ಬೆಂಗಳೂರು: ವಾಹನ ದಟ್ಟಣೆಯಲ್ಲಿ ಸಿಲುಕಿ ಬೇಸತ್ತಿರುವ ಬೆಂಗಳೂರು ನಿವಾಸಿಗಳಿಗೆ ಆಹ್ಲಾದಕರ ಸುದ್ದಿಯೊಂದಿದೆ. 2032ರ ವೇಳೆಗೆ ನಗರದ ಮೆಟ್ರೋ ಸಂಚಾರದ (Bangalore Metro) ವ್ಯಾಪ್ತಿ ಇನ್ನಷ್ಟು ವಿಸ್ತರಣೆಗೊಳ್ಳಲಿದ್ದು ಮನೆಯಿಂದ 1ರಿಂದ2 ಕಿಲೋ ಮೀಟರ್ ದೂರದಲ್ಲಿ ಮೆಟ್ರೋ ಸ್ಟೇಷನ್ ಸಿಗಲಿದೆ. ಸ್ವಂತ ವಾಹನವನ್ನು ಮನೆಯಲ್ಲಿಯೇ ಬಿಟ್ಟು ಮೆಟ್ರೋದ ಮೂಲಕವೇ ಮನೆಯಿಂದ ಕಚೇರಿಗೆ ಮತ್ತು ಕಚೇರಿಯಂದ ಮನೆಗೆ ಹೋಗಲು ಸಾಧ್ಯವಾಗಲಿದೆ. ರಾಜ್ಯ ಸರಕಾರ ಹೊಸದಾಗಿ ನಾಲ್ಕು ಮೆಟ್ರೋ ಮಾರ್ಗಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆಗೆ ಮೆಟ್ರೊ ರೈಲಿನ ಸೇವೆ ಲಭಿಸಲಿದ್ದು 2032ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕರ್ನಾಟಕವನ್ನು ಒಂದು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಏರಿಸುವ ಉದ್ದೇಶದಿಂದ ರಾಜ್ಯ ಸರಕಾರ ಮೆಟ್ರೋ ಸಂಪರ್ಕದ ಹೊಸ ಕಾರ್ಯ ಯೋಜನೆಯನ್ನು ಪ್ರಕಟಿಸಿದೆ. ಅದರಲ್ಲಿ ನಾಲ್ಕು ಹೊಸ ಮೆಟ್ರೋ ರೈಲು ಮಾರ್ಗಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ ಸರಕಾರದ ಯೋಜನಾ ಮತ್ತು ಅಂಕಿಅಂಶ ಇಲಾಖೆ ಹಾಗೂ ಫಿಕಿಯ ಸಹಭಾಗಿತ್ವದಲ್ಲಿ ಯೋಜನೆಯನ್ನು ಸಿದ್ದಪಡಿಸಲಾಗಿದೆ.
ಹೊಸ ಕಾರ್ಯಯೋಜನೆಯಲ್ಲಿ ಎರಡು ಹೊಸ ಮಾರ್ಗಗಳನ್ನು ಪರಿಚಯಿಸಲಾಗಿದೆ ಹಾಗೂ ಮೂರನೇ ಹಂತದ ಮೆಟ್ರೋ ಯೋಜನೆಯ ವಿಸ್ತರಣೆ ಮಾಡಲಾಗುತ್ತದೆ. ಒಟ್ಟು 27 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದ ಮೆಟ್ರೋ ಯೋಜನೆ. ಹಳೆ ವಿಮಾನ ನಿಲ್ದಾಣ ರಸ್ತೆಯಿಂದ ಎಮ್ಜಿ ರೋಡ್ ತನಕದ ಈ ಯೋಜನೆಯಲ್ಲಿ ಮಾರತಹಳ್ಳಿ ಹಾಗೂ ವೈಟ್ಫೀಲ್ಡ್ ಮೂಲಕ ಹಾದು ಹೋಗಲಿದೆ. 16 ಕಿಲೋ ಮೀಟರ್ ಉದ್ದದ ಈ ಮೆಟ್ರೊ ಮಾರ್ಗಕ್ಕೆ 9600 ಕೋಟಿ ರೂಪಾಯಿ ಬೇಕಾಗುತ್ತದೆ. ತಣಿಸಂದ್ರದ ಮೂಲಕ ನಾಗವಾರದಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗಿನ 25 ಕಿಲೋಮೀಟರ್ ಯೋಜನೆಗೆ 10 ಸಾವಿರ ಕೋಟಿ ಯೋಜನಾ ವೆಚ್ಚ ಅಂದಾಜಿಸಲಾಗಿದೆ.
ವೈಟ್ಫೀಲ್ಡ್ನಿಂದ ಹೊಸಕೋಟೆಯ ತನಕದ 6 ಕಿಲೋಮೀಟರ್ ಹಾಗೂ ಬನ್ನೇರುಘಟ್ಟದಿಂದ ಜಿಗಣಿ ತನಕದ 12 ಕಿಲೋ ಮೀಟರ್ ಮೆಟ್ರೋ ಮಾರ್ಗದ ವಿಸ್ತರಣೆಯಾಗಿದೆ. ಇದಕ್ಕೆ ಅನುಕ್ರಮವಾಗಿ 2400 ಕೋಟಿ ರೂಪಾಯಿ ಹಾಗೂ 4,800 ಕೋಟಿ ರೂಪಾಯಿ ಅಂದಾಜು ವೆಚ್ಚ ಪ್ರಕಟಿಸಲಾಗಿದೆ.
ಇದನ್ನೂ ಓದಿ : Metro Phase 4: ಪ್ರಯಾಣಿಕರಿಗೆ ಗುಡ್ ನ್ಯೂಸ್; ಮೆಟ್ರೊ 4ನೇ ಹಂತದಲ್ಲಿ ಬಿಡದಿ ಮಾಗಡಿಗೆ ಸಂಪರ್ಕ!
ನಮ್ಮ ಮೆಟ್ರೋ ಇದೀಗ 56 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತಿದೆ. ಅದೇ ರೀತಿ ಸಿಲ್ಕ್ ಬೋರ್ಡ್ ಜಂಕ್ಷನ್ನಿಂದ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ವರೆಗಿನ 58.1 ಕಿಲೋ ಮೀಟರ್ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಹಾಲಿ ವರ್ಷದಲ್ಲಿ 40 ಕಿಲೋ ಮೀಟರ್ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ.