ನೆಲಮಂಗಲ: ಇತ್ತೀಚೆಗೆ ಗ್ಯಾಸ್ ಸಿಲಿಂಡರ್ (Cylinder Blast) ಸ್ಫೋಟ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟಕ್ಕೆ ವ್ಯಕ್ತಿಯೊರ್ವ ಗಂಭೀರ ಗಾಯಗೊಂಡಿದ್ದು, ಮನೆಯಲ್ಲಿದ್ದ ಬಾಲಕಿಗೂ ಸುಟ್ಟಗಾಯಗಳಾಗಿವೆ.
ಮನೆಯಲ್ಲಿ ಅಡುಗೆ ಮಾಡುವಾಗ ಒಮ್ಮೆಲೆ ಸಿಲಿಂಡರ್ ಸ್ಫೋಟಗೊಂಡಿದೆ. ವಿಜಯಮ್ಮ ಎಂಬುವವರ ಮನೆಯಲ್ಲಿ ಈ ಅವಘಡ ಸಂಭವಿಸಿದೆ. ಸಂಜಯ್ (40) ಎಂಬುವವರಿಗೆ ಅರ್ಧ ದೇಹ ಪೂರ್ತಿ ಸುಟ್ಟ ಗಾಯಗಳಾಗಿದ್ದರೆ, ಲೇಖನಾ (5) ಕೈ-ಕಾಲು ಸುಟ್ಟಿದೆ.
ಬೆಂಕಿ ನಂದಿಸುವಾಗಲೇ ಮತ್ತೊಮ್ಮೆ ಸ್ಫೋಟ; ಅಗ್ನಿಶಾಮಕ ಸಿಬ್ಬಂದಿ ಜಸ್ಟ್ ಮಿಸ್
ಸಿಲಿಂಡರ್ ಸ್ಫೋಟದ ಶಬ್ಧಕ್ಕೆ ಏರಿಯಾ ಜನರೆಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ. ಗಾಯಾಳುಗಳನ್ನು ಆಂಬ್ಯುಲೆನ್ಸ್‌ಗೆ ರವಾನೆ ಮಾಡುವಾಗ ಮತ್ತೊಮ್ಮೆ ಸಿಲಿಂಡರ್ ಸ್ಫೋಟಗೊಂಡಿದ್ದು, ಬೆಂಕಿ ನಂದಿಸಲು ಮುಂದಾಗಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸದ್ಯ ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ತೀವ್ರವಾದ ಸುಟ್ಟಗಾಯ ಆಗಿರುವುದರಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನೆಲಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಾರಕ್ಕೊಂದು ಸಿಲಿಂಡರ್ ಸ್ಫೋಟ?
ರಾಜ್ಯದ ಹಲವೆಡೆ ವಾರಕ್ಕೊಂದು ಸಿಲಿಂಡರ್ ಸ್ಫೋಟ ಪ್ರಕರಣಗಳು ವರದಿ ಆಗುತ್ತಲೇ ಇದೆ. ಬೆಂಗಳೂರಿನಲ್ಲಿ ಡಿ.19ರಂದು ಬೊಮ್ಮನಹಳ್ಳಿ ಸಮೀಪದ ಗಾರ್ವೇಬಾವಿ ಪಾಳ್ಯದ ಲಕ್ಷ್ಮೀ ಲೇಔಟ್‌ನ ಏಳನೇ ಕ್ರಾಸ್‌ನ ಮನೆಯೊಂದರಲ್ಲಿ ಸಿಲಿಂಡರ್ ಗ್ಯಾಸ್ (Cylinder Blast) ಲಿಕೇಜ್‌ನಿಂದಾಗಿ ಸ್ಫೋಟಗೊಂಡಿತ್ತು. ಪರಿಣಾಮ ಐವರು ಗಂಭೀರ ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿತ್ತು.
