂರು: ಇಲ್ಲಿನ ಮಾರುತಿ ನಗರದ ಇಟ್ಮಡು ಮುಖ್ಯ ರಸ್ತೆಯಲ್ಲಿ ಏಕಾಏಕಿ ರಸ್ತೆಯು (Bengaluru Pothole) ಕುಸಿದಿದೆ. ಘಟನೆ ನಡೆದು ಕೆಲವು ದಿನ ಕಳೆದರೂ ಅಧಿಕಾರಿಗಳು ಮಾತ್ರ ಕಣ್ಣಿದ್ದರೂ ಕುರುಡರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಏಕಾಏಕಿ ರಸ್ತೆ ಕುಸಿದು ಸುಮಾರು ಐದಾರು ಅಡಿ ಕಂದಕ ನಿರ್ಮಾಣವಾಗಿದೆ. ಜಲಮಂಡಳಿಯ ಡ್ರೈನೇಜ್ ಚೇಂಬರ್ ಪಕ್ಕದಲ್ಲೇ ರಸ್ತೆ ಕುಸಿದಿದೆ.
ಇತ್ತ ಜಲಮಂಡಳಿ ವಿರುದ್ಧ ಸಾರ್ವಜನಿಕರು ಕಿಡಿಕಾರಿದ್ದು, ಇಲ್ಲಿರುವವರೆಲ್ಲ ಕಳ್ಳರು, ಲಂಚಕೋರರು ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ಇದೇ ರಸ್ತೆಯಲ್ಲಿ ಕಾರು ಅಪಘಾತ ಆಗಿತ್ತು. ಅಧಿಕಾರಿಗಳು ಮಾಡುವ ಕೆಲಸ ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿ ಎಷ್ಟೋ ಅಪಘಾತಗಳು ಇಲ್ಲಿ ನಡೆದಿವೆ ಎಂದು ಸ್ಥಳೀಯರಾದ ವಿನಯ್ ಆರೋಪಿಸಿದ್ದಾರೆ.
ಮೂರು ದಿನದ ಹಿಂದೆ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನೆಪ ಮಾತ್ರಕ್ಕೆ ಬ್ಯಾರಿಕೇಡ್ ಹಾಕಿ ಹೋಗಿದ್ದ ಜಲಮಂಡಳಿ ಅಧಿಕಾರಿಗಳು, ಈಗ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ಪೈಪ್ ಲೀಕೇಜ್ ಕಾರಣ
ರಸ್ತೆ ಗುಂಡಿಗೆ ಪ್ರಮುಖ ಕಾರಣ ಜಲಮಂಡಳಿಯ ಪೈಪ್ ಲೀಕೇಜ್ ಎನ್ನಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್‌ನಲ್ಲೂ ಬಿದ್ದ ರಸ್ತೆಗುಂಡಿಗೆ ಜಲಮಂಡಳಿ ಪೈಪ್ ಲೀಕೇಜ್ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದರು. ಇದೀಗ ಇಟ್ಟಮಡು ಭಾಗದಲ್ಲಿ ಬಿದ್ದ ಗುಂಡಿಗೂ ನೀರಿನ ಲೀಕೇಜ್ ಕಾರಣವೆಂದು ತಿಳಿದು ಬಂದಿದೆ. ಕಂದಕ ಬಿದ್ದಿರುವ ಜಾಗದಲ್ಲಿ ನೀರು ಸೋರಿಕೆಯಾಗುತ್ತಿದೆ.
ಬೈಕ್, ಲಾರಿ ತೆರಳುತ್ತಿದ್ದಾಗ ಬಿದ್ದಿದ್ದ ಗುಂಡಿ
ಮಹಾಲಕ್ಷ್ಮಿ ಲೇಔಟ್ ಮೆಟ್ರೋ ನಿಲ್ದಾಣದ ಪಕ್ಕದಲ್ಲಿರುವ ರಸ್ತೆಯಲ್ಲಿ ಲಾರಿಯೊಂದು ತೆರಳುತ್ತಿದ್ದಾಗ ಕಂದಕಕ್ಕೆ ಚಕ್ರ ಸಿಲುಕಿ ಪರದಾಡಬೇಕಾಯಿತು. ಏಕಾಏಕಿ ರಸ್ತೆ ಕುಸಿದು 3.5 ಅಡಿ ಆಳದಷ್ಟು ಕಂದಕ ನಿರ್ಮಾಣವಾಗಿತ್ತು. ಗುಂಡಿ ಬಿದ್ದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಘಟನೆಗೂ ಮುನ್ನ ಆಡುಗೋಡಿಯಿಂದ ಶಿವಾಜಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಂದಕಕ್ಕೆ ಸವಾರ ಬಿದ್ದು ಗಾಯಗೊಂಡಿದ್ದ ಘಟನೆ ಜನವರಿ 12ರಂದು ನಡೆದಿತ್ತು. ಸುಮಾರು ಎರಡು ಅಡಿಗಳಷ್ಟು ಅಗಲದಲ್ಲಿ ರಸ್ತೆ ಕುಸಿದು ಗುಂಡಿ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ್ ನಗರ ಪೊಲೀಸರು ಭೇಟಿ ನೀಡಿ, ಸಂಚಾರ ಬದಲಾವಣೆ ಮಾಡಿದ್ದರು.
ಸದಾ ವಾಹನಗಳಿಂದ ಕೂಡಿರುವ ರಸ್ತೆಯ ಮಧ್ಯಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ರಸ್ತೆಯ ಎರಡು ಭಾಗಗಳ ವಾಹನ ಸಂಚಾರವನ್ನು ನಿರ್ಬಂಧ ಮಾಡಲಾಗಿತ್ತು. ಗುಂಡಿ ಬಿದ್ದ ರಸ್ತೆಗೆ ಮೆಟ್ರೋ ಸಿಬ್ಬಂದಿ ಕಾಂಕ್ರೀಟ್ ಹಾಕಿದ್ದರು. ರಸ್ತೆಯ ಎರಡೂ ಬದಿಗಳಲ್ಲೂ ಕೂಡ ಬಹುಮಹಡಿಯ ವಾಣಿಜ್ಯ ಕಟ್ಟಡಗಳಿದ್ದು, ಏಕಾಏಕಿ ರಸ್ತೆಯ ಮಧ್ಯ ಭಾಗದಲ್ಲಿ ಗುಂಡಿ ಬಿದ್ದು ಆತಂಕಕ್ಕೆ ಕಾರಣವಾಗಿತ್ತು. ಈ ಹಿಂದೆ ಕೂಡ ಟೌನ್ ಹಾಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲಿ ಗುಂಡಿಬಿದ್ದಿತ್ತು.
ಇದನ್ನೂ ಓದಿ | Santro Ravi case | ಸ್ಯಾಂಟ್ರೋ ರವಿ ಪತ್ನಿ ಕೊಟ್ಟಿದ್ದು ದೂರು ಮಾತ್ರ, 2ನೇ ಪತ್ನಿ ಅನ್ನೋದಕ್ಕೂ ರೆಕಾರ್ಡ್ ಇಲ್ವಾ?