Site icon Vistara News

Traffic Violations: 2023ರಲ್ಲಿ ಬೆಂಗಳೂರಲ್ಲಿ 89.74 ಲಕ್ಷ ಟ್ರಾಫಿಕ್‌ ಉಲ್ಲಂಘನೆ ಕೇಸ್‌, 4,095 ಅಪಘಾತ!

traffic rules violations

ಬೆಂಗಳೂರು: 2023ರ ಬೆಂಗಳೂರಿನ ಸಂಚಾರ ನಿಯಮ ಉಲ್ಲಂಘನೆ (Traffic Violations) ಹಾಗೂ ಅಪಘಾತಗಳ ವರದಿಯನ್ನು ಬೆಂಗಳೂರು ಸಂಚಾರ ಪೊಲೀಸ್‌ ವಿಭಾಗ ಬಿಡುಗಡೆ ಮಾಡಿದೆ. ಕಳೆದ ವರ್ಷದಲ್ಲಿ ಒಟ್ಟು 89,74,945 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4,095 ಅಪಘಾತ ಪ್ರಕರಣಗಳು ವರದಿಯಾಗಿವೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸಿಸಿಟಿವಿ ಮುಖಾಂತರ 87,25,321 ಪ್ರಕರಣ ದಾಖಲಾಗಿದ್ದು, 2,49,624 ಪ್ರಕರಣಗಳನ್ನು ಖುದ್ದು ಸಂಚಾರ ಪೊಲೀಸರೇ ದಾಖಲಿಸಿದ್ದಾರೆ. ಇನ್ನು ಒಟ್ಟು 7,055 ಡ್ರಂಕ್ & ಡ್ರೈವ್ ಪ್ರಕರಣ, 16 ಮಧ್ಯಪಾನ ಮಾಡಿ ಅಪಘಾತ ಮಾಡಿದ ಪ್ರಕರಣಗಳು ವರದಿಯಾಗಿವೆ. ಇಷ್ಟು ಪ್ರಕರಣಗಳಿಂದ ಸಂಗ್ರಹಿಸಿದ ದಂಡದ ಒಟ್ಟು ಮೊತ್ತ 184.83 ಕೋಟಿ ರೂ.ಗಳಾಗಿವೆ.

2023ರಲ್ಲಿ ಬೆಂಗಳೂರಲ್ಲಿ ಒಟ್ಟು 4,095 ಅಪಘಾತ ಪ್ರಕರಣಗಳು ಸಂಭವಿಸಿದ್ದು, ಇದರಲ್ಲಿ ಮೃತಪಟ್ಟವರ ಸಂಖ್ಯೆ 909, ಗಾಯಾಳುಗಳ ಸಂಖ್ಯೆ 4,201 ಆಗಿದೆ. ಇನ್ನು ತುರ್ತು ಸಂಧರ್ಭದಲ್ಲಿ  ಜಿರೋ ಟ್ರಾಫಿಕ್‌ಗೆ ಒತ್ತು ಕೊಟ್ಟಿದ್ದ ಸಂಚಾರ ಪೊಲೀಸರು, ತುರ್ತು ಸಂಧರ್ಭದಲ್ಲಿ ರೋಗಿಗಳಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ್ದರು. ಕಳೆದ ವರ್ಷದಲ್ಲಿ ಒಟ್ಟು 22 ಬಾರಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.

ಡಿಸೆಂಬರ್‌ 31 ಕಂಪ್ಲೀಟು; ಮಂದಿ ಸಿಕ್ಕಾಪಟ್ಟೆ ಟೈಟು! ಬೊಕ್ಕಸಕ್ಕೆ ಬಿತ್ತು 193 ಕೋಟಿ ರೂ. ಅಮೌಂಟು

Excise department earns huge revenue from New Years liquor party

ಬೆಂಗಳೂರು: ಹೊಸ ವರ್ಷದ ಪಾರ್ಟಿಯಿಂದ (New Year 2024) ಅಬಕಾರಿ ಖಜಾನೆಗೆ ಕಿಕ್ ಸಿಕ್ಕಿದೆ. ಹೊಸ ವರ್ಷದ ಸಂಭ್ರಮದಲ್ಲಿ ಲಕ್ಷಾಂತರ ಲೀಟರ್‌ ಮದ್ಯ (New Year liquor sale) ಮಾರಾಟವಾಗಿದೆ. ಇದರಿಂದಾಗಿ ಅಬಕಾರಿ ಇಲಾಖೆ ಬೊಕ್ಕಸಕ್ಕೆ ಕೋಟ್ಯಂತರ ರೂ. ಆದಾಯ ಹರಿದು ಬಂದಿದೆ. ಅದರಲ್ಲೂ ಕ್ರಿಸ್ ಮಸ್ ಮತ್ತು ಹೊಸ ವರ್ಷದ ನಡುವೆ ಭರ್ಜರಿ ಲಿಕ್ಕರ್‌ ಸೇಲ್ಸ್‌ ದಾಖಲಾಗಿದೆ.

