Site icon Vistara News

Sahitya Sammelana: ಇಂದು, ನಾಳೆ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

HS Srimathi

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಇಂದು (ಮಾರ್ಚ್‌ 11) ಮತ್ತು ನಾಳೆ (ಮಾ.12) 16ನೇ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು (Sahitya Sammelana) ವಸಂತನಗರದ ಕಾವೇರಪ್ಪ ಬಡಾವಣೆಯ ಮಹಾವೀರ ಜೈನ್‌ ಆಸ್ಪತ್ರೆ ಸಮೀಪದ ಮಿಲ್ಲರ್ಸ್‌ ರಸ್ತೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಲೇಖಕಿ ಡಾ.ಎಚ್‌.ಎಸ್. ಶ್ರೀಮತಿ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ.

ಸಮ್ಮೇಳನದ ಮೊದಲ ದಿನ ಮಾ. 11 ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ಪರಿಷತ್‌ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಅವರು ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜಾರೋಹಣ ಮಾಡಲಿದ್ದಾರೆ. ಜಿಲ್ಲಾಧಿಕಾರಿ ಕೆ.ಎ. ದಯಾನಂದ ನಾಡಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಗ್ಗೆ 8.30ಕ್ಕೆ ವಿಧಾನಸೌಧ ಬಳಿಯ ಶಾಂತವೇರಿ ಗೋಪಾಲಗೌಡ ವೃತ್ತದಲ್ಲಿ ಕನ್ನಡ ಜಾಗೃತಿ ಮೆರವಣಿಗೆಗೆ ಸಂಸದ ಪಿ.ಸಿ.ಮೋಹನ್‌ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಕನ್ನಡ ಜಾಗೃತಿ ಜ್ಯೋತಿಯನ್ನು ಬೆಳಗಲಿದ್ದಾರೆ. ನಂತರ ಬೆಳಗ್ಗೆ 9.45ಕ್ಕೆ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಕನ್ನಡ ಜಾಗೃತ ಜ್ಯೋತಿಯನ್ನು ಸಮ್ಮೇಳನಾಧ್ಯಕ್ಷೆ ಡಾ.ಎಚ್.ಎಸ್.ಶ್ರೀಮತಿ ಅವರು ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಅವಳ ಬಳಿ ಟ್ರ್ಯಾಕ್‌ ಶೂ ಕೊಳ್ಳಲೂ ದುಡ್ಡಿರಲಿಲ್ಲ, ಈಗ ಆಕೆ ಜಗತ್ತಿನ ದೊಡ್ಡ ಶೂ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್‌!

ಬೆಳಗ್ಗೆ 10ರಿಂದ 12 ಗಂಟೆವರೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ ಪ್ರೊ. ಒ.ಎಲ್. ನಾಗಭೂಷಣ ಸ್ವಾಮಿ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಲೇಖಕಿ ಡಾ.ಎಚ್‌.ಎಸ್‌. ಶ್ರೀಮತಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸಿ.ವೀರಣ್ಣ ಅವರು ಸಮ್ಮೇಳನಾಧ್ಯಕ್ಷೆ ಡಾ. ಎಚ್‌.ಎಸ್‌. ಶ್ರೀಮತಿ ಅವರಿಗೆ ಧ್ವಜವನ್ನು ಹಸ್ತಾಂತರ ಮಾಡಲಿದ್ದಾರೆ.

ಇದೇ ವೇಳೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ರಾಜ್ಯಸಭಾ ಸದಸ್ಯ ಬಿ.ಸಿ. ಚಂದ್ರಶೇಖರ್‌ ಅವರು ಐತಿಹಾಸಿಕ ಬೆಂಗಳೂರು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರು ವಿವಿಧ ಪ್ರಕಾರದ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಶಾಸಕ ರಿಜ್ವಾನ್‌ ಅರ್ಷದ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ಯ 12.10 ರಿಂದ 1.40ರವರೆಗೆ ಗೋಷ್ಠಿ-1 ʼನಮ್ಮ ಬೆಂಗಳೂರುʼ ವಿಷಯದ ಬಗ್ಗೆ ವಿಶೇಷ ಉಪನ್ಯಾಸವಿರಲಿದೆ. 2.30ರಿಂದ 3.40 ರವರೆಗೆ ಗೋಷ್ಠಿ-2 ಕರ್ನಾಟಕದಲ್ಲಿ ಮಹಿಳಾಭಿವೃದ್ಧಿ; ಅವಲೋಕನ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. ಮಧ್ಯಾಹ್ನ 3.45 ರಿಂದ 5.15 ರವರೆಗೆ ಕವಿಗೋಷ್ಠಿ-1 ನಡೆಯಲಿದೆ.

