ಆನೇಕಲ್: ರಸ್ತೆ ದಾಟಿಬಿಟ್ಟಿದ್ದರೆ ಆಕೆ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಸುರಕ್ಷಿತವಾಗಿರುತ್ತಿದ್ದರು. ಆಕೆ ಹೊಟ್ಟೆಯಲ್ಲಿದ್ದ ಮಗುವಿನ ಹೃದಯದಲ್ಲಿದ್ದ ರಂಧ್ರದ ಚಿಕಿತ್ಸೆಗಾಗಿ ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದಳು. ಆದರೆ ಲಾರಿಯೊಂದು (Road accident) ಆಕೆಯನ್ನು ಬಲಿ ಪಡೆದಿದೆ.
ಭೀಕರ ಅಪಘಾತದಲ್ಲಿ (Road accident) ಲಾರಿ ಮೈಮೇಲೆ ಹರಿದು 7 ತಿಂಗಳ ಗರ್ಭಿಣಿಯೊಬ್ಬರು ಸೇರಿದಂತೆ (pregnant death) ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬೊಮ್ಮಸಂದ್ರ ಬಳಿಯ ನಾರಾಯಣ ಹೃದಯಾಲಯ ಆಸ್ಪತ್ರೆ ಮುಂಭಾಗ ಅಪಘಾತ ನಡೆದಿದ್ದು, ಎರಡೂ ದೇಹಗಳೂ ಛಿದ್ರವಾಗಿವೆ. ಮೃತರನ್ನು ಗರ್ಭಿಣಿ ರುಕಿಯಾ (28) ಹಾಗೂ ಲಕ್ಷ್ಮಮ್ಮ (50) ಎಂದು ಗುರುತಿಸಲಾಗಿದೆ. ಇಬ್ಬರೂ ಆಚೆ ಕಡೆ ಇದ್ದ ಆಸ್ಪತ್ರೆಗೆ ಹೋಗಲು ಹೆದ್ದಾರಿ ದಾಟುತ್ತಿದ್ದರು.
ಇಲ್ಲಿ ನಾರಾಯಣ ಹೃದಯಾಲಯ ಮತ್ತು ಬಿಟಿಎಲ್ ಕಾಲೇಜಿದೆ. ಬೊಮ್ಮಸಂದ್ರ ಕೈಗಾರಿಕೆಗಳಿಗೆ ಬರುವ ಕಾರ್ಮಿಕರು ಇಲ್ಲಿ ಪ್ರತಿ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ದಾಟುತ್ತಾರೆ. ಇಲ್ಲಿ ಪಾದಚಾರಿಗಳಿಗೆ ಸ್ಕೈವಾಕ್ ಇದೆ, ಆದ್ರೆ ಎಕ್ಸಲೇಟರ್ ಇಲ್ಲದಿರುವುದರಿಂದ ವೃದ್ಧರು, ಮಕ್ಕಳು, ಗರ್ಭಿಣಿಯರು ಮೆಟ್ಟಿಲು ಹತ್ತಲು ಕಷ್ಟವೆನಿಸುತ್ತದೆ. ಹೀಗಾಗಿ 7 ತಿಂಗಳ ಗರ್ಭಿಣಿ ರುಕಿಯಾ ರಸ್ತೆ ದಾಟಲು ಮುಂದಾಗಿದ್ದರು. ಎನ್‌ಎಚ್‌ಎ ವತಿಯಿಂದ ಅವೈಜ್ಞಾನಿಕ ಸ್ಕೈ ವಾಕ್ ಮಾಡಿರುವುದೇ ಅಪಘಾತಗಳಿಗೆ ಕಾರಣ ಎಂದು ದೂರಲಾಗಿದೆ.