ಡಿಸೆಂಬರ್ 31ರಂದು ಒಂದೇ ದಿನ ಭರ್ಜರಿ ಮದ್ಯ ಮಾರಾಟವಾಗಿದ್ದು, ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ನಿನ್ನೆ 193 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಡಿಸೆಂಬರ್‌ನಲ್ಲಿ ಇಂಡಿಯನ್ ಮೇಡ್ ಲಿಕ್ಕರ್ 3.07 ಲಕ್ಷ ಪೆಟ್ಟಿಗೆ ಮಾರಾಟವಾಗಿದೆ. 1.95 ಲಕ್ಷ ಪೆಟ್ಟಿಗೆ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ 2,611 ಕೋಟಿ ಆದಾಯ ಸಂಗ್ರಹವಾಗಿತ್ತು ಆದರೆ ಈ ಬಾರಿ ದುಪ್ಪಟ್ಟಾಗಿದೆ. 2023ರ ಡಿಸೆಂಬರ್ ತಿಂಗಳ ಒಂದರಲ್ಲೇ ಒಟ್ಟು 3 ಸಾವಿರ ಕೋಟಿ ಆದಾಯ ಸಂಗ್ರಹವಾಗಿದೆ.

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಕ್ಕೆ ಡಿಸೆಂಬರ್ 23 ರಿಂದ ಡಿಸೆಂಬರ್ 31 ವರೆಗೂ ಲಿಕ್ಕರ್ ಸೆಲ್ ಭರ್ಜರಿಯಾಗಿದೆ. ಈ 7 ದಿನಗಳಲ್ಲಿ 22.2ಲಕ್ಷ ಪೆಟ್ಟಿಗೆ ಮಾರಾಟವಾಗಿದ್ದು, 1,070 ಕೋಟಿ ರೂ. ಲಾಭವಾಗಿದೆ.

ಇದನ್ನೂ ಓದಿ: New year Celebration : ಚಂದದ ಹುಡುಗಿ ಫುಲ್‌ ಟೈಟ್; ರಸ್ತೆಯಲ್ಲೇ ಬಿದ್ದು ಹೊರಳಾಡಿದ ಸುಂದರಿ‌

ಹೆಚ್ಚಾಗಿ ಹೋಯ್ತಪ್ಪೋ ಎಣ್ಣೆ ರೇಟು!

ಗ್ಯಾರಂಟಿ ಯೋಜನೆಗಳ (Congress Guarantee Scheme) ಮೂಲಕ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ಗೆ ಈಗ ಅವುಗಳಿಗೆ ಅನುದಾನ ಹೊಂದಾಣಿಕೆ ಮಾಡುವ ಸವಾಲು ಎದುರಾಗಿದೆ. ಅಲ್ಲದೆ, ಅಭಿವೃದ್ಧಿ ಕಾರ್ಯಗಳಿಗೂ ಅನುದಾನವನ್ನು ನೀಡಬೇಕು. ಇದಕ್ಕೆ ಆದಾಯ ಮೂಲಗಳ ಹುಡುಕಾಟದಲ್ಲಿ ಸರ್ಕಾರ ಇದೆ. ಆದರೆ, ಯಾವುದೇ ಸರ್ಕಾರ ಬಂದರೂ ಮೊದಲು ಕಾಣುವುದು ಅಬಕಾರಿ ಇಲಾಖೆ. ಮದ್ಯದ ಮೇಲೆ ತೆರಿಗೆಯನ್ನು ಹೆಚ್ಚು ಮಾಡಿ ಸರ್ಕಾರದ ಬೊಕ್ಕಸವನ್ನು ತುಂಬಿಸಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಈಗಾಗಲೇ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿಯೇ ಅಬಕಾರಿ ಸುಂಕವನ್ನು (Excise Duty) ಶೇಕಡಾ 20ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಹೊಸ ವರ್ಷಕ್ಕೆ (New Year) ಮದ್ಯದ ಕಂಪನಿಗಳು (Liquor Company) ದರ ಹೆಚ್ಚಳ (Liquor Price hike) ಮಾಡಲು ಮುಂದಾಗಿದೆ. ಈ ಮೂಲಕ ಮದ್ಯ ಪ್ರಿಯರಿಗೆ ಶಾಕ್‌ ಕೊಟ್ಟಿದೆ.

