Site icon Vistara News

Elephant Attack : ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅಟ್ಟಾಡಿಸಿ ಕೊಂದ ಆನೆ

Woman killed in elephant attack in Hosur

ಹೊಸೂರು: ರಾಜ್ಯ ಗಡಿಭಾಗ ಹೊಸೂರು ಸಮೀಪದ ಹನುಮಂತಪುರಂನಲ್ಲಿ ಕಾಡಾನೆ ದಾಳಿಗೆ (Elephant Attack) ಮಹಿಳೆ ಬಲಿಯಾಗಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಹಿಳೆ ಮೇಲೆ ಕಾಡಾನೆ ದಾಳಿ ಮಾಡಿದೆ. ಈ ವೇಳೆ ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಆಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುನಿರತ್ನ (27) ಕಾಡಾನೆ ದಾಳಿಗೆ ಬಲಿಯಾದ ಮಹಿಳೆ.

ಮುನಿರತ್ನ ಕೆಲಮಂಗಲ ಗ್ರಾಮಕ್ಕೆ ತೆರಳಲು ಗ್ರಾಮಸ್ಥರ ಬಳಿ ಲಿಫ್ಟ್‌ ಕೇಳಿದ್ದಾಳೆ. ಈ ವೇಳೆ ಗ್ರಾಮದ ವ್ಯಕ್ತಿಯ ಜತೆಗೆ ಬೈಕ್‌ನಲ್ಲಿ ತೆರಳುವಾಗ ಕಾಡಾನೆ ಅಡ್ಡ ಬಂದಿದೆ. ಕಾಡಾನೆ ದಾಳಿ ಮಾಡುತ್ತಿದ್ದಂತೆ ವ್ಯಕ್ತಿ ಬೈಕ್ ಬಿಟ್ಟು ಓಡಿದ್ದಾನೆ. ಹಿಂಬದಿ ಕುಳಿತಿದ್ದ ಮುನಿರತ್ನ ಓಡಲು ಆಗದೆ ಆನೆ ದಾಳಿಗೆ ತುತ್ತಾಗಿದ್ದಾಳೆ.

ಮಹಿಳೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ರಸ್ತೆ ತಡೆ ನಡೆಸಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ವಿರುದ್ಧ ಕಿಡಿ ಕಾರಿದರು. ಬೆಳೆ ಹಾನಿ ಜತೆಗೆ ಪ್ರಾಣ ಹಾನಿಯಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದರು.

ಕಾಫಿ ಗಿಡದ ಮರೆಯಲ್ಲಿ ನಿಂತು ಇಟಿಎಫ್‌ ಸಿಬ್ಬಂದಿಯನ್ನು ಅಟ್ಟಾಡಿಸಿದ ಒಂಟಿಸಲಗ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ಇಟಿಎಫ್ ಸಿಬ್ಬಂದಿಯನ್ನು ಒಂಟಿ ಸಲಗವೊಂದು (Elephant Attack) ಹಿಮ್ಮೆಟ್ಟಿಸಿದೆ. ಇಟಿಎಫ್‌ ಸಿಬ್ಬಂದಿ ಕಾಡಾನೆಯನ್ನು ಟ್ರ್ಯಾಕ್ ಮಾಡುತ್ತಿದ್ದರು. ಈ ವೇಳೆ ಕಾಡಾನೆ ಕಾರ್ಯಪಡೆ ಸಿಬ್ಬಂದಿಯನ್ನು ಕರಡಿ ಹೆಸರಿನ ಒಂಟಿಸಲಗ ಅಟ್ಟಾಡಿಸಿದೆ.

ಇಟಿಎಫ್ ಸಿಬ್ಬಂದಿ ಸ್ಕೂಟಿಯನ್ನು ಬಿಟ್ಟು ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಕೆಲಕಾಲ ಕಾಫಿ ಗಿಡದ ಮರೆಯಲ್ಲಿ ನಿಂತು ಅತ್ತಿಂದಿತ್ತ ಓಡಾಡಿದೆ. ಇದೆಲ್ಲವನ್ನೂ ಮತ್ತೊಬ್ಬ ಸಿಬ್ಬಂದಿ ಮರದ ಮೇಲೆ ಕುಳಿತು ಕಾಡಾನೆಯ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಸೀಗೆ ಹೆಸರಿನ ಕಾಡಾನೆ ಸೆರೆಗೆ ಸಿದ್ಧತೆ

ಮತ್ತೊಂದೆಡೆ ಸೀಗೆ ಹೆಸರಿನ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದೆ. ಬೇಲೂರು ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು ದಾಳಿ ಮಾಡಿ ಕೊಂದಿತ್ತು.

ಆನೆಯ ಚಲನವಲನವನ್ನು ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಗಮನಿಸುತ್ತಿದ್ದಾರೆ. ನಾಳೆ ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆಯಲಿದೆ. ಪುಂಡಾನೆಗಳನ್ನು ಸೆರೆ ಹಿಡಿಯಲು ಇಟಿಎಫ್‌ ಟ್ರ್ಯಾಕ್ ಮಾಡುತ್ತಿದ್ದಾರೆ. ಕಳೆದ ಶನಿವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಭಾನುವಾರ ಮತ್ತು ಸೋಮವಾರ ಎರಡು ದಿನ ಬಿಡುವು ನೀಡಲಾಗಿದೆ.

ಇದನ್ನೂ ಓದಿ:Road Accident : ಕೊಳ್ಳೇಗಾಲದಲ್ಲಿ ಭತ್ತ ಕಟಾವು ಯಂತ್ರದ ಲಾರಿಗೆ ಬೈಕ್‌ ಡಿಕ್ಕಿ; ಭೀಕರ ಅಪಘಾತಕ್ಕೆ ನಾಲ್ವರು ಬಲಿ

ರಸ್ತೆ ದಾಟಿ ಕಾಡಿನೊಳಗೆ ಹೋದ ಕಾಡಾನೆಗಳ ಹಿಂಡು

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕೊತ್ತನಹಳ್ಳಿ ಬಳಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಕಾಫಿ ತೋಟದಿಂದ ರಸ್ತೆ ದಾಟಿ ಕಾಡಿನೊಳಗೆ ಆನೆಗಳು ಹೋಗಿವೆ. ಬೀಟಮ್ಮ ಹೆಸರಿನ ಕಾಡಾನೆಗಳ ಹಿಂಡಲ್ಲಿ ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ಆನೆಗಳಿವೆ. ಕಾಡಾನೆಗಳು ರಸ್ತೆ ದಾಟುವ ವಿಡಿಯೋವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಯಿಡಿದಿದ್ದಾರೆ.

ಕಾಡಾನೆಗಳ ಹಿಂಡಲ್ಲಿ ನಾಲ್ಕು ಸಲಗಗಳು ಹಾಗೂ ಮರಿಗಳೇ ಹೆಚ್ಚಾಗಿವೆ. ಕಳೆದ ಒಂದು ವಾರದಿಂದ ಮಾಳೇಗೆರೆ, ಕೊತ್ತನಹಳ್ಳಿ, ಜಗಬೋರನಹಳ್ಳಿ ಗ್ರಾಮಗಳ ಬಳಿ ಬೀಡುಬಿಟ್ಟಿವೆ. ಕಾಫಿ, ಬಾಳೆ, ಅಡಿಕೆ ಸೇರಿದಂತೆ ಅಪಾರ ಪ್ರಮಾಣದ ಬೆಳೆ ನಾಶಪಡಿಸುತ್ತಿವೆ. ತೋಟಕ್ಕೆ ತೆರಳುವಾಗ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version