ರುಕಿಯಾ ಏಳು ತಿಂಗಳ ತುಂಬು ಗರ್ಭಿಣಿಯಾದ್ದರಿಂದ ಸ್ಕೈವಾಕ್ ಹತ್ತಲಾಗದೆ ರಸ್ತೆ ದಾಟುತ್ತಿದ್ದರು. ಆಂಧ್ರ ಮೂಲದ ಮದನಪಲ್ಲಿ ನಿವಾಸಿಯಾಗಿದ್ದ ಇವರು ನಿನ್ನೆ ಮದನಪಲ್ಲಿಯಿಂದ ಬಂದಿದ್ದರು. ಹೊಟ್ಟೆಯಲ್ಲಿದ್ದ ಮಗುವಿನ ಹೃದಯದಲ್ಲಿ ರಂಧ್ರ ಇರುವುದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಚಿಕಿತ್ಸೆಗಾಗಿ ತನ್ನ ಅಕ್ಕ ರಬಿಯಾ ಜೊತೆಗೆ ಆಂಧ್ರದಿಂದ ಬಂದಿದ್ದರು. ವರ್ತೂರು ಸಮೀಪದ ಮದುರಾನಗರದ ಲಕ್ಷ್ಮಮ್ಮ (50) ಎಂಬ ಮಹಿಳೆ ಕೂಡ ಇವರಿಗೆ ಸಾಥ್ ನೀಡಿದ್ದರು. ಬಸ್ ಇಳಿದು ಹೆದ್ದಾರಿ ದಾಟಲು ಹೋದಾಗ ಅಪಘಾತ ಸಂಭವಿಸಿದೆ.
ಪ್ರಯಾಣಿಕರು ರಸ್ತೆ ದಾಟುವಲ್ಲಿ ನಿರ್ಲಕ್ಷ್ಯ ಹಾಗೂ ವೇಗದಿಂದ ಕಂಟೇನರ್ ಲಾರಿ ಚಾಲಕ ವಾಹನ ಚಲಾಯಿಸಿ ಇಬ್ಬರ ಬಲಿ ಪಡೆದಿದ್ದಾನೆ. ಇದಕ್ಕೂ ಮೊದಲು ಈತ ಟಾಟಾ ಏಸ್ ಒಂದಕ್ಕೆ ಗುದ್ದುವುದರಿಂದ ತಪ್ಪಿಸಿಕೊಂಡಿದ್ದ ಎಂದು ಗೊತ್ತಾಗಿದೆ. ಚಾಲಕನನ್ನು ಬಂಧಿಸಲಾಗಿದೆ.
ಡಿವೈಡರ್‌ಗೆ ಬೈಕ್ ಗುದ್ದಿ ಯುವಕ ಸಾವು, ಯುವತಿ ಗಂಭೀರ
ದೊಡ್ಡಬಳ್ಳಾಪುರ: ರಸ್ತೆ ಬದಿಯ ಡಿವೈಡರ್‌ಗೆ ದ್ವಿಚಕ್ರ ವಾಹನ ಗುದ್ದಿ ಒಬ್ಬ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ದೊಡ್ಡಬಳ್ಳಾಪುರದ ಕತ್ತಿಹೊಸಹಳ್ಳಿ ಬಳಿ ಘಟನೆ ನಡೆದಿದೆ.
ತುಮಕೂರಿನಿಂದ ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಬರುವ ವೇಳೆ ದುರ್ಘಟನೆ ನಡೆದಿದೆ. ರಸ್ತೆ ಬದಿಯ ಡಿವೈಡರ್‌ಗೆ ಗುದ್ದಿ, ಪಕ್ಕದ ರಸ್ತೆಗೆ ಬಿದ್ದು ಸಾವು ಸಂಭವಿಸಿದೆ. ಪೊಲೀಸರು ಮೃತನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬೈಕ್‌ನ ಹಿಂಬದಿ ಕುಳಿತಿದ್ದ ಯುವತಿಗೆ ತೀವ್ರ ಗಾಯಗಳಾಗಿದ್ದು, ದೊಡ್ಡಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರು ಮೂಲದ ಯುವಕ ಯುವತಿ ಎನ್ನಲಾಗಿದ್ದು, ತಲೆಗೆ ತಲೆ ತೀವ್ರ ಪೆಟ್ಟಾದ ಹಿನ್ನಲೆ ಸ್ಥಳದಲ್ಲೇ ಯುವಕ ಸಾವಿಗೀಡಾಗಿದ್ದಾನೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road Accident : ತುಮಕೂರು ಬಳಿ ಬಸ್ – ಕಾರು ನಡುವೆ ಅಪಘಾತ; ಇಬ್ಬರ ಸಾವು