Site icon Vistara News

ನಾಳೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 6 ಕೃತಿಗಳ ಬಿಡುಗಡೆ

book release

ಬೆಂಗಳೂರು: ನಾಳೆ (ಭಾನುವಾರ, ಡಿ.25) ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆರು ಕೃತಿಗಳು ಬಿಡುಗಡೆಯಾಗಲಿವೆ.

ಕೀರ್ತಿಶೇಷ ಟಿ.ಕೆ.ಅನಂತನಾರಾಯಣ ಅವರ ಮೂರು ಕೃತಿಗಳು ಬೆಳಗ್ಗೆ ೧೦ ಗಂಟೆಗೆ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಟಿ.ಕೆ.ಅನಂತನಾರಾಯಣ ಅವರು ರಚಿಸಿದ ʻಗಾದೆಗಳ ಗಣಿʼ, ʻವಸ್ತ್ರವಿದ್ಯಾ ಶಾಸ್ತ್ರ, ಭಾಗ ಒಂದು– ಸೂತ್ರೀಕರಣ, ಭಾಗ ಎರಡು-ವಸ್ತ್ರೀಕರಣʼ ಹಾಗೂ ʻಕನ್ನಡ ಕವಿ ಕಾವ್ಯ ಚರಿತೆʼ ಎನ್ನುವ ಮೂರು ಅಪರೂಪದ ಗ್ರಂಥಗಳು ಲೋಕಾರ್ಪಣೆಯಾಗಲಿವೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ, ನಾಡೋಜ ಡಾ. ಹಂಪ ನಾಗರಾಜಯ್ಯ, ಕೆ.ವಿ.ನಾಗರಾಜು, ಜಿ.ವಿ. ನಾಗರಾಜ, ರಾಮಲಿಂಗ ಶೆಟ್ಟಿ ಭಾಗವಹಿಸಲಿದ್ದಾರೆ.

ಹಿರಿಯ ಸಾಹಿತಿ ಡಾ. ಪದ್ಮಿನಿ ನಾಗರಾಜು ಅವರು ರಚಿಸಿದ ಮೂರು ಕೃತಿಗಳು ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಸಂಜೆ ೪ ಗಂಟೆಗೆ ಬಿಡುಗಡೆಯಾಗಲಿವೆ. ವಿಮರ್ಶಾ ಲೇಖನಗಳ ಸಂಕಲನ “ಕೋಣೆಯಾಚೆಗಿನ ಆಕಾಶ”, ಮಹಿಳಾಪರ ಚಿಂತನೆಗಳ ಸಂಕಲನ “ಎದೆಗೆ ಬೆಂಕಿ ಬಿದ್ದಾಗಿನ ಬೆಳಕು” ಹಾಗೂ ಲೇಖನಗಳ ಕೃತಿ “ಅನಾವರಣ”ಗಳನ್ನು ಬೆಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡಪ್ರಭ ಪುರವಣಿಯ ಪ್ರಧಾನ ಸಂಪಾದಕ ಜೋಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಭಾಗವಹಿಸಲಿದ್ದಾರೆ. ವಸಂತ ಪ್ರಕಾಶನ, ವಿಕಾಸ ಪ್ರಕಾಶನ ಹಾಗೂ ನಿವೇದಿತ ಪ್ರಕಾಶನ ಕೃತಿಗಳನ್ನು ಪ್ರಕಟಿಸಿವೆ.

ಇದನ್ನೂ ಓದಿ | Puneeth Rajkumar | ʻನೀನೆ ರಾಜಕುಮಾರʼ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್

Exit mobile version