ಒಟ್ಟಾರೆಯಾಗಿ ಮದ್ಯ ಪ್ರಿಯರಿಗೆ ಸರ್ಕಾರದಿಂದಲೂ ಹೊಡೆತ, ಮದ್ಯ ಕಂಪನಿಗಳಿಂದಲೂ ಬಡಿತ ಎನ್ನುವಂತಾಗಿದೆ. ಹೊಸ ವರ್ಷ ಬಂದಿದೆ. ಈ ವೇಳೆ ಮದ್ಯದ ಮಾರಾಟ ಸಹ ಭರದಿಂದ ಆಗಲಿದೆ. ಜತೆಗೆ ಖರ್ಚುಗಳು ಸಹ ಹೆಚ್ಚಾಗಿರುವುದರಿಂದ ಬೆಲೆಯನ್ನು ಹೆಚ್ಚಳ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಮದ್ಯ ಕಂಪನಿಗಳು ಮುಂದಾಗಿವೆ.

36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿ

ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅಬಕಾರಿ ಇಲಾಖೆಯಿಂದ 35,000 ಕೋಟಿ ರೂಪಾಯಿ ಗುರಿಯನ್ನು ಬಜೆಟ್‌ನಲ್ಲಿ ನಿಗದಿಪಡಿಸಿತ್ತು. ಬಳಿಕ ಬಂದ ಸಿದ್ದರಾಮಯ್ಯ ಅವರು ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ 36,000 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ನೀಡಿದ್ದಾರೆ. ಆ ಮೂಲಕ ತಮ್ಮ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಮುಂದಾಗಿದ್ದಾರೆ.

ಮದ್ಯದ ಹೊಸ ದರ ಪಟ್ಟಿ ಹೀಗಿದೆ

ಜನವರಿ 1ರಿಂದ ಮದ್ಯದ ದರ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಹಾಲಿ ಓಟಿ 180 ಎಂಎಲ್‌ಗೆ 100 ರೂಪಾಯಿ ಇದೆ. ಆದರೆ, ಜನವರಿ 1ರಿಂದ ಇದರ ಬೆಲೆಯಲ್ಲಿ ಏರಿಕೆಯಾಗಲಿದೆ. ಜ. 1ರಿಂದ ಓಟಿ ಬೆಲೆ 123 ರೂ.ಗೆ ಏರಿಕೆಯಾಗಲಿದೆ. ಬಿಪಿ ದರ ಹಾಲಿ 123 ರೂ. ಇದ್ದು ಜನವರಿಯಿಂದ 159 ರೂ. ಆಗಲಿದೆ. 8ಪಿಎಂ ದರ ಹಾಲಿ 100 ರೂ. ಇದ್ದು 123 ರೂ.ಗೆ ಏರಲಿದೆ.

ಇದನ್ನೂ ಓದಿ | Liquor Shop: MSILನಿಂದ ಪ್ರೀಮಿಯಂ ಮದ್ಯ ಮಾರಾಟ ಮಳಿಗೆ; ಲಿಕ್ಕರ್‌ ಶಾಪ್‌ಗೆ ಕಾರ್ಪೊರೆಟ್ ಟಚ್‌!

ಏಕೆ ಈ ನಿರ್ಧಾರ?

ಕಂಪನಿಗಳು ದರ ಹೆಚ್ಚಳ ಮಾಡುವ ನಿರ್ಧಾರಕ್ಕೆ ಬರಲು ಒಂದು ಕಾರಣ ಇದೆ. ಏನೆಂದರೆ ಮದ್ಯದ ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಣೆ ವೆಚ್ಚಗಳು ಹೆಚ್ಚಾಗಿವೆ. ಇದರಿಂದ ಲಾಭಾಂಶದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಈ ವೆಚ್ಚವನ್ನು ಅನಿವಾರ್ಯವಾಗಿ ಗ್ರಾಹಕರ ಮೇಲೆ ಹಾಕಬೇಕಾಗಿದೆ ಎಂದು ಹೇಳಲಾಗಿದೆ. ಜನವರಿ 1ರಿಂದ ನೂತನ ದರ ಪಟ್ಟಿಯಂತೆ ವಸೂಲಿ ಮಾಡಲು ಬಾರ್ ಮಾಲೀಕರಿಗೆ ಕಂಪನಿಗಳೂ ಸೂಚಿಸಿವೆ.

ಎಂಆರ್‌ಪಿ ಬಾರ್‌ಗಳಿಗೂ ಅನ್ವಯ

ಈ ನೂತನ ದರವು ಎಂಆರ್‌ಪಿ ಬಾರ್ ಮಾಲೀಕರಿಗೆ ಬಹು ಮುಖ್ಯವಾಗಿ ಅನ್ವಯವಾಗುತ್ತದೆ. ಈ ಸಂಬಂಧ ಕಂಪನಿಗಳು ಮೆಸೇಜ್ ಮೂಲಕ ಬಾರ್‌ ಮಾಲೀಕರಿಗೆ ಸೂಚನೆಯನ್ನು ನೀಡಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version