Site icon Vistara News

ಶ್ರೀ ಶಾರದಾ ಸಂಗೀತ ಸಭಾದ 21ನೇ ವಾರ್ಷಿಕೋತ್ಸವ; ಫೆ. 25ವರೆಗೆ ವಿಶೇಷ ಸಂಗೀತ ಕಛೇರಿ

Music festival

ಬೆಂಗಳೂರು: ಶ್ರೀ ಶಾರದಾ ಸಂಗೀತ ಸಭಾದ 21ನೇ ವಾರ್ಷಿಕೋತ್ಸವ ಸಂಭ್ರಮವನ್ನು ಫೆಬ್ರವರಿ 23, 24 ಹಾಗೂ 25ರಂದು ಹನುಮಂತನಗರದ ಪಿಇಎಸ್ ಕಾಲೇಜು ಹಿಂಭಾಗದ ಸ್ವಾಮಿ ವಿವೇಕಾನಂದ ವಿದ್ಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಭಾಗವಾಗಿ ಸಂಗೀತ ಕಛೇರಿ ಮತ್ತು ಗಣ್ಯ ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ, ಹಿರಿಯ ಮೃದಂಗ ವಿದ್ವಾಂಸ ಟಿ.ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಫೆ. 23ರ ಸಂಜೆ 6ಕ್ಕೆ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಅವರು ಉತ್ಸವಕ್ಕೆ ಚಾಲನೆ ನೀಡಿದ್ದು, ಸಂಸದ ತೇಜಸ್ವಿ ಸೂರ್ಯ ಶಾಸಕ ಗರುಡಾಚಾರ್ ಅತಿಥಿಗಳಾಗಿ ಆಗಮಿಸಿದ್ದರು.

ಇದೇ ಸಂದರ್ಭ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಮತ್ತು ಅನುಗ್ರಹ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್, ಹಿರಿಯ ತಬಲಾ ಕಲಾವಿದ ಗುಂಡಶಾಸ್ತ್ರಿ ಅವರನ್ನು ಸನ್ಮಾನಿಸಲಾಗುತ್ತದೆ. ವಿದುಷಿ ರಮಾಮಣಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಸಿಕೊಟ್ಟಿದ್ದಾರೆ. ಪಕ್ಕವಾದ್ಯ ಕಲಾವಿದರಾಗಿ ವಿದುಷಿ ನಳಿನಾ ಮೋಹನ್ ಪಿಟೀಲು, ಅರ್ಜುನ ಕುಮಾರ್ ಮೃದಂಗ ಮತ್ತು ರಂಗನಾಥ ಚಕ್ರವರ್ತಿ ಘಟ ಸಹಕಾರ ನೀಡಿದರು.

ಫೆ. 24ರ ಶನಿವಾರ ಸಂಜೆ 6ಕ್ಕೆ ಬಿಬಿಎಂಪಿ ಯಲಹಂಕ ವಲಯ ಆಯುಕ್ತ ಕರಿಗೌಡ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಎನ್. ಚಲವಾದಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿರಿಯ ಸಂಗೀತ ಶಾಸ್ತ್ರಜ್ಞೆ ವಿದುಷಿ ಡಾ. ಮೀರಾ ರಾಜಾರಾಮ್ ಪ್ರಾಣೇಶ್ ಅವರಿಗೆ ಮತ್ತು ಖ್ಯಾತ ವೀಣಾ ಕಲಾವಿದೆ ರೇವತಿ ಕಾಮತ್ ಅವರಿಗೆ ಸನ್ಮಾನಿಸಲಾಗುವುದು. ನಂತರ ಖ್ಯಾತ ಗಾಯಕ ವಿದ್ವಾನ್ ಸಂಪಗೋಡು ಎಸ್. ವಿಘ್ನರಾಜ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನವಿದೆ. ಪಕ್ಕ ವಾದ್ಯದಲ್ಲಿ ವಿದ್ವಾಂಸರಾದ ಬಿ.ಕೆ. ರಘು ಪಿಟೀಲು, ಬಿ.ಸಿ. ಮಂಜುನಾಥ್ ಮೃದಂಗ ಮತ್ತು ಬಿ. ರಾಜಶೇಖರ್ ಮೋರ್ಸಿಂಗ್ ಸಹಕಾರ ನೀಡಿ ಮಾಧುರ್ಯ ಹೆಚ್ಚಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಭಾನುವಾರ ಫೆ. 25ರ ಸಂಜೆ 6ಕ್ಕೆ ಬಿಬಿಎಂಪಿ ನಿಯಂತ್ರಕರಾದ ಕೆ . ಸುಬ್ರಮಣ್ಯ ಮತ್ತು ಕೆಎಎಸ್ ಅಧಿಕಾರಿ ಈ. ಚೆನ್ನಗಂಗಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಖ್ಯಾತ ಮೃದಂಗ ವಿದ್ವಾಂಸ ವಾಸುದೇವ ರಾವ್ ಮೋಹಿತೆ ಮತ್ತು ಸಂಗೀತ ಪ್ರವರ್ತಕ ಸಂತೋಷ್ ಅವರಿಗೆ ಸನ್ಮಾನಿಸಲಾಗುವುದು. ನಂತರ ಹಿರಿಯ ವಿದ್ವಾಂಸ ಟಿ.ಎಸ್. ಕೃಷ್ಣಮೂರ್ತಿ ಮತ್ತು ಶಿಷ್ಯರಿಂದ (12 ಜನ ಕಲಾವಿದರ ) ವಯೋಲಿನ್ ವೈಭವ ಪ್ರಸ್ತುತಿ ಇದೆ. ಹಿರಿಯ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ (ಶಿವು) ಮತ್ತು ತಂಡದಿಂದ ತಾಳವಾದ್ಯಗಳ ಬೆಂಬಲ ವಿಶೇಷವಾಗಿ ಸಂಯೋಜನೆಗೊಂಡಿದೆ ಎಂದು ವಿದ್ವಾಂಸ ಟಿ.ಎನ್. ಶಶಿಕುಮಾರ್ ವಿವರಣೆ ನೀಡಿದ್ದಾರೆ.

