ಆನೇಕಲ್: ಶಾಲಾ ಬಸ್ ಹರಿದು ವಿದ್ಯಾರ್ಥಿಯೊಬ್ಬ ದಾರುಣ ಸಾವು ಕಂಡ ಘಟನೆ (student death) ಆನೇಕಲ್ ತಾಲ್ಲೂಕಿನ ಎಂ.ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಿವ್ಯಾಂಶು ಸಿಂಗ್ ಎಂಬ ಎಂಟು ವರ್ಷದ ಬಾಲಕ ಮೃತ ದುರ್ದೈವಿ. ಈತ ಆನೇಕಲ್ ತಾಲ್ಲೂಕಿನ ಬಿದರಗೆರೆಯ ಎಸ್ಎಸ್ವಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನಿನ್ನೆ ಸಂಜೆ 6 ಗಂಟೆಗೆ ಶಾಲೆಯಿಂದ ಟ್ಯೂಷನ್ ಮುಗಿಸಿ ಮನೆಗೆ ಬರುವಾಗ ದುರ್ಘಟನೆ ನಡೆದಿದೆ.
ಮೇಡಹಳ್ಳಿಯ ಸಾಯಿ ಪ್ಯಾರಡೈಸ್ ಬಡಾವಣೆಯಲ್ಲಿ ಬಾಲಕನ ಕುಟುಂಬ ವಾಸವಿದೆ. ಎಂದಿನಂತೆ ಶಾಲೆಗೆ ಹೋಗಿ ಸಂಜೆ ಶಾಲಾ ಬಸ್‌ನಲ್ಲಿಯೇ ಈತ ಹಿಂತಿರುಗುತ್ತಿದ್ದ. ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಶಾಲಾ ವಾಹನದಲ್ಲಿ ಮನೆ ಸಮೀಪ ಇಳಿದಿದ್ದ ಬಾಲಕ, ಆ ವಾಹನದ ಮುಂಭಾಗದಿಂದಲೇ ರಸ್ತೆ ದಾಟಿ ಮನೆಯ ಕಡೆಗೆ ಹೋಗಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಚಾಲಕ ಅಜಾಗರೂಕತೆಯಿಂದ ವಾಹನವನ್ನು ಮುಂದೆ ಚಲಿಸಿದ್ದು, ಮುಂದಿದ್ದ ಬಾಲಕನ ಮೇಲೆ ಬಸ್ ಹರಿದಿದೆ. ಚಕ್ರಕ್ಕೆ ಸಿಲುಕಿ ಬಾಲಕ ದಾರುಣ ಸಾವು ಕಂಡಿದ್ದಾನೆ.
ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಾಹನಕ್ಕೆ ಕಂಡಕ್ಟರ್ ನೇಮಿಸದೆ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ ಎಂದು ಪೋಷಕರು ಆಪಾದಿಸಿದ್ದಾರೆ. ಕಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಜೋಪಾನವಾಗಿ ವಾಹನದಿಂದ ಇಳಿಸಿ, ಅವರು ರಸ್ತೆಯ ಇನ್ನೊಂದು ಕಡೆಗೆ ಹೋಗುವುದಿದ್ದರೆ ಜಾಗರೂಕತೆಯಿಂದ ವಾಹನ ಸಿಬ್ಬಂದಿ ರಸ್ತೆ ದಾಟಿಸಿ ಬರಬೇಕು. ಆದರೆ ಈ ಶಾಲಾ ಬಸ್‌ನಲ್ಲಿ ಡ್ರೈವರ್ ಹೊರತುಪಡಿಸಿ ಕ್ಲೀನರ್ ಸೇರಿದಂತೆ ಬೇರೆ ಯಾವ ಸಿಬ್ಬಂದಿಯೂ ಇರಲಿಲ್ಲ. ಶಾಲಾ ಆಡಳಿತ ಮಂಡಳಿ ಹಾಗೂ ಚಾಲಕನ ಬೇಜವಾಬ್ದಾರಿಗೆ ಕಂದಮ್ಮ ಬಲಿಯಾಗಿದೆ.
ಬಾಲಕನ ಮೃತದೇಹವನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (accident case) ದಾಖಲಾಗಿದೆ.
ಇದನ್ನೂ ಓದಿ: Road Accident: ಮಿನಿ ಗೂಡ್ಸ್ ವಾಹನ ಡಿಕ್ಕಿ; ಶಾಲಾ ಬಾಲಕಿ ಸಾವು