ಆನೇಕಲ್: ಒಂಟಿ ಸಲಗ ಗ್ರಾಮಕ್ಕೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ರಾಜ್ಯ ಗಡಿಭಾಗದ ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಕಾಡಾನೆಯಿಂದ (Elephant Attack) ದಂಪತಿ ಬಚಾವ್ ಆಗಿದ್ದು, ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಕಲ್ಲಂಗಡಿ ವ್ಯಾಪಾರಿಗಳು ಬದುಕುಳಿದಿದ್ದಾರೆ.
ಮುಂಜಾನೆ 5 ಗಂಟೆಯ ಸುಮಾರಿಗೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ರಸ್ತೆ ಬದಿ ಕಲ್ಲಂಗಡಿ ಅಂಗಡಿ ಇದ್ದ ಸ್ಥಳಕ್ಕೆ ತೆರಳಿದೆ. ಕಲ್ಲಂಗಡಿ ಹಣ್ಣು ತಿನ್ನಲು ಅಂಗಡಿ ಕಡೆ ಆನೆ ತೆರಳಿದಾಗ, ಓಡಿ… ಓಡಿ… ಎಂದು ಗ್ರಾಮಸ್ಥರು ಕೂಗಿಕೊಂಡಿದ್ದಾರೆ. ಈ ವೇಳೆ ವ್ಯಾಪಾರಿ ಮತ್ತು ಆತನ ಪತ್ನಿ ಅಲ್ಲಿಂದ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ನಂತರ ಗ್ರಾಮದಲ್ಲಿ ಒಂಟಿ ಸಲಗ ಸಂಚರಿಸಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಸಿತು.
ಮಹಿಳೆ ತಲೆ ಮೇಲೆ ಹರಿದ ಕ್ಯಾಂಟರ್; ಹೆಲ್ಮೆಟ್ ಹಾಕಿದ್ದರೆ ಉಳಿಯುತ್ತಿತ್ತು ಜೀವ
ಬೆಂಗಳೂರು: ವೇಗವಾಗಿ ಬಂದ ಕ್ಯಾಂಟರ್ ವಾಹನವೊಂದು ಚಲಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ( Road Accident)ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಮಹಿಳೆ ತಲೆ ಮೇಲೆ ಲಾರಿ ಹರಿದಿದೆ. ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ರಸ್ತೆಯಲ್ಲಿ ಅಪಘಾತ ನಡೆದಿದೆ. ಗೂಡ್ಸ್ ವಾಹನ ಗುದ್ದಿದ ಕಾರಣಕ್ಕೆ ಸ್ಕೂಟರ್ ಜಖಂ ಗೊಂಡಿದೆ. ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಇನ್ನು ಘಟನೆಯಲ್ಲಿ ಮಹಿಳೆ ಹೆಲ್ಮೆಟ್ ಹಾಕಿದ್ದರೆ ಜೀವ ಉಳಿತ್ತಿತ್ತು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳು. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಲಾರಿಗೆ ಟಿಟಿ ವಾಹನ ಡಿಕ್ಕಿ; ಮೂವರು ಸಾವು, ಮೂವರು ಗಂಭೀರ
ರಾಮನಗರ: ಮದುವೆ ಸಂಭ್ರಮವನ್ನು ಮುಗಿಸಿ ವಾಪಸ್ ಊರಿಗೆ ಟಿಟಿಯಲ್ಲಿ ತೆರಳುತ್ತಿದ್ದ ಅವರಿಗೆ ಯಮರೂಪಿಯಾಗಿ ಬಂದ ಲಾರಿಯು ಪ್ರಾಣವನ್ನೇ (Road Accident) ಕಸಿದಿದೆ. ರಾಮನಗರದ ಚನ್ನಪಟ್ಟಣ ತಾಲೂಕಿನ ಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ಬಳಿ ಈ ದುರ್ಘಟನೆ ನಡೆದಿದೆ. ರಸ್ತೆ ಅಪಘಾತದಲ್ಲಿ ಸೋಮಲಿಂಗಪ್ಪ (70), ಶಿವಲಿಂಗಪ್ಪ (66), ರಾಜೇಶ್ವರಿ ಎಂಬುವವರು ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ.
ತಡರಾತ್ರಿ 2 ಗಂಟೆ ಸುಮಾರಿಗೆ ಕುಟುಂಬ ಸಮೇತ ಮದುವೆ ಮುಗಿಸಿಕೊಂಡು ವಾಪಸ್ ಹೋಗುವಾಗ ಹಿಂಬದಿಯಿಂದ ಬಂದ ಟಿಟಿ ವಾಹನವು ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮಹಿಳೆ ಸೇರಿ ಸ್ಥಳದಲ್ಲೇ ಮೂವರು ಮಸಣ ಸೇರಿದರೆ, ಮೂವರು ಗಂಭೀರ ಗಾಯಗೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಿಗೆ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದೆ. ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಬಳಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