ಬೆಂಗಳೂರು: ದಿಪಾವಳಿ ಹಬ್ಬದ ದಿನ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಆಟೋ ಚಾಲಕರಿಗೆ ದಂಡ ಹಾಕುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕರೆದ ಜಾಗಕ್ಕೆ ಹೋಗದಿರುವುದು, ಮೀಟರ್ ಹಾಕದೆ ದುಪ್ಪಟ್ಟು ಹಣ ವಸೂಲಿ ಹಾಗೂ ಕುಡಿದು ಚಾಲನೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ (Special Drive) ನಡೆಸಿರುವ ಪೊಲೀಸರು ಒಟ್ಟು 1,116 ಪ್ರಕರಣ ದಾಖಲಿಸಿ, ಆಟೋ ಚಾಲಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ನಗರದ ಎಲ್ಲ ಕಡೆ ಸ್ಪೇಷಲ್ ಡ್ರೈವ್‌ಗೆ ಸಂಚಾರ ಪೊಲೀಸ್ ಆಯುಕ್ತ ರವಿಕಾಂತೇಗೌಡ ಸೂಚನೆ ನೀಡಿದ ಹಿನ್ನೆಲೆಯಲ್ಲಿ 44 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಒಟ್ಟು 582 ಆಟೋಗಳಿಗೆ ಕನಿಷ್ಠ 500 ರೂಪಾಯಿ ದಂಡ ವಿಧಿಸಿದ್ದಾರೆ. ಪ್ರಯಾಣಿಕರು ಕರೆದಲ್ಲಿ ಹೋಗದಿದ್ದಕ್ಕೆ 270 ಆಟೋಗಳಿಗೆ, ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆ 312 ಆಟೋಗಳಿಗೆ, ಸಿಗ್ನಲ್ ಜಂಪ್ ಸೇರಿ ಇನ್ನಿತರ ನಿಯಮ ಉಲ್ಲಂಘನೆಯಡಿಯಲ್ಲಿ 532 ಕೇಸ್ ಸೇರಿ ಒಟ್ಟು 1,116 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. ಒಟ್ಟಾರೆ ಪ್ರಕರಣದಲ್ಲಿ 312 ಆಟೋಗಳನ್ನು ಜಪ್ತಿ ಮಾಡಲಾಗಿದ್ದು, 307 ಆಟೋಗಳಿಗೆ ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ.
ಕುಡಿದ ಮತ್ತಿನಲ್ಲಿ ಚಾಲನೆ
ಕುಡಿದ ಮತ್ತಿನಲ್ಲಿ ಪ್ರಯಾಣಿಕರ ಜೀವದ ಜತೆ ಕೆಲ ಆಟೋ ಚಾಲಕರು ಚೆಲ್ಲಾಟವಾಡುತ್ತಿರುವುದು ಕಂಡುಬಂದಿದೆ. ಆಟೋ ಚಾಲಕನೊಬ್ಬ ಕುಡಿದು ಚಾಲನೆ ಮಾಡಿ, ಮೀಟರ್ ಮೇಲೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕುಡಿದು ಚಾಲನೆ ಮಾಡುತ್ತಿದ್ದೀರಾ ಎಂದು ಕೇಳಿದಾಗ ಚಾಲಕನೊಬ್ಬ ಹೌದು ಎಂದು ಉತ್ತರಿಸಿದ್ದಾನೆ. ಈ ವೇಳೆ ಕಬ್ಬನ್ ಪಾರ್ಕ್ ಸಂಚಾರ ಠಾಣಾಧಿಕಾರಿ ಗೋಪಿನಾಥ್ ಅವರು ಪ್ರಯಾಣಿಕರ ಸೋಗಿನಲ್ಲಿ ಆಟೋ ಚಾಲಕ ಕುಡಿದಿರುವುದನ್ನು ಕಂಡು ಹಿಡಿದು ಚಾಲಕನ ವಿರುದ್ಧ ಕೇಸ್ ದಾಖಲಿಸಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ | ಅಪಾಯಕಾರಿ ಮಾಂಜಾ ಮಾರಾಟ ಕಂಡರೆ ಈ ನಂಬರ್‌ಗೆ ಕರೆ ಮಾಡಿ, ಬಹುಮಾನ ಗಳಿಸಿ!