ದೊಡ್ಡಬಳ್ಳಾಪುರ: ವರಮಹಾಲಕ್ಷ್ಮೀ ಹಬ್ಬಕ್ಕೆ (varamahalakshmi festival) ತಾವರೆ ಹೂ (Lotus flower) ಕೀಳಲೆಂದು ಕೆರೆಗೆ ಇಳಿದ ತಂದೆ ಮಗ ಇಬ್ಬರೂ ಮುಳುಗಿ (Drowned) ಸಾವಿಗೀಡಾದ ಘಟನೆ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ (doddaballapur news) ತಾಲೂಕಿನ ಭೂಚನಹಳ್ಳಿ ಗ್ರಾಮದ ಕೆರೆಯಲ್ಲಿ ನಡೆದಿದೆ.
ತಂದೆ ಪುಟ್ಟರಾಜು (42) ಹಾಗೂ ಮಗ ಕೇಶವ (14) ಮೃತಪಟ್ಟ ದುರ್ದೈವಿಗಳು. ಮೃತರು ದೊಡ್ಡಬಳ್ಳಾಪುರ ಶಾಂತಿನಗರದ ನಿವಾಸಿಗಳು. ಇಂದು ಹಬ್ಬಕ್ಕಾಗಿ ಮಾರಾಟ ಮಾಡಲು ನಿನ್ನೆ ಸಂಜೆ ಭೂಚನಹಳ್ಳಿ ಬಳಿಯ ಕೆರೆಗೆ ತಾವರೆ ಹೂ ಕೀಳಲು ತಂದೆ ಮಗ ಹೋಗಿದ್ದರು. ಕೆರೆಯ ದಡದಲ್ಲಿ ಮೊಬೈಲ್, ಚಪ್ಪಲಿ ಬಿಟ್ಟು ತಾವರೆ ಹೂ ಕೀಳಲು ಮುಂದಾದ ವೇಳೆ ಅವಘಡ ನಡೆದಿದೆ. ಆಳ ತಿಳಿಯದೆ ಮುಂದೆ ಹೋದುದರಿಂದ ಕೆಸರಿನಲ್ಲಿ ಸಿಲುಕಿಕೊಂಡು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.
ಮತ್ತೊಬ್ಬ ತಾವರೆ ಹೂ ಮಾರಾಟಗಾರ ಕೆರೆಯ ಬಳಿ ಹೋದಾಗ ಇಬ್ಬರು ಕೆರೆಯಲ್ಲಿ ಮುಳುಗಿರುವ ಬಗ್ಗೆ ಗೊತ್ತಾಗಿದೆ. ಇಂದು ಬೆಳಗ್ಗೆಯಿಂದ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಕೆರೆಯಲ್ಲಿ ಮೃತದೇಹಗಳಿಗೆ ಶೋಧ ನಡೆಸಿ ದೇಹಗಳನ್ನು ಹೊರಗೆ ತೆಗೆದಿವೆ. ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ ಕುಟುಂಬದಲ್ಲಿ ಇದೀಗ ಶೋಕ ಕವಿದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರ್ಥಿಯ ಶವ ಪತ್ತೆ
ಮಡಿಕೇರಿ: ಕೊಡಗಿನಲ್ಲಿ ಹಾರಂಗಿ ನಾಲೆಯಲ್ಲಿ ಶಾಲಾ ಬಾಲಕ ಕಣ್ಮರೆಯಾದ ಪ್ರಕರಣದಲ್ಲಿ ವಿದ್ಯಾರ್ಥಿಯ ಶವ ಹಾರಂಗಿ ನಾಲೆಯಲ್ಲಿ ಪತ್ತೆಯಾಗಿದೆ. ಕಣ್ಮರೆಯಾಗಿದ್ದ ಜಾಗದಿಂದ ನೂರು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ.
ಕುಶಾಲನಗರ ತಾಲೂಕಿನ ಬ್ಯಾಡಗೊಟ್ಟ ಗ್ರಾಮದ ಅನಿತ್(14) ಮೃತ ವಿದ್ಯಾರ್ಥಿ. ಸದ್ಗುರು ಅಪ್ಪಯ್ಯಸ್ವಾಮಿ ಶಾಲೆಯ ವಿದ್ಯಾರ್ಥಿ ಅನಿತ್ ಶವ ಮಾದಲಾಪುರದಲ್ಲಿ ಪತ್ತೆಯಾಗಿದೆ. ನಿನ್ನೆ ಬೆಳಗ್ಗೆ 8.30ಕ್ಕೆ ದುರ್ಘಟನೆ ನಡೆದಿತ್ತು. ಏಡಿ ಹಿಡಿಯಲು ಮುಂದಾದ ಸಂದರ್ಭ ಬಾಲಕ ನೀರು ಪಾಲಾಗಿದ್ದ. ನಾಲೆಯಲ್ಲಿ ನೀರು ಸ್ಥಗಿತಗೊಳಿಸಿ ಶೋಧಕಾರ್ಯ ನಡೆಸಲಾಗಿತ್ತು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Organ donation: ಸಾವಿನಲ್ಲೂ ಸಾರ್ಥಕತೆ, ಅಪಘಾತದಲ್ಲಿ ಮೃತ ಯುವಕನ ಅಂಗದಾನ