ನಮ್ಮ ನಾಡಿನ ವಿದ್ವಾಂಸರಿಗೆ ವೇದಿಕೆ

ಮೂರು ದಿನಗಳ ಸಂಗೀತೋತ್ಸವದಲ್ಲಿ ನಮ್ಮ ನಾಡಿನ ಗಾಯಕರು, ವಿದ್ವಾಂಸರು ಮತ್ತು ಕಲಾವಿದರಿಗೆ ವಿಶೇಷವಾದ ವೇದಿಕೆಯನ್ನು ಕಲ್ಪಿಸಲಾಗಿದೆ. ಹೊರನಾಡಿನ ಕಲಾವಿದರನ್ನು ಬೆಂಬಲಿಸುವುದಕ್ಕಿಂತ ಮೊದಲು ನಾವು ನಮ್ಮ ನೆಲದ ಕಲಾವಿದರನ್ನು ಗೌರವಿಸುವುದು, ಪ್ರೋತ್ಸಾಹಿಸುವುದು ಮತ್ತು ಅವರಿಗೆ ವೇದಿಕೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. 20 ವರ್ಷಗಳಿಂದಲೂ ನಾವು ಇದೇ ಪದ್ಧತಿ ಅನುಸರಿಸಿಕೊಂಂಡು ಬಂದಿದ್ದೇವೆ ಎಂದು ಶಾರದಾ ಸಂಗೀತ ಸಭಾದ ಕಾರ್ಯದರ್ಶಿ, ವಿದ್ವಾನ್ ಎಸ್. ಪ್ರಶಾಂತ್ ಹೇಳಿದ್ದಾರೆ.

ಇದನ್ನೂ ಓದಿ | Farmers Protest: ಫೆ.29ರವರೆಗೆ ರೈತರ ನಡಿಗೆ ಸ್ತಬ್ಧ, ಗಡಿಯಲ್ಲಿ ಧರಣಿ ಮುಂದುವರಿಕೆ

ಸುಮುಖ ನೀಡಿದ ಸಂಗೀತ ಅನುಗ್ರಹ

ಚಾಮರಾಜಪೇಟೆ ರಾಘವೇಂದ್ರ ಕಾಲೋನಿಯ ಮನೆಯೇ ಮಂದಿರವಾಗಿದೆ. ಅಲ್ಲಿ ಗಣಪ ಒಡಮೂಡಿದ ಸನ್ನಿಧಿ ಇದೆ. ಅವನ ಸಂಗೀತ ಸೇವೆಗೆ ಶಕ್ತಿ ಶಾರದೆಯೇ ನೆಲೆಸಿದ್ದಾಳೆ. ಹೌದು. ಇದೇ “ಸುಮುಖ”ನ ನೆಲೆ. ಅಂತಾರಾಷ್ಟ್ರೀಯ ಖ್ಯಾತಿಯ ಮೃದಂಗ ಕಲಾವಿದ ಶಶಿಕುಮಾರ್ ಅವರು ತಮ್ಮ ವಾದ್ಯ ಶೃತಿ ಮಾಡಲು ಬಳಸುತ್ತಿದ್ದ ಗುಂಡು ಕಲ್ಲಿನಲ್ಲೇ ಗಣಪ ಒಡಮೂಡಿ 4 ದಶಕವೇ ಕಳೆದಿದೆ. ಈತನೇ ಸುಮುಖ. ಕೇವಲ ಕುಟುಂಬದ ವರಿಗೆ ಮಾತ್ರವಲ್ಲ, ಕಷ್ಟ ಎಂದು ಬಂದವರಿಗೆಲ್ಲಾ ಅನುಗ್ರಹ ನೀಡಿದ್ದಾನೆ. ಈತನ ನಿತ್ಯ ಪೂಜೆಯಲ್ಲಿ ತೊಡಗಿದ್ದರಿಂದಲೇ ವಿದ್ವಾನ್ ಶಶಿ ಕುಮಾರ್ ಮೃದಂಗ ವಾದನದಲ್ಲಿ ಲೋಕ ವಿಖ್ಯಾತರಾದರು. ನಂತರ ಶ್ರೀ ಶಾರದಾ ಸಂಗೀತ ಸಭಾ ಸ್ಥಾಪಿಸಿದರು. ಅವರು ಬೆಳೆದಂತೆ ಸಭಾ ಕೂಡಾ ಬೆಳಗಿತು. ಸಂಸ್ಥೆಯು ಪ್ರತಿ ವರ್ಷ ಸಂಗೀತ ಉತ್ಸವ ಸಂಗೀತ ಸಮಾರಾಧನೆ ಮಾಡಿ ರಂಜಿಸಿತು. ಅದರಂತೆ ಈ ಬಾರಿಯೂ ಫೆಬ್ರವರಿ 23, 24 ಹಾಗೂ 25ರಂದು ಸಂಗೀತ ಕಚೇರಿ ಆಯೋಜನೆ ಮಾಡಲಾಗಿದೆ.

Exit mobile version