ಸುಬ್ರಮಣಿ ಎಂಬುವವರಿಗೆ ಸೇರಿದ ಬಿಲ್ಡಿಂಗ್‌ನಲ್ಲಿ ನೇಪಾಳ ಮೂಲದ ಸಂದೇಶ್ ಕುಟುಂಬ ವಾಸವಿದ್ದರು. ಮನೆಯಲ್ಲಿ ಐದು ಮಂದಿ ವಾಸ ಮಾಡುತ್ತಿದ್ದರು. ರಾತ್ರಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿತ್ತು. ಆದರೆ ಇದನ್ನು ಗಮನಿಸದೆ ಬೆಳಗ್ಗೆ ಎಂದಿನಂತೆ ಅಡುಗೆ ಮನೆಯ ಲೈಟ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡಿತ್ತು.
ಬೆಳಗ್ಗೆ 6.30 ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಮನೆಯಲ್ಲಿದ್ದ ಐವರಿಗೆ ಗಂಭೀರ ಗಾಯವಾಗಿತ್ತು. ಸಂದೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದ್ದು, ಉಳಿದವರು ಸಣ್ಣ-ಪುಟ್ಟ ಗಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಬೇಗೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಮೊಬೈಲ್ ಟಾರ್ಚ್ ಆನ್ ಮಾಡಿದಾಗ ಸಿಲಿಂಡರ್ ಬ್ಲಾಸ್ಟ್
ಬೆಳಗಾವಿಯಲ್ಲೂ ಸಿಲಿಂಡರ್ ಸ್ಫೋಟಗೊಂಡಿತ್ತು. ಆ ಕುಟುಂಬದವರು ರಾತ್ರಿ ಊಟದ ಕೆಲಸವನ್ನು ಮುಗಿಸಿ, ಇನ್ನೇನು ನಿದ್ದೆಗೆ ಜಾರುವುದರಲ್ಲಿ ಇದ್ದರು. 9 ತಿಂಗಳ ಮಗುವನ್ನು ಆಟವಾಡಿಸಿ ನಿದ್ರೆ ಮಾಡಿಸಿದ್ದರು. ಲೈಟ್ ಆಫ್ ಮಾಡಿ ತಾವು ಮಲಗಬೇಕು ಎಂದಾಗ ಸಿಲಿಂಡರ್ ಗ್ಯಾಸ್ (Cylinder Blast) ವಾಸನೆ ಮೂಗಿಗೆ ಬಡಿದಿತ್ತು. ಏನು ಆಗಿರಬಹುದೆಂದು ಮೊಬೈಲ್ ಟಾರ್ಚ್ ಆನ್ ಮಾಡಿ ನೋಡಲು ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿತ್ತು.
ಬೆಳಗಾವಿಯ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಕ್ಕೆ ಮಗು ಸೇರಿ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ಸೋಮನಗೌಡ (44), ದೀಪಾ (42), ನವೀನ (14), ವಿದ್ಯಾ (13) ಬಸನಗೌಡ ನಿರ್ವಾಣಿ (9 ತಿಂಗಳು) ಗಂಭೀರ ಗಾಯಗೊಂಡಿದ್ದರು.
ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆಯ ಹಂಚುಗಳು ಹಾರಿಹೋಗಿತ್ತು. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ರಾತ್ರಿ ಮಲಗಿರುವಾಗ ಸಿಲಿಂಡರ್‌ನಲ್ಲಿ ಅನಿಲ ಸೋರಿಕೆ ಆಗಿತ್ತು. ಮೊಬೈಲ್ ಟಾರ್ಚ್ ಆನ್ ಮಾಡಿದಾಗ ಒಮ್ಮೆಲೆ ಸಿಡಿದಿತ್ತು. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನುಳಿದವರಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಕಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದ ಭಯಾನಕ ವಿಡಿಯೋ ವೈರಲ್ ಆಗಿದೆ. ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಮನೆಯೇ ಧಗಧಗಿಸಿ ಹೊತ್ತಿ ಉರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