Site icon Vistara News

Captain Pranjal : ಪಂಚಭೂತಗಳಲ್ಲಿ ಲೀನರಾದ ಕ್ಯಾಪ್ಟನ್‌ ಪ್ರಾಂಜಲ್‌; ಮೊಳಗಿದ ಅಮರ್‌ ರಹೇ ಘೋಷಣೆ

Amar Rahe slogans raised along Captain Pranjal

ಆನೇಕಲ್‌: ಯುದ್ಧ ಭೂಮಿಯಲ್ಲಿ ವೀರ ಮರಣ ಹೊಂದಿದ ಕ್ಯಾಪ್ಟನ್‌ ಪ್ರಾಂಜಲ್‌ (Captain Pranjal) ಅವರು ಪಂಚಭೂತಗಳಲ್ಲಿ ಲೀನರಾದರು. ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅಮರ್‌ ರಹೇ.. ಅಮರ್ ರಹೇ ಎಂಬ ಸಹಸ್ರಾರು ಜನರ ಘೋಷಣೆಯೊಂದಿಗೆ ಅಂತಿಮ ಯಾತ್ರೆ ನಡೆಯಿತು. ಸೋಮಸುಂದರಪಾಳ್ಯ ಚಿತಾಗಾರದಲ್ಲಿ ಹುತಾತ್ಮ ಯೋಧನಿಗೆ ಬಾರದ ಮನಸ್ಸಲ್ಲೇ ಕುಟುಂಬಸ್ಥರು ಕಣ್ಣೀರ ವಿದಾಯ ನೀಡಿದರು.

ಬ್ರಾಹ್ಮಣ ಸಂಪ್ರದಾಯದಂತೆ ಪ್ರಾಂಜಲ್‌ ತಂದೆ ಅಂತಿಮ ಪೂಜೆ, ವಿಧಿ ವಿಧಾನಗಳನ್ನು ನಡೆಸಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದಕ್ಕೂ ಮೊದಲು ಕ್ಯಾಪ್ಟನ್‌ ಪ್ರಾಂಜಲ್‌ ಅವರಿಗೆ ಸೇನಾ ಪಡೆಯಿಂದಲೂ ಅಂತಿಮ ವಿದಾಯ ನೀಡಿದರು. ಎರಡೂ ಸುತ್ತು ಗುಂಡು ಹಾರಿಸಿ ಗೌರವ ಸಮರ್ಪಣೆ ಮಾಡಿದರು. ಇದೇ ವೇಳೆ ಕುಟುಂಬಸ್ಥರಿಗೆ ತ್ರಿವರ್ಣ ಧ್ವಜವನ್ನು ಹಸ್ತಾಂತರ ಮಾಡಿದರು. ಎಲ್ಲ ಕಾರ್ಯಗಳು ಮುಗಿದ ನಂತರ ನೆರೆದಿದ್ದ ಜನರಿಗೆ ಕೈ ಮುಗಿದು ಪ್ರಾಂಕಲ್‌ ಕುಟುಂಬಸ್ಥರು ವಾಪಸ್ ತೆರಳಿದರು.

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕ್‌ ಮೂಲದ ಭಯೋತ್ಪಾದಕರ ಜತೆಗೆ ಗುಂಡಿನ ಕಾಳಗದಲ್ಲಿ (Rajouri Encounter) ಕರ್ನಾಟಕದ ವೀರ ಯೋಧ ಪ್ರಾಂಜಲ್‌ (Captain Pranjal) ಮೃತಪಟ್ಟಿದ್ದರು. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿರುವ ಯೋಧನ ಮನೆಯಲ್ಲೇ ಸಂಬಂಧಿಕರು ಹಾಗೂ ಸಹಸ್ರಾರು ಸಾರ್ವಜನಿಕರು ಅಂತಿಮ ದರ್ಶನವನ್ನು ಪಡೆದರು.

ಶಾಲಾ ಮಕ್ಕಳು, ವಯಸ್ಸಾದವರು ಕೂಡ ವೀರಯೋಧನ ಅಂತಿಮ ದರ್ಶನವನ್ನು ಪಡೆದುಕೊಂಡರು. ಪೊಲೀಸ್ ಇಲಾಖೆಯು ಹುತಾತ್ಮಯೋಧನಿಗೆ ಸರ್ಕಾರಿ ಗೌರವವನ್ನು ಸಲ್ಲಿಸಿತು. ಬೆಂ.ಗ್ರಾಮಾಂತರದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಬೆಂಗಳೂರು ದಕ್ಷಿಣ ಜಿಲ್ಲಾ ಉಪವಿಭಾಗಧಿಕಾರಿ ರಜನಿಕಾಂತ್ ಭಾಗಿಯಾಗಿದ್ದರು.

ಜಿಗಣಿ ನಿವಾಸದಿಂದ ಕೂಡ್ಲು ವಿದ್ಯುತ್‌ ಚಿತಾಗಾರದವರೆಗೆ 30 ಕಿ.ಮೀ ಅಂತಿಮ ಯಾತ್ರೆ ನಡೆಯಿತು. ಸೇನಾ ವಾಹನದಲ್ಲಿ ಅಂತಿಮ ಯಾತ್ರೆ ಶುರುವಾಗಿ, ದೇಶ ಪ್ರೇಮದ ಜೈಕಾರಗಳ ಮೂಲಕ ಹುತಾತ್ಮ ಯೋಧ ಪ್ರಾಂಜಲ್ ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಲಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version