ದೇವನಹಳ್ಳಿ: ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದಲ್ಲಿ ಕಳೆದ ಐದು ದಿನಗಳಿಂದ ಕುರಿಗಳ ಆಕಸ್ಮಿಕ ಸರಣಿ ಸಾವು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ಸ್ವಗ್ರಾಮದಲ್ಲೇ ಕುರಿಗಳ ಸರಣಿ ಸಾವಾಗಿದೆ. ತಾಲೂಕಿನ ಅಪ್ಪಕಾರನಹಳ್ಳಿ ಗ್ರಾಮದ ರೈತ ಗೋವಿಂದರಾಜ್ ಎಂಬುವರಿಗೆ ಸೇರಿದ ಕುರಿಗಳ ಮಾರಣ ಹೋಮ ಆಗಿದೆ.
ಕಳೆದ ಐದು ದಿನಗಳಿಂದ ಸುಮಾರು 70 ಕುರಿಗಳ ಸರಣಿ ಸಾವಾಗಿದೆ. 5 ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿರುವ ರೈತ ಗೋವಿಂದರಾಜ್ ಅವರಿಗೆ ಸರಣಿ ಕುರಿಗಳ ಸಾವಿನಿಂದ ದಿಕ್ಕು ತೋಚದಂತಾಗಿದೆ. ಒಟ್ಟು 120 ಕುರಿಗಳನ್ನು ಸಾಕಿದ್ದ ರೈತನ ಕೊಟ್ಟಿಗೆಯಲ್ಲಿ 70 ಕುರಿಗಳು ಸತ್ತಿವೆ.
ಸ್ಥಳಕ್ಕೆ ಪಶು ವೈದ್ಯರು ಭೇಟಿ ನೀಡಿ ಕುರಿಗಳ ಸಾವಿನ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಮೈಕೋ ಪ್ಲಾಸ್ಮಾ ಬ್ಯಾಕ್ಟೀರಿಯಾ ಕುರಿಗಳ ಮೃತ್ಯುವಿಗೆ ಕಾರಣ ಎಂದು ಶಂಕಿಸಲಾಗಿದೆ. ಶ್ವಾಸಕೋಶದಲ್ಲಿ ನೀರು ತುಂಬಿದ ಪರಿಣಾಮ ಉಸಿರುಗಟ್ಟಿ 70 ಕುರಿಗಳು ಸಾವನ್ನಪ್ಪಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಜೀವಂತ ಇರುವ ಕುರಿಗಳಿಗೆ ಪ್ರತ್ಯೇಕ ಕೊಟ್ಟಿಗೆ ವ್ಯವಸ್ಥೆ ಮಾಡಲಾಗಿದ್ದು, ಮೈಕೋ ಪ್ಲಾಸ್ಮಾ ವ್ಯಾಕ್ಸಿನ್ ನೀಡಲಾಗಿದೆ.
70 ಕುರಿಗಳನ್ನು ಕಳೆದುಕೊಂಡಿದ್ದು, ಇದಕ್ಕೆ ಪರಿಹಾರ ನೀಡುವಂತೆ ರೈತ ಗೋವಿಂದ ರಾಜ್ ಮನವಿ ಮಾಡಿದ್ದಾರೆ. ತಾಲೂಕಿನಾದ್ಯಂತ ಕುರಿಗಳಿಗೆ ರೋಗ ಬಾರದಂತೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | ಚರ್ಮ ಗಂಟು ರೋಗದಿಂದ ಜಾನುವಾರು ಮೃತಪಟ್ಟರೆ ಪರಿಹಾರ, ಆದೇಶ ಹೊರಡಿಸಿದ ರಾಜ್ಯ ಸರ್ಕಾರ