ಸಂಜೆ 5.30ರಿಂದ 6.30ರವರೆಗೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. 6.30ರಿಂದ 7.45ರವರೆಗೆ ಅದಮ್ಯ ರಂಗಸಂಸ್ಕೃತಿ ಟ್ರಸ್ಟ್‌ ವತಿಯಿಂದ ಪ್ರೊ.ನಾರಾಯಣಘಟ್ಟ ಅವರ ಅನುವಾದನೆಯ ಕವಿರತ್ನ ಕಾಳಿದಾಸರ ʼಮೇಘಧೂತʼ ನಾಟಕ ಪ್ರದರ್ಶನವಿರಲಿದೆ. ರಾತ್ರಿ 7.45ರಿಂದ 8 ಗಂಟೆವರೆಗೆ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ಸಮ್ಮೇಳನದ ಎರಡನೇ ದಿನ ಮಾ.12ರಂದು 9.30ಕ್ಕೆ ಜಾನಪದ ತಂಡಗಳ ಕಲಾ ಪ್ರದರ್ಶನ, 10 ಗಂಟೆಗೆ ರೈತ ಗೀತೆ ಗಾಯನ ನಡೆಯಲಿದೆ. ಬೆಳಗ್ಗೆ 10.10 ರಿಂದ 11.25 ರವರೆಗೆ ಗೋಷ್ಠಿ-3 ಕರ್ನಾಟಕ ಸಂಸ್ಕೃತಿ; ಬಹುತ್ವದ ನೆಲೆಗಳು ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಲಿದೆ. 11.25 ರಿಂದ 12.45 ರವರೆಗೆ ಗೋಷ್ಠಿ-4ರಲ್ಲಿ ಡಾ. ಎಚ್‌.ಎಸ್‌. ಶ್ರೀಮತಿ ಅವರ ಬದುಕು-ಬರಹ, ಕನ್ನಡ ಸಾಹಿತ್ಯದಲ್ಲಿ ಸ್ತ್ರೀವಾದ: ಅವಲೋಕನ ವಿಷಯದ ಬಗ್ಗೆ ವಿಶೇಷ ಉಪನ್ಯಾಸವಿರಲಿದೆ.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಅಂತಃಸ್ಫೋಟದ ಅಂಚಿನಲ್ಲಿ ಪಾಪಿಸ್ತಾನ

ಮಧ್ಯಾಹ್ನ 2.25ರಿಂದ 4ಗಂಟೆವರೆಗೆ ಕವಿಗೋಷ್ಠಿ-4 ನಡೆಯಲಿದೆ. ಕವಿ, ನಾಟಕಕಾರ ಡಾ.ಬೇಲೂರು ರಘುನಂದನ್‌ ಆಶಯ ನುಡಿಗಳನ್ನಾಡಲಿದ್ದು, ಕವಿ ಸುಬ್ಬು ಹೊಲೆಯಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4ರಿಂದ 5ರವರೆಗೆ ಸಮ್ಮೇಳಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದ್ದು, 5 ಗಂಟೆಗೆ ನಿರ್ಣಯ ಮಂಡನೆ ಆಗಲಿದೆ. ಸಂಜೆ 6.30ರಿಂದ 7 ಗಂಟೆವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 7ರಿಂದ 8.30ರವೆಗೆ ʼದೋಪ್ದಿʼ ನಾಟಕ ಪ್ರದರ್ಶನ ಇರಲಿದೆ.

Exit mobile version