ಬೆಂಗಳೂರು: ಏರ್‌ಪೋರ್ಟ್ ರಸ್ತೆಗೆ ಸಂಪರ್ಕವಾಗಿರುವ ಚಾಲುಕ್ಯ ಸರ್ಕಲ್ ಬಳಿ ನಿತ್ಯ ಟ್ರಾಫಿಕ್ ಜಾಮ್ (Bengaluru Traffic) ಇದ್ದೇ ಇರುತ್ತದೆ. ನಗರದ ಪ್ರಮುಖ ಜಂಕ್ಷನ್ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚಾರ ಮಾಡುತ್ತವೆ. ಹೀಗಾಗಿ ಇಲ್ಲಿ ಸಂಚಾರ ದಟ್ಟನೆಯನ್ನು ಕಡಿಮೆ ಮಾಡಲು ಟ್ರಾಫಿಕ್ ಪೋಲೀಸರು ಹಾಗೂ ಬಿಬಿಎಂಪಿ ಜಂಟಿಯಾಗಿ ಹೊಸ ಕಾಮಗಾರಿ ಕೈಗೆತ್ತಿಕೊಂಡಿದೆ. ಇನ್ನು ಈ ತಿಂಗಳ ಅಂತ್ಯದಲ್ಲಿ ಇದು ಪೂರ್ಣವಾಗುವ ನಿರೀಕ್ಷೆಯಿದ್ದು, ಟ್ರಾಫಿಕ್‌ಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ಬೀಳುವ ಭರವಸೆ ಇದೆ.
ವಿಧಾನಸೌಧ ಸಮೀಪದ ಹೈಗ್ರೌಂಡ್ ಜಂಕ್ಷನ್‌ನ ವಾಹನದಟ್ಟಣೆ ನಿವಾರಣೆಗೆ ಕೆ.ಆರ್. ಸರ್ಕಲ್’ ಮಾದರಿ ಸಂಚಾರ ನಿಯಮವನ್ನು ಜಾರಿಗೆ ತರಲು ಸಂಚಾರಿ ಪೊಲೀಸರ ವಿಭಾಗ ಮುಂದಾಗಿದೆ. ನಗರದೊಳಗಿಂದ ಏರ್‌ಪೋರ್ಟ್‌ಗೆ ಸಿಗ್ನಲ್ ಮುಕ್ತ ಸಂಚಾರ ಸೌಲಭ್ಯ ಕಲ್ಪಿಸುವ ಮೊದಲ ಜಂಕ್ಷನ್ ಹೈಗ್ರೌಂಡ್ಸ್‌ನಿಂದ ಆರಂಭವಾಗುತ್ತದೆ. ಇಲ್ಲಿ ಸಂಚಾರ ಸುಲಭವಾದಲ್ಲಿ ಬಳ್ಳಾರಿ ರಸ್ತೆಯ ಮೂಲಕ ಬಹುಬೇಗ ಏರ್‌ಪೋರ್ಟ್ ತಲುಪಬಹುದು ಎಂದು ಹೇಳಲಾಗುತ್ತಿದೆ.
2008ರಲ್ಲಿ ಹೈಗ್ರೌಂಡ್ ಜಂಕ್ಷನ್‌ನಲ್ಲಿ ‘ಈಲ್ಡ್’ ಮಾದರಿ (ಪ್ರಯಾಣಿಕರ ತಿಳಿವಳಿಕೆ ಆಧಾರಿತ) ಸಂಚಾರ ನಿಯಂತ್ರಣ ವ್ಯವಸ್ಥೆಗೆ ಬಂದಿತ್ತು. ಆರಂಭದಲ್ಲಿ ಇದು ಯಶಸ್ಸು ಪಡೆದರೂ, ನಂತರದ ವರ್ಷಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ವಿಪರೀತ ದಟ್ಟಣೆ ಉಂಟಾಗಿತ್ತು. ಇದಕ್ಕೆ ಪರಿಹಾರವಾಗಿ ಹೈಗ್ರೌಂಡ್ಸ್ ಬಳಿ ಇದ್ದ ವೃತ್ತಾಕಾರದ ಈಲ್ಡ್ ವ್ಯವಸ್ಥೆ ತೆರವುಗೊಳಿಸಿ ನೇರವಾಗಿ ವಾಹನ ಸಂಚರಿಸಲು ಹೊಸ ಉಪಾಯ ಕಂಡುಕೊಳ್ಳಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ. ಈ ಹಿಂದೆ ಇಂಥದ್ದೇ ಸಮಸ್ಯೆ ಎದುರಿಸುತ್ತಿದ್ದ ಕೆ.ಆರ್. ಸರ್ಕಲ್‌ನಲ್ಲಿ ವೃತ್ತದ ಜಾಗವನ್ನು ತೆರವುಗೊಳಿಸಲಾಗಿತ್ತು. ಇದೀಗ ಇದೇ ಮಾದರಿಯನ್ನು ಅಳವಡಿಕೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಅಪಘಾತದಲ್ಲಿ ಮೊಣಕಾಲು ಕಳೆದುಕೊಂಡಿದ್ದ ಜಿಮ್ ಟ್ರೇನರ್ ಬಾಳಿಗೆ ಬೆಳಕಾದ ವೈದ್ಯರು; ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕೆಲ ದಿನಗಳ ಮಟ್ಟಿಗೆ ಕಾಮಗಾರಿ ನಿಧಾನವಾಗಿ ಸಾಗಿತ್ತು. ಆದರೆ ಈಗ ಸಂಚಾರ ದಟ್ಟಣೆಗೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬಹುದು ಎಂಬ ಸಂದೇಶವನ್ನು ಆಯೋಗದಿಂದ ಪೊಲೀಸ್ ಇಲಾಖೆಗೆ ರವಾನಿಸಲಾಗಿದೆ. ಇದರಿಂದಾಗಿ ಕಾಮಗಾರಿ ಪುನಾರಂಭಗೊಂಡಿದ್ದು, ಮಾಸಾಂತ್ಯಕ್ಕೆ ಪೂರ್ಣಗೊಂಡು ಹೊಸ ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಹೆಬ್ಬಾಳ, ಯಲಹಂಕ ಸೇರಿ ಏರ್‌ಪೋರ್ಟ್ ಕಡೆಗೆ ತೆರಳುವ ಪ್ರಯಾಣಿಕರಿಗೆ ಕೊಂಚ ಟ್ರಾಫಿಕ್ ಕಡಿಮೆ ಆಗಲಿದೆ.