ಆನೇಕಲ್: ಬಿಜೆಪಿ (BJP) ಹಾಗೂ ಮಾಜಿ ಪ್ರಧಾನಿಗಳ ಕೈಗೊಂಬೆಯಾಗಿರುವ ಐಟಿ ಅಧಿಕಾರಿಗಳು ನಮ್ಮ ಕಾರ್ಯಕರ್ತರ ಮನೆಯಲ್ಲಿ ಯುವಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ (Lok Sabha Election 2024) ಆರೋಪಿಸಿದ್ದಾರೆ.
ಆನೇಕಲ್‌ನಲ್ಲಿ ಗುರುವಾರ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸೋಲಿನ ಭೀತಿಯಿಂದ ಐಟಿ, ಇಡಿ ಮೂಲಕ ನಮ್ಮ ಕಾರ್ಯಕರ್ತರನ್ನು ಬೆದರಿಸುವ ಪ್ರಯತ್ನ ನಡೆಯುತ್ತಿದೆ. ನಿನ್ನೆ ಕೆಲವು ಅಧಿಕಾರಿಗಳು ಬಂದು ನಮ್ಮ ಕಾರ್ಯಕರ್ತರನ್ನು, ಅವರ ಕುಟುಂಬದ ಹೆಣ್ಣುಮಕ್ಕಳನ್ನು ಬೆದರಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಬರೆಯುತ್ತಿದ್ದು, ಐಟಿ ಇಲಾಖೆ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಅವರ ಕೆಲಸ ಕೇವಲ ಪರಿಶೀಲನೆ ಮಾಡುವುದು ಮಾತ್ರ. ಅದನ್ನು ಬಿಟ್ಟು ಬಿಜೆಪಿ ಪರ ಪ್ರಚಾರ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಹೀಗೆ ಮುಂದುವರಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಏ. 24ರಂದು ಭಾಷಾ ಉತ್ಸವ
ನನ್ನ ಚಾಲಕರ ಮನೆಯಲ್ಲಿ ಅವರ ಕುಟುಂಬದವರನ್ನು ಎಳೆದಾಡಿದ್ದಾರೆ. ಮಹಿಳೆಯರನ್ನು ತೀಕ್ಷ್ಣವಾಗಿ ಕಂಡು, ಯುವಕರನ್ನು ಒಂಟಿ ಕಾಲಲ್ಲಿ ನಿಲ್ಲಿಸಿದ್ದಾರೆ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಬಿಜೆಪಿಯವರ ಕೈಗೊಂಬೆಯಾಗಿ ಐಟಿ ಅಧಿಕಾರಿಗಳ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಾಗಿದೆ. ಅವರು ಚುನಾವಣೆಯಲ್ಲಿ ಜನರ ಮುಂದೆ ಹೋಗಿ ಹೋರಾಟ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಅಧಿಕಾರಿಗಳ ದುರ್ಬಳಕೆ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಿಷ್ಪಕ್ಷಪಾತ ಚುನಾವಣೆ ಮಾಡಬೇಕು. ನಾನು ನನ್ನ ಕೆಲಸದ ಆಧಾರದ ಮೇಲೆ ಮತ ಕೇಳುತ್ತಿದ್ದೇನೆ ಹೊರತು, ನನಗೆ ಯಾರನ್ನು ಬೆದರಿಸುವ ಅಗತ್ಯವಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: Lok Sabha Election 2024: ಡಿ.ಕೆ. ಸುರೇಶ್ ಗೆಲುವಿಗಾಗಿ ಚಾಮುಂಡಿ ಬೆಟ್ಟ ಹತ್ತಿ ಪ್ರಾರ್ಥಿಸಿದ ಅಭಿಮಾನಿಗಳು
ಜನತಾದಳ ಹಾಗೂ ಜೆಡಿಎಸ್‌ನವರು ಕ್ಷುಲ್ಲಕ ರಾಜಕಾರಣ ಮಾಡುವುದರಲ್ಲಿ ಹೆಸರುವಾಸಿ. ಅವರು ಹಿರಿಯರಿದ್ದು, ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅವರು ಮಾಡಿರುವ ಆರೋಪಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದ ಅವರು, ನಾನು ಹಾಗೂ ಶಿವಕುಮಾರ್ ಅವರಿಗೆ ಕಲ್ಲು ಹೊಡೆದಿದ್ದಾರೆ ಎಂದು ಹೇಳುತ್ತಾರಲ್ಲ, ಅವರ ಕುಟುಂಬದಲ್ಲಿ ಯಾರೆಲ್ಲಾ ಎಲ್ಲಿ ಕಲ್ಲು ಹೊಡೆದಿದ್ದಾರೆ ಎಂದು ನಾನು ತೋರಿಸುತ್ತೇನೆ. ಅವರು ಯಾರ ಜಮಿನುಗಳನ್ನು ಯಾರ ಹೆಸರಲ್ಲಿ ಹಾಕಿಕೊಂಡಿದ್ದಾರೆ ಎಂಬುದನ್ನು ತೋರಿಸಬಹುದು. ಆದರೆ ಅದರ ಅಗತ್ಯ ನಮಗಿಲ್ಲ ಎಂದು ತಿಳಿಸಿದ್ದಾರೆ.