ಆನೇಕಲ್: ಬಿರು ಬೇಸಿಗೆಗೆ ಜನರು ತತ್ತರಿಸಿ ಹೋಗಿದ್ದಾರೆ. ಬೆಂಗಳೂರು ಸೇರಿ ಇಡೀ ರಾಜ್ಯದಲ್ಲೇ ನೀರಿನ ಸಮಸ್ಯೆ (Water Crisis) ಉಲ್ಬಣವಾಗಿದೆ. ಬೇಸಿಗೆ ಆರಂಭದಲ್ಲೇ ನೀರಿಗಾಗಿ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೂ (Bannerughatta Park) ಹನಿ ಹನಿ ನೀರಿಗೆ ಪರದಾಡುವಂತಾಗಿದೆ.
ನೀರಿಗಾಗಿ ಎಲ್ಲೆಲ್ಲೂ ಹಾಹಾಕಾರ ಶುರುವಾಗಿದೆ. ನೀರಿನ ಸಮಸ್ಯೆ ಕೇವಲ ಜನರಿಗೆ ಮಾತ್ರ ಬಾಧಿಸುತ್ತಿಲ್ಲ, ಬದಲಿಗೆ ಪ್ರಾಣಿ ಸಂಕುಲವು ತತ್ತರಿಸಿ ಹೋಗುವಂತೆ ಮಾಡಿದೆ. ತೀವ್ರ ಬರ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದ 6 ಬೋರ್‌ವೆಲ್‌ಗಳು ಬತ್ತಿ ಹೋಗಿವೆ.
ಉದ್ಯಾನವನದಲ್ಲಿ 8 ನೀರಿನ ಬೋರ್‌ವೆಲ್‌ಗಳಿದ್ದು, ಅದರಲ್ಲಿ 6 ಬೋರ್‌ವೆಲ್‌ಗಳು ನೀರಿಲ್ಲದೆ ಬರಿದಾಗಿದೆ. ಬನ್ನೇರುಘಟ್ಟ ಉದ್ಯಾನವನದ ಝೂ, ಚಿಟ್ಟೆಪಾರ್ಕ್, ಸಫಾರಿ, ರೆಸ್ಕ್ಯೂ ಸೆಂಟರ್ ಸೇರಿದಂತೆ ನಿತ್ಯ ಬಳಕೆಗೆ 1 ಲಕ್ಷ ಲೀಟರ್‌ನಷ್ಟು ನೀರು ಬೇಕಿದೆ.
ಸದ್ಯಕ್ಕೆ ರೆಸ್ಕ್ಯೂ ಸೆಂಟರ್‌ನಲ್ಲಿರುವ ಕೇವಲ 2 ಬೋರ್‌ವೆಲ್‌ಗಳಿಂದ 60 ರಿಂದ 70 ಸಾವಿರ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಝೂ, ಚಿಟ್ಟೆ ಪಾರ್ಕ್ ಮತ್ತು ಸಫಾರಿ ಏರಿಯಾದಲ್ಲಿರುವ 6 ಬೋರ್‌ವೆಲ್‌ಗಳು ಬರಿದಾಗಿದೆ. ಕೊಳವೆ ಬಾವಿಗಳು ಮಾತ್ರವಲ್ಲಉದ್ಯಾನವನದ ಕೆರೆಗಳು ಬತ್ತಿದೆ.
ಇದನ್ನೂ ಓದಿ: Water Crisis : ಬೆಂಗಳೂರಿಗರೇ ಭಯ ಬೇಡ; ಕುಡಿಯುವ ನೀರಿನ ಕೊರತೆ ಇಲ್ಲ, ಆದರೆ ..
ಉದ್ಯಾನವನ ವ್ಯಾಪ್ತಿಯಲ್ಲಿ ಐದು ಕೆರೆಗಳಿದ್ದು ನೀರಿನ ಕೊರತೆ ಎದುರಾಗಿದೆ. ಸಾಕಾನೆಗಳ ಬಿಡಾರದ ಸೀಗೆಕಟ್ಟೆ ಕೆರೆಯಲ್ಲೂ ನೀರಿಲ್ಲ. ಇದೇ ಮೊದಲ ಬಾರಿಗೆ ನೀರಿಲ್ಲದೆ ಕೆರೆಯು ಬತ್ತುವ ಹಂತಕ್ಕೆ ತಲುಪಿದೆ. ಇದರಿಂದಾಗಿ ಉದ್ಯಾನವನದ ಪ್ರಾಣಿ ಪಕ್ಷಿಗಳಿಗೆ ನೀರಿಲ್ಲದಂತಾಗಿದೆ. ಮೊಸಳೆ, ಹಿಪ್ಪೋ ಮತ್ತು ಕೊಕ್ಕರೆ ಹೊಂಡಗಳಲ್ಲಿ ನೀರಿನ ಕೊರತೆ ಇದೆ.
ಸಿಬ್ಬಂದಿಗೆ ಕುಡಿಯುವ ನೀರಿಲ್ಲ
ಉದ್ಯಾನವನದ ಸಿಬ್ಬಂದಿ ಹಾಗೂ ಪ್ರವಾಸಿಗರಿಗೆ ಕುಡಿಯುವ ನೀರಿಗೂ ತತ್ತರಿಸುವಂತಾಗಿದೆ. ಕುಡಿಯುವ ನೀರಿಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಐದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನೀರಿಲ್ಲದೇ ಬನ್ನೇರುಘಟ್ಟದ ಪ್ರಾಣಿ-ಪಕ್ಷಿಗಳ ಸ್ಥಿತಿ ಅಧೋಗತಿಯಾಗಲಿದೆ.
ಉದ್ಯಾನವನಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಮಾಡದಿರುವುದೇ ಇದೆಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಸದ್ಯ 731 ಹೆಕ್ಟರ್ ಪ್ರದೇಶದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 100 ವಿವಿಧ ಜಾತಿಯ 2000ಕ್ಕೂ ಹೆಚ್ಚು ಪ್ರಾಣಿ-ಪಕ್ಷಿ ಸಂಕುಲ ಇವೆ. ಸಫಾರಿ ಹಾಗೂ ಝೂನಲ್ಲಿನ ಪ್ರಾಣಿ ಪಕ್ಷಿ ಮತ್ತು ಗಿಡಮರಗಳಿಗೂ ಜೀವಜಲ ಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